ಮುಂಗಾರು ಅಬ್ಬರ ಹೆಚ್ಚಾಗಿದ್ದು, ಜುಲೈ 1ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಜುಲೈ 1ರವರೆಗೆ ಹೈ ಅಲರ್ಟ್ ಘೋಷಿಸಿದೆ. ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜುಲೈ 1ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂಗಾರು ಅತ್ಯಂತ ತೀವ್ರವಾಗಿರಲಿದೆ. ಈ ಭಾಗದಲ್ಲಿ ‘ಅತ್ಯಂತ ಭಾರೀ ಮಳೆ’ ಆಗುವ ಮುನ್ಸೂಚನೆ ಇದ್ದು, ಕರಾವಳಿಯುದ್ದಕ್ಕೂ ಬಿರುಗಾಳಿಯ ವೇಗ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಇದನ್ನೂ ಓದಿ: ಚುರುಕಾಗಲಿದೆ ಮುಂಗಾರು ಮಳೆ ಅಬ್ಬರ; ಕರ್ನಾಟಕದಲ್ಲಿ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ
ಪ್ರತಿ ವರ್ಷದಂತೆ ಈ ವರ್ಷವೂ ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಕೇವಲ ಸಾಂಪ್ರದಾಯಿಕ ಅಥವಾ ನಾಡದೋಣಿಗಳಿಗೆ ಮಾತ್ರ ನೀರಿಗಿಳಿಯುತ್ತದೆ. ಆದರೆ ಸಮುದ್ರ ಅಲೆಗಳ ಅಬ್ಬರ ಇರಲಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಐಎಂಡಿ ಮುನ್ನೆಚ್ಚರಿಕೆ ನೀಡಿದೆ.
ಇನ್ನು ಜೂನ್ 29 ರಿಂದ ಜುಲೈ 1ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಒಳಗೊಂಡಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಲಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಭಾರೀ ಮಳೆಯಿಂದ ಅತ್ಯಂತ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 28ರಿಂದಲೇ ಮಳೆಯ ತೀವ್ರತೆ ಆರಂಭವಾಗಲಿದೆ.
ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಆರಂಭದ ದಿನಗಳಲ್ಲಿ ಸಾಧಾರಣ ಮಳೆ ಹಾಗೂ ಮೇಲ್ಮೈ ಗಾಳಿ ಇರಲಿದ್ದರೂ, ತಿಂಗಳ ಕೊನೆಯಲ್ಲಿ ಮಳೆ ಚುರುಕಾಗಲಿದೆ. ಜೂನ್ 29 ರಿಂದ ಜುಲೈ 2ರವರೆಗೆ ಬೆಳಗಾವಿ, ಧಾರವಾಡ, ಹಾವೇರಿ, ಕಲ್ಬುರ್ಗಿ ಮತ್ತು ಬಾಗಲಕೋಟೆ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.




