ಶಿರಸಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ವೈಟ್‌ಬೋರ್ಡ್ ನೋಂದಣಿ ಹೊಂದಿರುವ ಖಾಸಗಿ ಬೈಕ್‌ಗಳ ಮೂಲಕ ರ‍್ಯಾಪಿಡೋ ಆ್ಯಪ್ ಬಳಸಿ ಬಾಡಿಗೆಯನ್ನು ಹೊಡೆಯುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಆಟೋ ಚಾಲಕರ-ಮಾಲಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶಿರಸಿ ಆಟೋ ಚಾಲಕರ ಸಂಘ, ಇಂತಹ ಸೇವೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿವೆ.
ವೈಟ್‌ಬೋರ್ಡ್ ನೋಂದಣಿ ಹೊಂದಿರುವ ಖಾಸಗಿ ಬೈಕ್‌ಗಳಲ್ಲಿ ಬಾಡಿಗೆ ಆಧಾರಿತ ಪ್ರಯಾಣಿಕರ ಸೇವೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ವಿಷಯವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಶಿರಸಿ ವ್ಯಾಪ್ತಿಯಲ್ಲಿ ವೈಟ್‌ಬೋರ್ಡ್ ಬೈಕ್‌ಗಳ ಮೂಲಕ ರ‍್ಯಾಪಿಡೋ ಸೇವೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಅಪರೂಪದ ಬಿಳಿ ಕಾಗೆ ಪ್ರತ್ಯಕ್ಷ: ಶಾಲಾ ಮಕ್ಕಳಲ್ಲಿ ಮೂಡಿದ ಕುತೂಹಲ
ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಆಟೋರಿಕ್ಷಾ ಸೇವೆ ನಡೆಸುತ್ತಿರುವ ಚಾಲಕರ ಜೀವನೋಪಾಯದ ಮೇಲೆ ಇಂತಹ ಸೇವೆಗಳು ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಸಂಘವು ಅಭಿಪ್ರಾಯಪಟ್ಟಿದೆ. ಜೊತೆಗೆ, ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳನ್ನು ಒಳಗೊಂಡಿರುವ ಶಿರಸಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಇಂತಹ ಸೇವೆಗಳ ಕುರಿತು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲೆ ಹಾಗೂ ತಾಲೂಕಿನಲ್ಲಿ ಕಾನೂನುಬಾಹಿರವಾಗಿ ಬಾಡಿಗೆ ಸೇವೆ ನಡೆಸುತ್ತಿರುವ ಬೈಕ್‌ಗಳ ಮಾಲೀಕರು ಮತ್ತು ಸವಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ನಿಯಮ ಪಾಲಿಸದವರ ವಾಹನಗಳನ್ನು ವಶಪಡಿಸಿಕೊಳ್ಳುವಂತೆ ಸಂಘದ ಪ್ರಮುಖರು ಮನವಿ ಸಲ್ಲಿಸಿದರು. ಶಿರಸಿ ಸಿಪಿಐ ಸಂಪತ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿ ಪ್ರತಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಕಾರವಾರ, ಶಿರಸಿ, ಹೊನ್ನಾವರ ಮತ್ತು ದಾಂಡೇಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆಟೋರಿಕ್ಷಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಶಿರಸಿ ಆಟೋ ಸಂಘದ ಪ್ರಮುಖರಾದ ಮಹೇಶ್ ಪಟಗಾರ, ಹಫೀಜ್, ಭಾಸ್ಕರ್ ಕುಂದರಗಿ, ಅಶೋಕ ಶೆಟ್ಟಿ, ಅರುಣ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.




