ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯದಲ್ಲಿ ಅನ್ಯಾಯ; ಮುಸ್ಲಿಂ ಸಮಾವೇಶದ ವರದಿ ಹೇಳಿದ್ದೇನು?

Date:

ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಠ 3 ಮುಸ್ಲಿಂ ಪ್ರತಿನಿಧಿಗಳಿರುವುದನ್ನು ಕಾಂಗ್ರೆಸ್ ಮತ್ತು ಸರ್ಕಾರವು ಖಚಿತಪಡಿಸಿಕೊಳ್ಳಬೇಕು ಎಂದು ಮುಸ್ಲಿಂ ಸಮಾವೇಶದ ವರದಿ ಆಗ್ರಹಿಸಿದೆ

ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಆಗ್ರಹವು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂದಿತು. ಆದರೆ, ಸಮುದಾಯದ ಒತ್ತಾಯಕ್ಕೆ ಕಿವಿಗೊಡದ ಕಾಂಗ್ರೆಸ್, ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿತು. ಚುನಾವಣೆಯಲ್ಲಿ ಗೆದ್ದರೂ ಮತ ಪ್ರಮಾಣದಲ್ಲಿ ಭಾರೀ ಇಳಿಕೆಯನ್ನು ಕಾಂಗ್ರೆಸ್ ಕಂಡಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಪರ ಮತಹಾಕಿರುವ ಮುಸ್ಲಿಮರಿಗೆ, ಸಮುದಾಯವು ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಾದರೂ ಟಿಕೆಟ್ ನೀಡಬೇಕೆಂಬ ಆಗ್ರಹ ಸಹಜ ಮತ್ತು ನ್ಯಾಯೋಚಿತವಾಗಿತ್ತು. ಮುಸ್ಲಿಮರ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಪ್ರಾತಿನಿಧ್ಯದಲ್ಲಿ ತೀರಾ ಹಿಂದುಳಿದಿರುವಿಕೆ ಇದೆ ಎಂಬುದು ಚರ್ಚೆಯ ಮುನ್ನೆಲೆಗೆ ಬಂದಿತು. ಮೇ 16ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಸಮಾವೇಶ ಬಿಡುಗಡೆಗೊಳಿಸಿರುವ ‘ಕಾಂಗ್ರೆಸ್ ಸರ್ಕಾರದ ಆಶ್ವಾಸನೆಗಳು, ಅನುಷ್ಠಾನದಲ್ಲಿ ಕೊರತೆಗಳ ಕುರಿತ ವರದಿ ಹಾಗೂ ಆಗ್ರಹಗಳ ಪಟ್ಟಿ’ ಕೂಡ ಪ್ರಾತಿನಿಧ್ಯದ ವಿಚಾರದತ್ತ ವಿಶೇಷ ಗಮನ ಕೊಟ್ಟಿದೆ.

- Advertisement -

2023ರ ವಿಧಾನಸಭಾ ಚುನಾವಣೆಯ ವೇಳೆ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನೀಡಿದ್ದ ಭರವಸೆಗಳ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿರುವ ಈ ವರದಿಯು, ಪಕ್ಷ ನೀಡಿದ್ದ ಪ್ರಮುಖವಾದ ಆಶ್ವಾಸನೆಗಳನ್ನು ಕೇಂದ್ರೀಕರಿಸಿದೆ. ಕೋಮುದ್ವೇಷ ಬಿತ್ತುವ ಸಂಘಟನೆಗಳಿಗೆ ಕಡಿವಾಣ, ಹಿಜಾಬ್ ಸರ್ಕಾರಿ ಆದೇಶ ಹಿಂಪಡೆಯುವಿಕೆ,  ಗೋಹತ್ಯೆ ನಿಷೇಧ ಕಾಯ್ದೆ ಸೃಷ್ಟಿಸಿರುವ ನಷ್ಟ ಮತ್ತು ತಿದ್ದುಪಡಿಯ ಅಗತ್ಯತೆ, ಮುಸ್ಲಿಂ 2ಬಿ ಮೀಸಲಾತಿಯ ಮರುಸ್ಥಾಪನೆ, ಮತಾಂತರ ನಿಷೇಧ ಕಾಯ್ದೆಯ ರದ್ದತಿಯಲ್ಲಿ ವಿಳಂಬ, ಅಲ್ಪಸಂಖ್ಯಾತರಿಗೆ 10,000 ಕೋಟಿ ರೂ.ಗಳ ಭರವಸೆ, ವಕ್ಫ್ ಆಸ್ತಿಗಳ ಸಂರಕ್ಷಣೆ, ಜಾತಿ ಸಮೀಕ್ಷೆ ಬಿಡುಗಡೆಯ ಅಗತ್ಯತೆ, ಶಿಕ್ಷಣಕ್ಕೆ ಸಿಗಬೇಕಾದ ಮತ್ತಷ್ಟು ಪ್ರೋತ್ಸಾಹ ಸೇರಿದಂತೆ ಮುಸ್ಲಿಮರು ಪ್ರಾತಿನಿಧ್ಯದಲ್ಲಿ ಎದುರಿಸುತ್ತಿರುವ ಅಸಮಾನತೆಯ ಕುರಿತು ಈ ವರದಿ ಬೆಳಕು ಚೆಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಪ್ರಾತಿನಿಧ್ಯದ ಪ್ರಶ್ನೆ

“ಕರ್ನಾಟಕದ ಮುಸ್ಲಿಂ ಸಮುದಾಯವು ರಾಜ್ಯದ ಒಟ್ಟು ಜನಸಂಖ್ಯೆಯ ಸರಿಸುಮಾರು ಶೇ.13 ರಷ್ಟಿದೆ. 224 ಸ್ಥಾನಗಳನ್ನು ಹೊಂದಿರುವ ವಿಧಾನಸಭೆಯಲ್ಲಿ, ಶೇ.13 ಜನಸಂಖ್ಯೆಯ ಪಾಲಿಗೆ ಪ್ರತಿಯಾಗಿ ಮುಸ್ಲಿಂ ಶಾಸಕರು ಸರಿಸುಮಾರು 4.4%ರಷ್ಟು ಪ್ರಾತಿನಿಧ್ಯವನ್ನು ಮಾತ್ರ ಹೊಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 15 ಮುಸಲ್ಮಾನರಿಗೆ ಟಿಕೆಟ್ ನೀಡಿತ್ತು. ಅದರಲ್ಲಿ 9 ಮಂದಿ ಗೆದ್ದು ಬಂದರು. ವಿಧಾನ ಪರಿಷತ್ತಿನಲ್ಲಿ, ಏಪ್ರಿಲ್ 2026ರವರೆಗಿನ ಲಭ್ಯವಿರುವ ರಾಜಕೀಯ ಅಂಕಿಅಂಶಗಳ ಪ್ರಕಾರ 75 ಸ್ಥಾನಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯವು 4 ಸ್ಥಾನಗಳಷ್ಟಿದೆ. ಇದು ಮುಸ್ಲಿಂ ಜನಸಂಖ್ಯೆಯ ಅನುಪಾತದ ಪ್ರಾತಿನಿಧ್ಯಕ್ಕಿಂತ ತೀರಾ ಕಡಿಮೆ” ಎಂದು ವರದಿ ಆಕ್ಷೇಪಿಸಿದೆ.

“ಏಳು ಶಾಸಕರ ಕೋಟಾದ ವಿಧಾನ ಪರಿಷತ್ ಸ್ಥಾನಗಳು 30 ಜೂನ್ 2026 ರಂದು ತೆರವಾಗಲಿದ್ದು, ಹೆಚ್ಚುವರಿಯಾಗಿ ಐದು ಸ್ಥಾನಗಳನ್ನು ಸರ್ಕಾರದ ನಾಮನಿರ್ದೇಶನಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಈ 12 ಖಾಲಿ ಸ್ಥಾನಗಳಲ್ಲಿ, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಸರಿಸುಮಾರು 9 ಸ್ಥಾನಗಳ ಮೇಲೆ ಪ್ರಭಾವ ಹೊಂದುವ ನಿರೀಕ್ಷೆಯಿದೆ. ಇದು ದೀರ್ಘಕಾಲದ ಪ್ರಾತಿನಿಧ್ಯದ ಕೊರತೆಯನ್ನು ನೀಗಿಸಲು ಒಂದು ದೊಡ್ಡ ಅವಕಾಶವನ್ನು ಸೃಷ್ಟಿಸಿದೆ” ಎಂದಿರುವ ವರದಿಯು, “ಶಾಸಕರ ಕೋಟಾ ಸ್ಥಾನಗಳು ಮತ್ತು ಸರ್ಕಾರದ ನಾಮನಿರ್ದೇಶನಗಳು ಸೇರಿದಂತೆ ಮುಂಬರುವ 12 ವಿಧಾನ ಪರಿಷತ್ ಸ್ಥಾನಗಳ ನೇಮಕಾತಿ ಹಾಗೂ ಚುನಾವಣೆಗಳಲ್ಲಿ ಕನಿಷ್ಠ 3 ಮುಸ್ಲಿಂ ಪ್ರತಿನಿಧಿಗಳಿರುವುದನ್ನು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಪರಿಷತ್ತಿನ 2026-27ರ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಪದವೀಧರರ ಕ್ಷೇತ್ರಗಳ ಮೂಲಕವೂ ವಿಶಾಲವಾದ ಪ್ರಾತಿನಿಧ್ಯಕ್ಕಾಗಿ ಶ್ರಮಿಸಬೇಕು” ಎಂದು ಆಗ್ರಹಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಪ್ರಾತಿನಿಧ್ಯ ನೀಡುವ ಅಗತ್ಯತೆಯನ್ನು ಪ್ರಸ್ತಾಪಿಸಿರುವ ವರದಿಯು, “ಮುಸ್ಲಿಂ ಮತದಾರರು ಶೇ.30 ಕ್ಕಿಂತ ಹೆಚ್ಚಿರುವ ಕ್ಷೇತ್ರಗಳಲ್ಲಿ, ಟಿಕೆಟ್ ಹಂಚಿಕೆಯನ್ನು ಗಂಭೀರ ಪ್ರಾತಿನಿಧ್ಯದ ಹೊಣೆಗಾರಿಕೆಯಾಗಿ ಪರಿಗಣಿಸಬೇಕು ಮತ್ತು GBAಯಲ್ಲಿ ಮುಸ್ಲಿಂ ಸಾಂದ್ರತೆಯು ಶೇ.30 ಮತಗಳನ್ನು ಮೀರಿ ನಿರ್ಣಾಯಕ ಪಾತ್ರವನ್ನು ವಹಿಸುವಲ್ಲಿ, ಪ್ರಾತಿನಿಧ್ಯವನ್ನು ಸಾಂಸ್ಥಿಕವಾಗಿ ಖಚಿತಪಡಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಗಳಲ್ಲಿ ಕನಿಷ್ಠ 21 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಜನಸಂಖ್ಯಾ ಹಾಗೂ ಚುನಾವಣಾ ಬಲವು ಪ್ರಾತಿನಿಧ್ಯವನ್ನು ಸಮರ್ಥಿಸುವ ಜಿಬಿಎ ವ್ಯಾಪ್ತಿಯ ಸುಮಾರು 60 ವಾರ್ಡ್ಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು” ಎಂದಿದೆ.

ಸಾರ್ವಜನಿಕ ಸಂಸ್ಥೆಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯದ ಕೊರತೆ ಇರುವುದನ್ನು ವರದಿ ಪ್ರಸ್ತಾಪಿಸಿದೆ. “ಕರ್ನಾಟಕ ನಾಗರಿಕ ಸೇವೆಗಳು, ಪೊಲೀಸ್ ಸೇವೆಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರಿ ವೈದ್ಯಕೀಯ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಮತ್ತು ಹಿರಿಯ ಸಾರ್ವಜನಿಕ ನೇಮಕಾತಿಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯವು ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಬಹಳ ಕಡಿಮೆಯಿದೆ. ಈ ಅಲ್ಪಪ್ರಾತಿನಿಧ್ಯವು ಕೇವಲ ನೇಮಕಾತಿ ಕೇಡರ್ಗಳಿಗೆ ಮಾತ್ರ ಸೀಮಿತವಾಗಿಲ್ಲ; ಶಿಕ್ಷಣ, ಆರೋಗ್ಯ ರಕ್ಷಣೆ, ಕಲ್ಯಾಣ, ಸಾರ್ವಜನಿಕ ಮೂಲಸೌಕರ್ಯ ಮತ್ತು ಕುಂದುಕೊರತೆ ನಿವಾರಣೆಯನ್ನು ನೇರವಾಗಿ ರೂಪಿಸುವ ಸಂಸ್ಥೆಗಳ ನಾಯಕತ್ವದಲ್ಲಿಯೂ ಗೋಚರಿಸುತ್ತದೆ. ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯದಲ್ಲಿ ಗಂಭೀರವಾದ ಅಂತರವು ಕಂಡುಬರುತ್ತದೆ. ಲಭ್ಯವಿರುವ ಸಾರ್ವಜನಿಕ ದಾಖಲೆಗಳ ಪ್ರಕಾರ, ರಾಜ್ಯದ ಪ್ರಮುಖ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಡೀನ್ (Dean), ನಿರ್ದೇಶಕರು (Director), ಡೀನ್-ಕಮ್-ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು (Medical Superintendent) ಮತ್ತು ತತ್ಸಮಾನ ಹಿರಿಯ ಹುದ್ದೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ತೀರಾ ವಿರಳವಾಗಿದೆ. ಬೌರಿಂಗ್ / ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಂತಹ ಪ್ರಮುಖ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಡೀನ್/ ನಿರ್ದೇಶಕರ ಮಟ್ಟದಲ್ಲಿ ಮುಸ್ಲಿಂ ಪ್ರಾತಿನಿಧ್ಯವು ಪ್ರಸ್ತುತ ಕಂಡುಬರುತ್ತಿಲ್ಲ” ಎಂದು ಕಳವಳ ವ್ಯಕ್ತಪಡಿಸಿದೆ.

WhatsApp Image 2026 05 16 at 6.15.39 PM

“ಉನ್ನತ ಶಿಕ್ಷಣದ ನಾಯಕತ್ವದಲ್ಲೂ ಇದೇ ರೀತಿಯ ಕೊರತೆಯು ಗೋಚರಿಸುತ್ತದೆ. ಕುಲಪತಿಗಳ (Vice-Chancellors) ನಡುವೆ ಮುಸ್ಲಿಂ ಪ್ರಾತಿನಿಧ್ಯದ ಕೆಲವು ವಿರಳ ಉದಾಹರಣೆಗಳಿದ್ದರೂ, ಕುಲಪತಿಗಳು, ಕುಲಸಚಿವರು (Registrars), ಸಿಂಡಿಕೇಟ್ ಸದಸ್ಯರು, ಸೆನೆಟ್ ಸದಸ್ಯರು ಮತ್ತು ಹಿರಿಯ ವಿಶ್ವವಿದ್ಯಾನಿಲಯದ ಆಡಳಿತಾಧಿಕಾರಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಗಮನಿಸಿದರೆ ಅದು ಅತ್ಯಂತ ಸೀಮಿತವಾಗಿ ಉಳಿದಿದೆ” ಎಂದು ವರದಿ ವಿವರಿಸಿದೆ.

“ಸಾರ್ವಜನಿಕ ಸಂಸ್ಥೆಗಳಲ್ಲಿನ ಸಮುದಾಯದ ಪ್ರಾತಿನಿಧ್ಯವು ವಿಶ್ವಾಸವನ್ನು ವೃದ್ಧಿಸುವ ವಿಷಯವೂ ಹೌದು ಎಂದು ಸಾಚಾರ್ ಸಮಿತಿಯು ಗುರುತಿಸಿದೆ. ಸಮುದಾಯ ಮತ್ತು ಸರ್ಕಾರದ ನಡುವೆ ನಂಬಿಕೆಯನ್ನು ಬೆಳೆಸಲು ಮುಸ್ಲಿಂ ಸಾಂದ್ರತೆಯಿರುವ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ ಮುಸ್ಲಿಂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಅದು ಶಿಫಾರಸು ಮಾಡಿದೆ. ಕರ್ನಾಟಕ ಸರ್ಕಾರವು ‘ಸೇವಾ ನಿರ್ವಹಣೆಯಲ್ಲಿ ಪ್ರಾತಿನಿಧ್ಯ’ ನೀತಿಯನ್ನು ಕೇವಲ ಪೊಲೀಸಿಂಗ್ಗೆ ಸೀಮಿತಗೊಳಿಸದೆ ಆರೋಗ್ಯ, ರಕ್ಷಣೆ, ಶಿಕ್ಷಣ, ಕಲ್ಯಾಣ ಮತ್ತು ಸ್ಥಳೀಯ ಆಡಳಿತಕ್ಕೂ ವಿಸ್ತರಿಸಬೇಕು” ಎಂದು ವರದಿ ಆಗ್ರಹಿಸಿದೆ.

ವಕ್ಫ್ ಆಸ್ತಿಯ ಸ್ಥಿತಿಗತಿ

ಅನ್ವರ್ ಮಾಣಿಪ್ಪಾಡಿ ಸಮಿತಿ ವರದಿಯ ಪ್ರಕಾರ, ಸುಮಾರು 27,000 ಎಕರೆ ವಕ್ಫ್ ಭೂಮಿಯನ್ನು ಅತಿಕ್ರಮಿಸಲಾಗಿದೆ, ಅಕ್ರಮವಾಗಿ ಮಾರಾಟ ಮಾಡಲಾಗಿದೆ ಅಥವಾ ಅತ್ಯಂತ ಕಡಿಮೆ ದರಕ್ಕೆ ಗುತ್ತಿಗೆ ನೀಡಲಾಗಿದೆ. ಇದರ ಅಂದಾಜು ಮೌಲ್ಯ ರೂ. 2 ಲಕ್ಷ ಕೋಟಿಗಿಂತಲೂ ಅಧಿಕವಾಗಿದೆ. 2025ರ ಸಾರ್ವಜನಿಕ ವರದಿಯ ಪ್ರಕಾರ, ಕರ್ನಾಟಕದಾದ್ಯಂತ 4,000ಕ್ಕೂ ಹೆಚ್ಚು ವಕ್ಫ್ ಅತಿಕ್ರಮಣ ಪ್ರಕರಣಗಳು ದಾಖಲಾಗಿವೆ. ಒಟ್ಟು ವಕ್ಫ್ ಭೂಮಿ ಸುಮಾರು 1,12,860 ಎಕರೆ ಎಂದು ಸೂಚಿಸಲಾಗಿದೆ. ಇದರಲ್ಲಿ 17,969 ಎಕರೆ ಅತಿಕ್ರಮಣಕ್ಕೊಳಗಾಗಿದೆ ಮತ್ತು ಕೇವಲ 24,054 ಎಕರೆ ಮಾತ್ರ ಮಂಡಳಿಯ ನಿಯಂತ್ರಣದಲ್ಲಿದೆ.

“ಅತಿಕ್ರಮಣ, ಅಕ್ರಮ ಮಾರಾಟ, ಅಕ್ರಮ ಗುತ್ತಿಗೆ, ಕಡಿಮೆ ಮೌಲ್ಯದ ಗುತ್ತಿಗೆ, ಮಾಲೀಕತ್ವದ ವಿವಾದ ಮತ್ತು ಅಸಮರ್ಪಕ ಬಳಕೆಯನ್ನು ಒಳಗೊಂಡಿರುವ ‘ರಾಜ್ಯ ವಕ್ಫ್ ಭೂ ಮರುಪಡೆಯುವಿಕೆ ಮಿಷನ್’ (State Waqf Land Recovery Mission) ಪ್ರಾರಂಭಿಸಬೇಕು. 2012ರ ವಕ್ಫ್ ಭೂ ಹಗರಣದ ಕುರಿತು ಶ್ವೇತಪತ್ರವನ್ನು ಪ್ರಕಟಿಸಬೇಕು. ಕಾನೂನುಬದ್ಧ ಅನುಮತಿಯಿಲ್ಲದೆ ಅಕ್ರಮವಾಗಿ ಮಾರಾಟ ಮಾಡಲಾದ, ವರ್ಗಾಯಿಸಲಾದ, ಅಡಮಾನ ಇಡಲಾದ, ಉಡುಗೊರೆಯಾಗಿ ನೀಡಲಾದ, ವಿನಿಮಯ ಮಾಡಲಾದ ಅಥವಾ ಗುತ್ತಿಗೆ ನೀಡಲಾದ ಆಸ್ತಿಗಳನ್ನು ಗುರುತಿಸಲು ಮತ್ತು ಮರುಪಡೆಯಲು ವಕ್ಫ್ ಕಾಯ್ದೆಯ ಸೆಕ್ಷನ್ 51 ಮತ್ತು 52 ಅನ್ನು ಬಳಸಬೇಕು” ಎಂದು ಆಗ್ರಹಿಸಿದೆ.

ಮತಾಂತರ ನಿಷೇಧ ಕಾಯ್ದೆ ವಾಪಸ್ ಯಾವಾಗ?

ಮೂರನೇ ವ್ಯಕ್ತಿಯು ಇನ್ನೊಬ್ಬರ ಖಾಸಗಿ ಆಯ್ಕೆಯನ್ನು ಪ್ರಶ್ನಿಸಲು ಅವಕಾಶ ನೀಡುವಂತೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತ್ತು ಧಾರ್ಮಿಕ ಹಕ್ಕಿಗೆ ಅಡ್ಡಿಪಡಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯಿದೆ- 2022’ (ಮತಾಂತರ ನಿಷೇಧ ಕಾನೂನು) ವಾಪಸ್ ಪಡೆಯುವ ನಿರ್ಧಾರವನ್ನು ಸಂಪುಟ ಸಭೆ 2023ರಲ್ಲೇ ಕೈಗೊಂಡಿತ್ತು. ಆದರೆ ಸದನದಲ್ಲಿ ವಿಧೇಯಕ ಮಂಡನೆಯಾಗದಿರುವುದು ಕಳವಳಕಾರಿ ಎಂದು ವರದಿ ಉಲ್ಲೇಖಿಸಿದೆ.

WhatsApp Image 2026 05 18 at 12.16.01 PM

ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲು ಆಗ್ರಹ: ರೈತರಿಗೆ, ಮಾಂಸ ಮಾರಾಟಗಾರರಿಗೆ, ಜಾನುವಾರು ಸಾಗಣೆದಾರರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಿಸಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ಯಾವುದೇ ಸೂಚನೆಯನ್ನು ಸರ್ಕಾರ ನೀಡಿಲ್ಲ. ಆದರೆ ಬಿಜೆಪಿ ಮಾಡಿದ ಈ ಕಾಯ್ದೆ ಸಾಕಷ್ಟು ನಷ್ಟವನ್ನು ಉಂಟು ಮಾಡಿರುವುದನ್ನು ಗಮನಿಸಬೇಕು. “ಜೀವನೋಪಾಯದ ಮೇಲಿನ ಪರಿಣಾಮದ ಪುರಾವೆಗಳು ತೀವ್ರ ಅಡೆತಡೆಗಳನ್ನು ತೋರಿಸುತ್ತವೆ. ಈ ‘ಮಾರಾಟ ಮೌಲ್ಯ’ದ (EXIT VALUE) ನಷ್ಟವು ಸಣ್ಣ ಮತ್ತು ಅತಿಸಣ್ಣ ರೈತರ ಮೇಲೆ ನೇರ ಪರಿಣಾಮ ಬೀರುತ್ತದೆ. ಮಾರಾಟ ಮೌಲ್ಯದ ನಷ್ಟ ಮತ್ತು ಉತ್ಪಾದಕವಲ್ಲದ ಜಾನುವಾರುಗಳನ್ನು ನಿರ್ವಹಿಸುವ ಹೊರೆಯಿಂದಾಗಿ ಸುಮಾರು 15 ಲಕ್ಷ ಕುಟುಂಬಗಳು ತೊಂದರೆಗೆ ಒಳಗಾಗಬಹುದು ಎಂದು ‘ಆಹಾರ ನಮ್ಮ ಹಕ್ಕು’ ವರದಿಯು ಅಂದಾಜಿಸಿದೆ.

ಜಾನುವಾರು ಮಾರುಕಟ್ಟೆಗಳು ಕುಸಿದಿವೆ ಅಥವಾ ತೀವ್ರವಾಗಿ ಕ್ಷೀಣಿಸಿವೆ ಎಂದು ಇದು ಹೇಳಿದೆ. ಕರ್ನಾಟಕ ರಾಜ್ಯ ರೈತ ಸಂಘದ ಪ್ರತಿನಿಧಿಯೊಬ್ಬರು ತಿಳಿಸಿದಂತೆ ಕರ್ನಾಟಕದಲ್ಲಿ ಈ ಹಿಂದೆ 2,000-3,000 ಜಾನುವಾರು ಮಾರುಕಟ್ಟೆಗಳಿದ್ದವು, ಆದರೆ ಈಗ ಕಾರ್ಯನಿರ್ವಹಿಸುತ್ತಿರುವ ಮಾರುಕಟ್ಟೆಗಳ ಸಂಖ್ಯೆ ಸುಮಾರು 100ಕ್ಕೆ ಇಳಿದಿದೆ. ಇದರ ಪರಿಣಾಮವು ದಲಿತ ಚರ್ಮದ ಕಾರ್ಮಿಕರು, ಹದಗೊಳಿಸದ ಚರ್ಮದ ವರ್ತಕರು, ಮಾಂಸ ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು ಮತ್ತು ಮುಸ್ಲಿಂ ಜಾನುವಾರು ವರ್ತಕರ ಮೇಲೂ ಉಂಟಾಗಿದೆ. ಚರ್ಮದ ಬೆಲೆಗಳಲ್ಲಿ ತೀವ್ರ ಕುಸಿತ ಮತ್ತು ಚರ್ಮದ ಸರಪಳಿಯನ್ನು ಅವಲಂಬಿಸಿರುವವರಿಗೆ ಮಾರುಕಟ್ಟೆಯ ಸುಸ್ಥಿರತೆ ಕುಸಿದಿರುವುದನ್ನು ವರದಿಯು ದಾಖಲಿಸಿದೆ. ಮಾಂಸ ಮಾರಾಟಗಾರರು, ಸಣ್ಣ ಉಪಾಹಾರ ಮಂದಿರಗಳು ಮತ್ತು ಬೀಫ್ ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸಿದ್ದಾರೆ. ಶಿವಾಜಿನಗರದ ಸ್ಥಳೀಯ ಬೀಫ್ ವ್ಯಾಪಾರಿಗಳ ಸಂಘದ ಪ್ರಕಾರ, ಸುಮಾರು 150 ಬೀಫ್ ಮಳಿಗೆಗಳಲ್ಲಿ 50-60 ಮಳಿಗೆಗಳು ಮುಚ್ಚಲ್ಪಟ್ಟಿವೆ ಮತ್ತು ದಿನನಿತ್ಯದ ಬೀಫ್ ಮಾರಾಟವು ಸುಮಾರು 5,000 ಕೆಜಿಯಿಂದ 2,000 ಕೆಜಿಗೆ ಇಳಿದಿದೆ. ಅಂದರೆ ಸುಮಾರು ಶೇ. 60 ರಷ್ಟು ಕುಸಿತ ಕಂಡಿದೆ”- ಹೀಗೆ ಅಂಕಿ-ಅಂಶಗಳ ಸಹಿತ ಗೋಹತ್ಯೆ ನಿಷೇಧ ಕಾಯ್ದೆಯ ಪರಿಣಾಮಗಳ ಕುರಿತು ಮುಸ್ಲಿಂ ಸಮಾವೇಶದ ವರದಿ ಬೆಳಕು ಚೆಲ್ಲಿದೆ. ಖಾಸಗಿ ವ್ಯಕ್ತಿಗಳು ಮಧ್ಯಪ್ರವೇಶಿಸಿ ದಾಂಧಲೆ ನಡೆಸಲು ಅವಕಾಶ ನೀಡಿರುವ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಅಥವಾ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಸಮಾವೇಶದ ವರದಿ ಒತ್ತಾಯಿಸಿದೆ.

2ಬಿ ಮೀಸಲಾತಿ ಮರುಸ್ಥಾಪನೆಗೆ ಆಗ್ರಹ

ಮುಸ್ಲಿಮರ ಹಿಂದುಳಿದಿರುವಿಕೆಯನ್ನು ಪರಿಗಣಿಸಿ, 2ಬಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಆದರೆ ಬಿಜೆಪಿ ಸರ್ಕಾರ ದುರುದ್ದೇಶಪೂರಿತವಾಗಿ ಮತ್ತು ಸಂವಿಧಾನಬಾಹಿರವಾಗಿ 2ಬಿ ಮೀಸಲಾತಿಯನ್ನು ರದ್ದು ಮಾಡಿ, ಶೇ. 4ರಷ್ಟು ಪಾಲನ್ನು ಲಿಂಗಾಯತರಿಗೂ ಒಕ್ಕಲಿಗರಿಗೂ ಹಂಚಿಕೆ ಮಾಡಿತ್ತು. ಇದನ್ನು ವಾಪಸ್ ಪಡೆಯುವ ಭರವಸೆಯನ್ನು ನೀಡಿದ್ದ ಕಾಂಗ್ರೆಸ್ ಈವರೆಗೂ ಗಮನ ಹರಿಸದಿರುವುದು ಆತಂಕಕಾರಿ. ಬಿಜೆಪಿ ಮಾಡಿರುವ ಅಧ್ವಾನವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮೀಸಲಾತಿ ರದ್ದತಿಯ ಆದೇಶಕ್ಕೆ ಕೋರ್ಟ್ ತಡೆ ನೀಡಿದರೂ, ಸಾಂವಿಧಾನಿಕವಾಗಿ ಮೀಸಲಾತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕ್ರಮ ವಹಿಸದಿರುವುದನ್ನು ವರದಿ ಉಲ್ಲೇಖಿಸಿದೆ. ಜೊತೆಗೆ 2ಬಿ ಮೀಸಲಾತಿಯನ್ನು ಶೇ.4ರಿಂದ 8ಕ್ಕೆ ಏರಿಸಬೇಕೆಂದು ಆಗ್ರಹಿಸಿದೆ.

ಜಾತಿ ಸಮೀಕ್ಷೆಯ ವರದಿ ಬಿಡುಗಡೆಗೊಳಿಸಬೇಕು. ಪಿಂಜಾರ/ನದಾಫ್ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಲ್ಪಸಂಖ್ಯಾತರಿಗೆ 10,000 ಕೋಟಿ ರೂ. ನೀಡುವುದಾಗಿ ನೀಡಿದ್ದ ವಾಗ್ದಾನ ಈಡೇರಬೇಕು, ಮುಸ್ಲಿಂ ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಹೆಚ್ಚಿಸುವುದು, ಮೌಲಾನಾ ಆಝಾದ್ ಮಾದರಿ ಶಾಲೆಗಳು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಸರಿಪಡಿಸಬೇಕು ಎಂಬ ಆಗ್ರಹಗಳು ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ಅಗತ್ಯವಾಗಿ ಆಗಬೇಕಿರುವ ಕ್ರಮಗಳ ಕುರಿತು ವರದಿ ಸವಿಸ್ತಾರವಾಗಿ ಚರ್ಚಿಸಿದೆ.

ವರದಿಯು ದ್ವೇಷ ಭಾಷಣಗಳ ತಡೆ ಕುರಿತು ವಿಶೇಷ ಗಮನ ಹರಿಸಿದೆ (ಈ ಕುರಿತ ವಿಸ್ತೃತ ವರದಿಯನ್ನು ಈಗಾಗಲೇ ‘ಈದಿನ ಡಾಟ್ ಕಾಮ್’ ಪ್ರಕಟಿಸಿದ್ದು ‘ಇಲ್ಲಿ’ ಓದಬಹುದು). ಹೊಸ ಬೇಡಿಕೆಯಾಗಿ ಎಸ್ಐಆರ್ ಕುರಿತ ಆತಂಕವನ್ನು ವರದಿ ಮುಂದಿಟ್ಟಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಎಸ್ಐಆರ್ ಮೂಲಕ ನಾಗರಿಕತ್ವವನ್ನು ಪರಿಶೀಲಿಸಲಾಗಿದೆ. ದಾಖಲೆ ನೀಡಿದರೂ ಮತದಾರರ ಪಟ್ಟಿಯಿಂದ ಹೊರಹಾಕಲು ಬೇಕಾದ ಎಲ್ಲ ಕುತಂತ್ರಗಳನ್ನು ಚುನಾವಣಾ ಆಯೋಗ ಮಾಡಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಮುಸ್ಲಿಂ ಸಮಾವೇಶವು, ಈ ಹೊತ್ತಿನಲ್ಲಿ ಎಸ್ಐಆರ್ ಕುರಿತು ಕರ್ನಾಟಕ ಸರ್ಕಾರ ಎಚ್ಚರಿಕೆ ವಹಿಸುವಂತೆ ವರದಿಯ ಮೂಲಕ ಆಗ್ರಹಿಸಿದೆ.

ಮುಸ್ಲಿಂ ಸಮಾವೇಶದ ವರದಿಗೆ ಸಂಬಂಧಿಸಿದ ಲೇಖನಗಳು ಇಲ್ಲಿವೆ;

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...

ಸರ್ಕಾರ ಬೀಳಿಸಲು ಬಂದಿಲ್ಲ, ಅಕ್ರಮ ಪ್ರಶ್ನಿಸಲು ಬಂದಿದ್ದೇನೆ: ಖ್ಯಾತ ಯೂಟ್ಯೂಬರ್ ಧೃವ್ ರಾಠಿ

"ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ...

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಐಶೀ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...