ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ 108 ಅಡಿ ಎತ್ತರದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯ ಎದುರು ಈಚೆಗೆ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್) ಗೀತೆ ಹಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೇ 16, 17ರಂದು ನಡೆದ ಎರಡು ದಿನಗಳ ಪಂಡಿತ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ, ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರು ಮೂರ್ತಿ ಎದುರು ನಿಂತು ‘ನಮಸ್ತೆ ಸದಾ ವತ್ಸಲೇ’ ಗೀತೆ ಹಾಡಿದ್ದಾರೆ.
ಇದರಲ್ಲಿ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಬೀದರ್ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಸವ ಮಹಾಮನೆಯ ಸಮೀಪದ ಸಭಾ ಮಂಟಪದಲ್ಲಿ ಪ್ರಶಿಕ್ಷಣ ಅಭಿಯಾನ ನಡೆಸಲು ಬಾಡಿಗೆ ಪಡೆದಿದ್ದರು. ಇಡೀ ದಿನ ಇಲ್ಲಿಯೇ ಕಾರ್ಯ ಚಟುವಟಿಕೆಗಳು ನಡೆದವು.
ಇದನ್ನೂ ಓದಿ : ಬೀದರ್ | ಉಪವಾಸ ಸತ್ಯಾಗ್ರಹದಲ್ಲಿದ್ದ ಗೋಪಾಲ್ ಸಿಂಗ್ ಠಾಕೂರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಬಳಿಕ ವಾಯು ವಿಹಾರಕ್ಕೆ ತೆರಳಿದ ವೇಳೆ ಬಸವಣ್ಣನವರ ಮೂರ್ತಿ ಎದುರು ಸಾಲಾಗಿ ನಿಂತು ಆರ್‌ಎಸ್‌ಎಸ್ ಗೀತೆ ಪಠಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಸವಾಭಿಮಾನಿಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.




