ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕೇಳುವುದು ಬಿಟ್ಟು ಜನ್ ಕಿ ಬಾತ್ ಕೇಳಿ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ನಡೆದ ‘ಧೀಮಂತ ಧುರೀಣ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಎರಡು ವರ್ಷಗಳ ಹಿಂದೆ ಸೋನಿಯಾ ಗಾಂಧಿ ಅವರು ‘ಧೀಮಂತ ಧುರೀಣ’ ಗ್ರಂಥದ ಇಂಗ್ಲಿಷ್ ಆವೃತ್ತಿಯನ್ನು ದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಕನ್ನಡ ಆವೃತ್ತಿ ಬಿಡುಗಡೆಯಾಗಿರುವುದು ಸಂತಸದ ಸಂಗತಿ” ಎಂದರು.
ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ತಾವು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಘಟನೆಯನ್ನು ಪ್ರಸ್ತಾಪಿಸಿದ ಖರ್ಗೆ, ‘‘ಅವರು ಏನೇ ಶುದ್ಧೀಕರಣ ಮಾಡಿದರೂ ನಾನು ನನ್ನ ತತ್ವ ಬಿಡುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸರ್ವರನ್ನು ಒಳಗೊಂಡು ಮುನ್ನಡೆಯುವ ತತ್ವದಲ್ಲಿ ನಾನು ನಡೆಯುತ್ತೇನೆ’’ ಎಂದು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ವಿರೋಧ ಪಕ್ಷಗಳಿಗೆ ತೊಂದರೆ ಹೆಚ್ಚಾಗಿದೆ. ಅವರ ಬೆಂಬಲಿಗರು ಹಾಗೂ ಶಿಷ್ಯರೂ ವಿವಿಧ ರೀತಿಯಲ್ಲಿ ತೊಂದರೆ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘‘ಬ್ರಿಟಿಷರ ಪರವಾಗಿ ಮಾಫಿನಾಮೆ ಪತ್ರ ಬರೆದುಕೊಟ್ಟ ಪಕ್ಷ ನಿಮ್ಮ ಬಿಜೆಪಿ ಮತ್ತು ಆರ್‌ಎಸ್‌ಎಸ್’’ ಎಂದು ಆರೋಪಿಸಿದರು. ಮೋದಿ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
‘ವಂದೇ ಮಾತರಂ’ ವಿಚಾರ ಪ್ರಸ್ತಾಪಿಸಿದ ಖರ್ಗೆ, “ದೇಶದ ಇತಿಹಾಸ ಹಾಗೂ ರಾಷ್ಟ್ರಭಕ್ತಿಯ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದರು. ಸರ್ಕಾರ ಬದಲಾದಂತೆ ರಾಷ್ಟ್ರಗೀತೆಯನ್ನೂ ಬದಲಾಯಿಸುವ ಪರಿಸ್ಥಿತಿ ಬಂದರೆ ದೇಶಭಕ್ತಿ ಎಲ್ಲಿ ಉಳಿಯುತ್ತದೆ” ಎಂದು ಪ್ರಶ್ನಿಸಿದರು.
“ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಸಿದ್ಧಾಂತವನ್ನು ಹೇರಲಾಗುತ್ತಿದೆ ಎಂದು ಆರೋಪಿಸಿದ ಖರ್ಗೆ, ಇದರಿಂದ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಮನಸ್ಥಿತಿ ಹಾಳಾಗುತ್ತಿದೆ ಎಂದು ದೂರಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ‘ಶಿಕ್ಷಣ, ಸಂಘಟನೆ, ಹೋರಾಟ’ದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು” ಎಂದು ಕರೆ ನೀಡಿದರು.
“ಬುಲೆಟ್ ರೈಲು ಯೋಜನೆ ಕುರಿತು ವ್ಯಂಗ್ಯವಾಡಿದ ಖರ್ಗೆ, ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ. ಆದರೆ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘‘ಅವಕಾಶ ಹಾಗೂ ಸೌಲಭ್ಯಗಳಿಂದ ವಂಚಿತರಾದವರೆಲ್ಲರೂ ದಲಿತರು. ಎಲ್ಲರೂ ಒಗ್ಗೂಡಿ, ಪರಸ್ಪರ ಬೆಂಬಲವಾಗಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕು’’ ಎಂದು ಕರೆ ನೀಡಿದರು.
“ಅಸ್ಪೃಶ್ಯತೆ ನಿರ್ಮೂಲನೆಗೆ ಸಾಮಾಜಿಕ ಮನಸ್ಥಿತಿ ಬದಲಾಗಬೇಕು. ಜಾತಿ ಹಾಗೂ ಅಸ್ಪೃಶ್ಯತೆಯ ವಿರುದ್ಧ ನಾವೆಲ್ಲರೂ ಜೊತೆಯಾಗಿ, ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು” ಎಂದು ಖರ್ಗೆ ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಲೈಂಗಿಕ ಕಿರುಕುಳ ಆರೋಪ: ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಡಾ. ದತ್ತಾತ್ರೇಯ ಇಕ್ಕಳಕಿ, ಬಸವರಾಜ ದೇಶಮುಖ ಸೇರಿದಂತೆ ಹಲವರು ಮಾತನಾಡಿದರು. ಸಚಿವ ಡಾ. ಶರಣಪ್ರಕಾಶ ಪಾಟೀಲ್, ದೇವಯ್ಯ ಗುತ್ತೇದಾರ್, ಬಿ.ಆರ್. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಎಂ.ವೈ. ಪಾಟೀಲ್ ಸೇರಿದಂತೆ ಸಚಿವರು, ಶಾಸಕರು, ಮುಖಂಡರು ಹಾಗೂ ಖರ್ಗೆ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.





