ರಾಜ್ಯದ ಜನರು ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದರೂ ಕೇಂದ್ರದಿಂದ ಕರ್ನಾಟಕಕ್ಕೆ ಬರುತ್ತಿರುವುದು ಕೇವಲ 50 ಸಾವಿರ ಕೋಟಿ ರೂಪಾಯಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಕೇಂದ್ರ ಸರ್ಕಾರದ ಹಣವಲ್ಲ. ನಮ್ಮ ರಾಜ್ಯದಿಂದ ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಲಾಗಿದೆ. ಅದರಲ್ಲಿ ನಾವು 37,000 ಕೋಟಿ ತೆರಿಗೆ ಪಾಲು ಪಡೆಯುತ್ತಿದ್ದೇವೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗೆ 13,000 ಕೋಟಿ ರೂ. ನೀಡಲಾಗುತ್ತಿದೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರೆ ಬಿಜೆಪಿಯವರು ಜಗಳಕ್ಕೆ ಬರುತ್ತಾರೆ. ಇದು ಅವರ ಹಣ ಎಂದು ಹೇಳುತ್ತಾರೆ. ಆದರೆ ಇದು ಕನ್ನಡಿಗರು ಪಾವತಿಸುವ ತೆರಿಗೆ ಹಣ’ ಎಂದು ಹೇಳಿದರು.
“ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮಹಾರಾಷ್ಟ್ರದ ನಂತರದ ಎರಡನೇ ಸ್ಥಾನದಲ್ಲಿದೆ. ಆದರೆ ಅವರು ನಮಗೇನು ಕೊಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಅಗತ್ಯ ವಸ್ತುಗಳ ಬೆಲೆ ಏರಿಕೆ: ಸರ್ಕಾರಕ್ಕೆ ಖರ್ಗೆ ತರಾಟೆ
”ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ಅವರು ಇನ್ನೂ ಪೂರ್ವಾನುಮತಿ ನೀಡಿಲ್ಲ. ಮತ್ತು ನಮ್ಮಲ್ಲಿ ಒಕ್ಕೂಟ ವ್ಯವಸ್ಥೆ ಇದ್ದರೂ ಮುಖ್ಯಮಂತ್ರಿ ಹಾಗೂ ಸಚಿವರ ಭೇಟಿಗೆ ಅವಕಾಶ ನೀಡುತ್ತಿಲ್ಲ. ರಾಜ್ಯದಲ್ಲಿ ಬೆಳೆ ನಷ್ಟವು 35,000 ಕೋಟಿಗಿಂತ ಹೆಚ್ಚಿದ್ದು, ನಾನು ಸೋಮವಾರ (ಡಿಸೆಂಬರ್ 18) ಕೇಂದ್ರ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಹೇಳಿದರು.