ಕೇರಳ ಮೂಲದ ಉದ್ಯಮಿಯೊಬ್ಬರ ಮೇಲೆ ದಾಳಿ ನಡೆಸಿ, ಅವರಿಂದ ಬರೋಬ್ಬರಿ 20 ಲಕ್ಷ ರೂ. ನಗದು ದೋಚಿದ್ದ ರಾಜ್ಯದ ಸಿಐಡಿ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಆತನ ಇಬ್ಬರು ಸಹಚರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಐದು ದಿನಗಳ ಬಳಿಕ ಶುಕ್ರವಾರ ತಡರಾತ್ರಿ ಈ ಬಂಧನ ಕಾರ್ಯಾಚರಣೆ ನಡೆದಿದೆ.
ಸಿಐಡಿ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಈತನ ಸಹಚರರಾದ ವಸಂತ್ ಕುಮಾರ್ ಮತ್ತು ಕುಪೇಂದ್ರ ರೆಡ್ಡಿ ಬಂಧಿತ ಆರೋಪಿಗಳು. ದರೋಡೆಯಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳಾದ ಹುಸೇನ್ ಮತ್ತು ಸಾಹಿಲ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಕೇರಳದ ಉದ್ಯಮಿ ಜುನೀಶ್ ಬಾಬು ಎ.ಕೆ. (40) ಎಂಬುವರು ನೀಡಿದ ದೂರಿನ ಮೇರೆಗೆ ಮಡಿವಾಳ ಠಾಣೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಉದ್ಯಮಿ ಜುನೀಶ್ ಬಾಬು ಹಾಗೂ ಅವರ ಸ್ನೇಹಿತ, ವ್ಯವಹಾರದ ನಿಮಿತ್ತ ಜೂನ್ 15ರಂದು ಬೆಂಗಳೂರಿಗೆ ಬಂದು ಸಿಲ್ಕ್ ಬೋರ್ಡ್ ಸಮೀಪದ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಟ್ರೇಡಿಂಗ್ (ವ್ಯಾಪಾರ) ವ್ಯವಹಾರದ ನೆಪದಲ್ಲಿ ಜುನೀಶ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಹೆಚ್ಚಿನ ಲಾಭದ ಆಮಿಷವೊಡ್ಡಿ ಹಣ ತರುವಂತೆ ಸೂಚಿಸಿದ್ದರು.
ಜುನೀಶ್ ಅವರು ಹೋಟೆಲ್‌ನಲ್ಲಿ ಕೊಠಡಿ ಪಡೆದಿದ್ದನ್ನು ಅರಿತ ಇನ್‌ಸ್ಪೆಕ್ಟರ್ ಮಹೇಶ್ ನೇತೃತ್ವದ ತಂಡ, ಪೊಲೀಸ್ ಇಲಾಖೆಯ ‘ಮಹೀಂದ್ರ ಬೊಲೆರೊ’ ಜೀಪ್‌ನಲ್ಲಿಯೇ ಹೋಟೆಲ್‌ಗೆ ತೆರಳಿತ್ತು. ಇನ್‌ಸ್ಪೆಕ್ಟರ್ ಮಹೇಶ್ ವಾಹನದಲ್ಲಿಯೇ ಕುಳಿತಿದ್ದರೆ, ಆತನ ಸಹಚರರು ಜುನೀಶ್ ಅವರ ಕೊಠಡಿಗೆ ತೆರಳಿದ್ದರು. ಇನ್‌ಸ್ಪೆಕ್ಟರ್ ಅವರ ಗುರುತಿನ ಚೀಟಿಯನ್ನು ತೋರಿಸಿ, ತಾವು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು.
ಅಕ್ರಮ ಹಣ ವರ್ಗಾವಣೆ ಮತ್ತು ಮಾದಕ ವಸ್ತು ಮಾರಾಟದ ಆರೋಪ ಹೊರಿಸಿ, ವಿಚಾರಣೆ ನೆಪದಲ್ಲಿ ಹಣದ ಬ್ಯಾಗ್ ನೀಡುವಂತೆ ಅವರು ಬೆದರಿಸಿದ್ದಾರೆ. ಜುನೀಶ್ ಅವರು ಇದಕ್ಕೆ ನಿರಾಕರಿಸಿದಾಗ, ಅವರ ಹಾಗೂ ಸ್ನೇಹಿತನ ಮೇಲೆ ಹಲ್ಲೆ ನಡೆಸಿ 20 ಲಕ್ಷ ನಗದು ಇದ್ದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಮಾಸದ ಮೋಡಿ: 39ರ ವಯಸ್ಸಿನಲ್ಲೂ ಮಿಂಚುತ್ತಿರುವ ಮೆಸ್ಸಿ; ಫುಟ್‌ಬಾಲ್ ದಿಗ್ಗಜರ ಸ್ವಾರಸ್ಯಗಳು
ಈ ಬಗ್ಗೆ ಗುರುವಾರ ಜುನೀಶ್ ಅವರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಲ್ಲಿಗೆ ಸಿಐಡಿ ಇಲಾಖೆಯ ವಾಹನ ಬಂದಿರುವುದು ಪತ್ತೆಯಾಗಿತ್ತು. ವಾಹನದ ಜಾಡು ಹಿಡಿದು ಹೋದ ತನಿಖಾಧಿಕಾರಿಗಳು, ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರ ಮನೆಯಲ್ಲಿದ್ದ ಜೀಪ್ ಅನ್ನು ವಶಪಡಿಸಿಕೊಂಡರು. ತರುವಾಯ ಆತನ ಸಹಚರರಾದ ವಸಂತ್ ಕುಮಾರ್ ಮತ್ತು ಕುಪೇಂದ್ರ ರೆಡ್ಡಿ ಅವರನ್ನು ಬಂಧಿಸಲಾಯಿತು. ಶುಕ್ರವಾರ ರಾತ್ರಿ ಇನ್‌ಸ್ಪೆಕ್ಟರ್ ಮಹೇಶ್ ಅನ್ನು ಸಹ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆದ್ಯತೆಯ ಮೇರೆಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಹೀಗಾಗಿ ಮಡಿವಾಳ ವಿಭಾಗದ ಎಸಿಪಿ ವಿ.ಕೆ. ವಾಸುದೇವ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ದೋಚಲಾಗಿದ್ದ 20 ಲಕ್ಷದಲ್ಲಿ ಬಹುಪಾಲು ಹಣವನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಜೊತೆಗೆ, ದೂರುದಾರ ಜುನೀಶ್ ಅವರ ಹಿನ್ನೆಲೆಯ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.




