ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ ಸಭಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಆಗಮಿಸಿದ ಸಂದರ್ಭದಲ್ಲಿ ಈ ಭಾಗದ ಎಲ್ಲಾ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ಕಸ್ತೂರಿ ರಂಗನ್ ವರದಿಯ ಲೋಪಗಳು ಹಾಗೂ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಶಾಸಕರಾದ ಟಿ ಡಿ ರಾಜೇಗೌಡ, ನಯನಾ ಮೋಟಮ್ಮ, ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ಜೆಡಿಎಸ್ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿ, ಸುಧೀರ್ ಕುಮಾರ್ ಮುರೋಳ್ಳಿ, ವಿಜಯ್ ಕುಮಾರ್ ಅವರು ಮಾತನಾಡಿದರು. ಇವರುಗಳ ಸಲಹೆಗಳ ಸಾರಾಂಶಗಳು ಹೀಗಿವೆ:
ಈ ಭಾಗದ ರೈತರಿಗೆ ಅರಣ್ಯ ವಿಚಾರವಾಗಿ ಬಹಳ ತೊಂದರೆ ಎದುರಾಗುತ್ತಿದೆ. ಈ ವರದಿಯಿಂದ ನಮ್ಮ ಮೇಲೆ ತೂಗುಗತ್ತಿ ಇದೆ. ರೈತರು ಆತಂಕದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ 138 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಮಾಡಿದ್ದಾರೆ. 1,449 ಹಳ್ಳಿಗಳು ರಾಜ್ಯದಲ್ಲಿ ಅಧಿಸೂಚನೆ ಒಳಗೆ ಸೇರಿವೆ.
ಇದಕ್ಕೂ ಮುನ್ನ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ್ದು, ಕುದುರೆಮುಖ ರಾಷ್ಟ್ರೀಯ ಅರಣ್ಯ, ಭದ್ರ ಹುಲಿ ಸಂರಕ್ಷಿತ ಪ್ರದೇಶ, ಸೋಮೇಶ್ವರ ಹಾಗೂ ಶೆಟ್ಟಿ ಹಳ್ಳಿ ಅಭಯಾರಣ್ಯ ಮಾಡಲಾಗಿದೆ. ಇದರಿಂದ ಅನೇಕರನ್ನು ಪುನರ್ ವಸತಿ ಮಾಡುವಾಗ ಸರಿಯಾಗಿ ಪರಿಹಾರ ನೀಡಿಲ್ಲ. ಈ ಮಧ್ಯೆ ಈ ವರದಿ ಜಾರಿ ಆದರೆ ಪರಿಸ್ಥಿತಿ ಏನು ಎಂಬ ಆತಂಕ ಮೂಡಿದೆ.
ಕೇರಳ ರಾಜ್ಯದಲ್ಲಿ ಉಮರ್ ಸಮಿತಿ ಎಂಬ ಉನ್ನತ ಮಟ್ಟದ ಅಧಿಕಾರಿ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಲಾಗಿದೆ. ಇದರಿಂದ ಕೇರಳ 5 ಸಾವಿರ ಚ.ಕಿ.ಮೀ ಪ್ರದೇಶವನ್ನು ವರದಿಯಿಂದ ಮುಕ್ತಗೊಳಿಸಿದೆ. ಇದರಿಂದ ನಾಡು ಹಾಗೂ ಕಾಡನ್ನು ಬೇರ್ಪಡಿಸಿ ಗಡಿ ರಚಿಸಲಾಗಿದೆ. ಕಸ್ತೂರಿ ರಂಗನ್ ಸಮಿತಿ ಉಪಗ್ರಹಗಳ ಮೂಲಕ ಜಿಪಿಎಸ್ ಸಮೀಕ್ಷೆ ಮಾಡಿದ್ದು, ಕಾಫಿ, ಅಡಿಕೆ, ರಬ್ಬರ್ ತೋಟವನ್ನು ಕಾಡು ಎಂದು ಪರಿಗಣಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಕಾಯ್ದೆ: ಭೂಮಿ, ವಸತಿ ಇಲ್ಲದೆ ಜನರ ಬದುಕು ಕಷ್ಟ; ಟಿ.ಡಿ ರಾಜೇಗೌಡ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಈಗ 7ನೇ ಬಾರಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಇದು ನಮ್ಮ ಭಾಗಕ್ಕೆ ಸಾಡೆ ಸಾತಿಯಂತಾಗಿದ್ದು, ಮುಖ್ಯಮಂತ್ರಿಗಳು ಇದನ್ನು ನಿವಾರಣೆ ಮಾಡುವ ವಿಶ್ವಾಸ ಇದೆ. ಸಣ್ಣ ಇಡುವಳಿದಾರರು, ನಿವೇಶನ ರಹಿತರಿದ್ದಾರೆ. ಈ ವರದಿಯಿಂದ ಇವರ ಸಮಸ್ಯೆ ಬಗೆಹರಿಯುವುದಿಲ್ಲ.
ಮಲೆನಾಡು ಕರಾವಳಿ ಭಾಗವನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಬೇಕು. ಈ ಭಾಗ ರಾಜ್ಯದ ಬಹುತೇಕ ನದಿಗಳ ಕೇಂದ್ರವಾಗಿದ್ದು ನಮಗೆ ಮೀಸಲು ಜಲ ಪ್ರಮಾಣ ಘೋಷಣೆ ಮಾಡಬೇಕು. ಈ ವರದಿ ಕೇವಲ ನಮ್ಮ ಜಮೀನು, ಮನೆ ಮಾತ್ರ ಸೇರಿಸಿ ಅಧಿಸೂಚನೆ ಹೋರಡಿಸಿಲ್ಲ. ನಮ್ಮ ರಸ್ತೆ, ಸಾರ್ವಜನಿಕ ಬಳಕೆಯ ಸರ್ಕಾರಿ ಕಟ್ಟಡಗಳನ್ನು ಸೇರಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ: ವಿರೋಧಿಸಿ ಬೃಹತ್ ಪಾದಯಾತ್ರೆ
ಮುಖ್ಯಮಂತ್ರಿಗಳು ಸಂಸದರನ್ನು ಸೇರಿಸಿಕೊಂಡು ಸರ್ವಪಕ್ಷ ನಾಯಕರ ಸಭೆ ಮಾಡುತ್ತಿದ್ದು, ಇದೇ ರೀತಿ, ಸಂಸದರು ಕೇಂದ್ರ ಅರಣ್ಯ ಸಚಿವರ ಸಮ್ಮುಖದಲ್ಲಿ ಎಲ್ಲಾ ಪಕ್ಷಗಳ ನಾಯಕರನ್ನು ಕರೆದು ಇದೇ ರೀತಿ ಸಭೆ ಮಾಡಬೇಕು ಎಂದು ಸಲಹೆ ಕೊಟ್ಟರು.




