ವಿವಾದಾತ್ಮಕ ಬಿಡದಿ ಸಮಗ್ರ (ಸ್ಮಾರ್ಟ್) ಟೌನ್‌ಶಿಪ್ ಯೋಜನೆಗಾಗಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳು ಅಂತಿಮವಾಗಿ ಇತ್ಯರ್ಥವಾಗುವವರೆಗೆ ಭೂಮಾಲೀಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಭರವಸೆ ನೀಡಿದೆ.
ರಾಮನಗರ ತಾಲೂಕಿನ ವಡೇರಹಳ್ಳಿ ವ್ಯಾಪ್ತಿಯ ಹೊಸೂರು ಗ್ರಾಮದ ಗಿರಿಜಮ್ಮ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು. ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಭೂಮಿಗೆ ನೀಡಬೇಕಾದ ಪರಿಹಾರದ ಮೊತ್ತ ನಿರ್ಧಾರವಾಗುವವರೆಗೆ ಅರ್ಜಿದಾರರ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸುವುದಿಲ್ಲ ಹಾಗೂ ಅವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.
ಅರ್ಜಿದಾರರು 16 ಎಕರೆ ಸ್ವಾಧೀನವನ್ನು ಪ್ರಶ್ನಿಸಿದ್ದಾರೆ. ಆದರೆ, ಇತರ ಹಲವು ಭೂಮಾಲೀಕರು ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದು, ಅವರಿಗೆ ಪರಿಹಾರ ನಿಗದಿಯಾಗಬೇಕಿದೆ. ಈ ಅರ್ಜಿಗಳ ಕುರಿತು ಶೀಘ್ರದಲ್ಲೇ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಅಡ್ವೋಕೇಟ್ ಜನರಲ್ ತಿಳಿಸಿದರು. ಸರ್ಕಾರದ ವಾದ ಆಲಿಸಿದ ಪೀಠವು, ಕಂದಾಯ, ನಗರಾಭಿವೃದ್ಧಿ ಹಾಗೂ ಅರಣ್ಯ ಇಲಾಖೆ, ಬಿಎಂಆರ್‌ಡಿಎ (BMRDA), ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಭೂಸ್ವಾಧೀನ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.
ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ನಿರ್ಮಾಣಕ್ಕಾಗಿ 10 ಗ್ರಾಮಗಳ 6,650 ಎಕರೆ ಸೇರಿದಂತೆ ಒಟ್ಟು 7,481 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. 2006ರಲ್ಲೇ ಪ್ರಸ್ತಾಪವಾಗಿದ್ದ ಈ ಯೋಜನೆಯಿಂದಾಗಿ ಎರಡು ದಶಕಗಳಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಹಳೆಯ ಯೋಜನೆಗೇ 2023ರಲ್ಲಿ ಕೇವಲ ‘ಸ್ಮಾರ್ಟ್’ ಎಂಬ ಹೊಸ ಹೆಸರು ನೀಡಿ, ಯಾವುದೇ ನೈಜ ಸಾರ್ವಜನಿಕ ಉದ್ದೇಶವಿಲ್ಲದೆ ಮತ್ತೆ ಜಾರಿಗೆ ತರಲು ಸರ್ಕಾರ ಹೊರಟಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಯೋಜನೆ ಜಾರಿಯಾದರೆ ಫಲವತ್ತಾದ ಕೃಷಿ ಭೂಮಿ ನಾಶವಾಗುವುದರ ಜೊತೆಗೆ ಸಾವಿರಾರು ರೈತರು ನಿರ್ಗತಿಕರಾಗಲಿದ್ದಾರೆ. ಟೌನ್‌ಶಿಪ್‌ಗಾಗಿ ಅಂದಾಜು 3 ಲಕ್ಷ ಮರಗಳನ್ನು ಕಡಿಯಬೇಕಾಗಿರುವುದರಿಂದ ಪರಿಸರದ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಅರ್ಜಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ.




