ಸೇಡಂ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಲ್ಯಾಣ ಜನಪರ ವೇದಿಕೆ ರಾಜ್ಯ ಘಟಕ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರ ವಾಹನಗಳನ್ನು ಅಸ್ತವ್ಯಸ್ತವಾಗಿ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ಬಡ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು, ನರ್ಸ್‌ಗಳು ಮತ್ತು ಸಿಬ್ಬಂದಿ ಆತ್ಮಸ್ಥೈರ್ಯ ತುಂಬುವ ರೀತಿಯಲ್ಲಿ ಸ್ಪಂದಿಸಿ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಇದಲ್ಲದೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸಬೇಕು. ಕರ್ತವ್ಯದ ವೇಳೆಯಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು, ಸಾರ್ವಜನಿಕರಿಗೆ ಸಮಯೋಚಿತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನು ಓದಿದ್ದೀರಾ? ಸುರಪುರ | ಸಮಾಧಿ ಗುಂಡಿ ತೋಡಲು ನಿರಾಕರಿಸಿದ ದಲಿತರಿಗೆ ಕೊಲೆ ಬೆದರಿಕೆ: 17 ಜನರ ವಿರುದ್ಧ ಪ್ರಕರಣ ದಾಖಲು, ತನಿಖೆ
ಈ ಸಂದರ್ಭದಲ್ಲಿ ಕಲ್ಯಾಣ ಜನಪರ ವೇದಿಕೆ ರಾಜ್ಯ ಉಪಾಧ್ಯಕ್ಷ ವರದಾ ಸ್ವಾಮಿ ಬಿ. ಹಿರೇಮಠ, ತಾಲೂಕು ಮುಖಂಡ ನಾಮದೇವ ರಾಥೋಡ್ ಮೇದಕ್, ತಾಲೂಕು ಯುವ ಘಟಕ ಅಧ್ಯಕ್ಷ ಮಹೇಶ್ ಜಕ್ಕನ್ ಬೋಯಿ, ತಾಲೂಕು ವಿದ್ಯಾರ್ಥಿ ಘಟಕ ಅಧ್ಯಕ್ಷ ಉಮೇಶ್ ದೇವರಹಳ್ಳಿ, ಸಂಘಟನೆಯ ಸದಸ್ಯ ಹನುಮಂತು ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





