ದೇಶದಲ್ಲಿ ಕ್ಯಾನ್ಸರ್ ಮಹಾಮಾರಿ ಆತಂಕಕಾರಿ ಮಟ್ಟದಲ್ಲಿ ಉಲ್ಬಣಿಸುತ್ತಿದೆ. 2025ನೇ ಸಾಲಿನಲ್ಲಿ ದೇಶಾದ್ಯಂತ ಬರೋಬ್ಬರಿ 15.70 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ವರ್ಷದಲ್ಲಿ 8.69 ಲಕ್ಷಕ್ಕೂ ಹೆಚ್ಚು ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ನೀಡಿದೆ.
ಐಸಿಎಂಆರ್ (ICMR) ದತ್ತಾಂಶವನ್ನು ಆಧರಿಸಿ ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಈ ಅಂಕಿ-ಅಂಶ ಮಂಡಿಸಿದ್ದಾರೆ.ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಸ್ಪಷ್ಟವಾಗಿದೆ. 2021ರಲ್ಲಿ 14.26 ಲಕ್ಷವಿದ್ದ ಹೊಸ ಪ್ರಕರಣಗಳ ಸಂಖ್ಯೆ, ಐದೇ ವರ್ಷಗಳಲ್ಲಿ 1.43 ಲಕ್ಷದಷ್ಟು ಹೆಚ್ಚಳ ಕಂಡು 15.70 ಲಕ್ಷಕ್ಕೆ ಜಿಗಿದಿದೆ.
ಇದೇ ಅವಧಿಯಲ್ಲಿ ಕ್ಯಾನ್ಸರ್ ಸಾವಿನ ಸಂಖ್ಯೆಯು 7.89 ಲಕ್ಷದಿಂದ 8.69 ಲಕ್ಷಕ್ಕೆ ಏರಿಕೆಯಾಗಿದೆ. ಆಧುನಿಕ ಜೀವನಶೈಲಿ, ವಯಸ್ಸಾದವರ ಜನಸಂಖ್ಯೆ ಹೆಚ್ಚಳ ಹಾಗೂ ರೋಗ ಪತ್ತೆಹಚ್ಚುವಿಕೆಯಲ್ಲಿನ ಸುಧಾರಣೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.ರಾಜ್ಯವಾರು ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಹಾಗೂ ಸಾವು ಉತ್ತರ ಪ್ರದೇಶದಲ್ಲಿ ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ 2.26 ಲಕ್ಷ ಹೊಸ ಪ್ರಕರಣಗಳು ಹಾಗೂ 1.25 ಲಕ್ಷ ಸಾವು ಸಂಭವಿಸಿದೆ. ಇದರ ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (71,696 ಸಾವು), ಪಶ್ಚಿಮ ಬಂಗಾಳ (67,093), ಬಿಹಾರ (65,571) ಮತ್ತು ತಮಿಳುನಾಡು (54,864) ರಾಜ್ಯಗಳಿವೆ. ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಅತಿ ಹೆಚ್ಚು (42,694 ಪ್ರಕರಣ) ರೋಗಿಗಳು ಪತ್ತೆಯಾಗಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ (WHO) ‘ಗ್ಲೋಬೊಕ್ಯಾನ್ 2022’ ವರದಿಯ ಪ್ರಕಾರ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಭೀತಿ ಮತ್ತಷ್ಟು ಹೆಚ್ಚಲಿದೆ. ಭಾರತದಲ್ಲಿ 75 ವರ್ಷ ವಯಸ್ಸಿಗೂ ಮುನ್ನವೇ ಕ್ಯಾನ್ಸರ್ ಬರುವ ಸಂಚಿತ ಅಪಾಯವು ಶೇ. 10.6ರಷ್ಟಿದೆ. ಅಂದರೆ, ಸರಿಸುಮಾರು ಪ್ರತಿ 10 ಭಾರತೀಯರಲ್ಲಿ ಒಬ್ಬರಿಗೆ 75 ವರ್ಷಕ್ಕೂ ಮೊದಲೇ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಕ್ಯಾನ್ಸರ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ 770 ಜಿಲ್ಲಾ ಮಟ್ಟದ ಮತ್ತು 6,410 ಸಮುದಾಯ ಮಟ್ಟದ ಎನ್‌ಸಿಡಿ (NCD) ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ 524 ಡೇ ಕೇರ್ ಕ್ಯಾನ್ಸರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ, 30 ವರ್ಷ ಮೇಲ್ಪಟ್ಟವರಿಗೆ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತಿದ್ದು, 39 ಉನ್ನತ ಮಟ್ಟದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.




