ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಯೋಜನೆಗಳು ನಿಲ್ಲಲಿವೆ ಎಂಬ ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಅಭಯ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರಂಟಿ ಯೋಜನೆಗಳು ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕವೂ ನಿರಂತರವಾಗಿ ಮುಂದುವರಿಯಲಿವೆ. ಯೋಜನೆಗಳ ಅನುಷ್ಠಾನದ ಹಂತದಲ್ಲಿ ಕಂಡುಬರುವ ದೋಷಗಳನ್ನು ಸರಿಪಡಿಸುವ ಕಾರ್ಯ ಮೊದಲಿನಿಂದಲೂ ನಡೆಯುತ್ತಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಐದು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದರೂ, ಇದರಿಂದ ರಾಜ್ಯದ ಆರ್ಥಿಕತೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ಪ್ರಸ್ತುತ ತಲಾವಾರು ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರದ ಎರಡನೇ ಅತಿ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ. ಖಜಾನೆ ಖಾಲಿಯಾಗಿದ್ದರೆ ಅಥವಾ ಸರ್ಕಾರ ದಿವಾಳಿ ಸ್ಥಿತಿಯಲ್ಲಿದ್ದರೆ ಇಂತಹ ಆರ್ಥಿಕ ಸಾಧನೆ ಮಾಡಲು ಸಾಧ್ಯವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ
ಬಿಜೆಪಿಯನ್ನು ‘ಮೂಲತಃ ಬಡವರ ವಿರೋಧಿ ಪಕ್ಷ’ ಎಂದು ಟೀಕಿಸಿರುವ ಅವರು, ಮೊದಲ ದಿನದಿಂದಲೂ ವಿರೋಧ ಪಕ್ಷಗಳು ಗ್ಯಾರಂಟಿಗಳನ್ನು ವಿರೋಧಿಸುತ್ತಲೇ ಬಂದಿವೆ. ಮೊದಲು ಯೋಜನೆಗಳ ಜಾರಿಯೇ ಅಸಾಧ್ಯ ಎಂದರು, ನಂತರ ಹಣಕಾಸಿನ ಕೊರತೆಯಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದರು. ಈಗ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂಬ ಸುಳ್ಳು ಪುಕಾರು ಹಬ್ಬಿಸುತ್ತಿದ್ದಾರೆ. ಇದು ಅವರ ರಾಜಕೀಯ ಹತಾಶೆಯ ಪ್ರತೀಕವಷ್ಟೇ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಮ್ಮ ಗ್ಯಾರಂಟಿಗಳನ್ನು ವಿರೋಧಿಸುವ ಬಿಜೆಪಿಯೇ, ಮಧ್ಯಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಇದೇ ಯೋಜನೆಗಳನ್ನು ನಕಲು ಮಾಡಿ ಅಧಿಕಾರಕ್ಕೆ ಬಂದಿದೆ. ಆದರೆ ಚುನಾವಣೆಗೂ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ನಮ್ಮನ್ನು ಟೀಕಿಸಲು ಅವರಿಗೆ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಯೋಜನೆಗಳು ನಿಜವಾದ ಅರ್ಹರಿಗೆ ಸಿಗಬೇಕು. ದುರಾಸೆಗೆ ಬಲಿಯಾಗಿ ಅನರ್ಹರು ಯೋಜನೆಗಳ ಲಾಭ ಪಡೆಯುವುದು ಕಾನೂನು ಉಲ್ಲಂಘನೆ ಮಾತ್ರವಲ್ಲ, ರಾಜ್ಯದ ಜನತೆಗೆ ಮಾಡುವ ಬಹುದೊಡ್ಡ ದ್ರೋಹ. ಹೀಗಾಗಿ ಅನರ್ಹರ ಪಾಲಾಗುತ್ತಿರುವ ಸವಲತ್ತುಗಳನ್ನು ತಡೆಗಟ್ಟುವುದು ಚುನಾಯಿತ ಸರ್ಕಾರದ ಜವಾಬ್ದಾರಿಯಾಗಿದೆ. ಈ ಬಗ್ಗೆ ಜನಸಾಮಾನ್ಯರೂ ಚಿಂತಿಸಬೇಕಿದೆ. ಈ ಸೂಕ್ಷ್ಮ ವಿಚಾರದಲ್ಲಿ ವಿರೋಧ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುವುದನ್ನು ಬಿಟ್ಟು, ನಿಜವಾದ ಅರ್ಹರಿಗೆ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ನೆರವಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.




