ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ನಿರ್ಮಾಪಕ ಭಾ.ಮಾ.ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ (27) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲವೇ ತಿಂಗಳುಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದ ಉಲ್ಲಾಸ್ ಅವರ ನಿಧನ ಅವರ ಕುಟುಂಬದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.
ಉಲ್ಲಾಸ್ ಗೌಡ ಅವರು ಸ್ನೇಹಿತರೊಂದಿಗೆ ಶಿವಮೊಗ್ಗದ ಪ್ರಸಿದ್ಧ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗಾಗಿ ತೆರಳಿದ್ದರು. ಟ್ರೆಕ್ಕಿಂಗ್‌ನಲ್ಲಿದ್ದ ಸಂದರ್ಭದಲ್ಲಿಯೇ ಉಲ್ಲಾಸ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ವೈದ್ಯರು ಅವರು ಹೃದಯಾಘಾತದಿಂದ ನಿಧನರಾಗಿರುವುದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಸಂಕಷ್ಟದಲ್ಲಿ ವೆನೆಜುವೆಲಾ: ಸಹಾಯದ ಕೈಚಾಚಿದ ಅಮೆರಿಕದ ನಿಜವಾದ ಅಜೆಂಡಾ ಏನು?
ಕೆಲವೇ ತಿಂಗಳುಗಳ ಹಿಂದೆ ಉಲ್ಲಾಸ್ ಗೌಡ ಅವರಿಗೆ ವಿವಾಹ ನಿಶ್ಚಯವಾಗಿತ್ತು. ಇತ್ತೀಚೆಗಷ್ಟೇ ಮನೆಯಲ್ಲಿ ದೀಪ ಶಾಸ್ತ್ರದ ಕಾರ್ಯಕ್ರಮವೂ ಜರುಗಿದ್ದು, ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆಮಾಡಿತ್ತು. ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮತ್ತು ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಆದರೆ, ಅವರ ಅಕಾಲಿಕ ಸಾವಿನಿಂದಾಗಿ ಮದುವೆ ಮನೆ ಶೋಕಸಾಗರದಲ್ಲಿ ಮುಳುಗಿದೆ.




