ಈ ದಿನ ಸಂಪಾದಕೀಯ | ಗಾಜಾದ ಕಣ್ಣೀರು; ಇತಿಹಾಸದ ಪುಟದಲ್ಲಿ ಅಪರಾಧಿಯಾಗಿ ದಾಖಲಾಗುವ ಮೋದಿ!

Date:

ಇತಿಹಾಸದ ಪುಟಗಳಲ್ಲಿ ಮೌನವೂ ಒಂದು ನಿಲುವಾಗಿ ಪರಿಣಮಿಸುತ್ತದೆ. ಗಾಜಾದಲ್ಲಿ ಅಮಾಯಕರು ಮತ್ತು ಮಕ್ಕಳ ಸಾವುಗಳನ್ನು ಕಣ್ಣಾರೆ ಕಂಡೂ ರಾಜತಾಂತ್ರಿಕತೆ ಹೆಸರಿನಲ್ಲಿ ಮೌನವಾಗಿರುವುದು ಭಾರತದ ನೈತಿಕ ನಾಯಕತ್ವಕ್ಕೆ ಶೋಭೆ ತರುವಂಥದ್ದಲ್ಲ.

ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಇಡೀ ಮಾನವಕುಲವೇ ತಲೆತಗ್ಗಿಸುವಂತಹ ಕ್ರೌರ್ಯ ನಡೆಯುತ್ತಿರುವಾಗ ಜಾಗತಿಕ ಸಮುದಾಯವು ಮೌನಕ್ಕೆ ಜಾರುವುದು ಅತ್ಯಂತ ಆಘಾತಕಾರಿ. ನಾಚಿಕೆಗೇಡು. ಇಡೀ ಜಗತ್ತು ಅಂತಹದೊಂದು ನಾಚಿಕೆಗೇಡಿನ ಸಾಕ್ಷಿಯಾಗಿ ನಿಂತಿದೆ. ಗಾಜಾದಲ್ಲಿನ ಬಿಕ್ಕಟ್ಟು ಜಗತ್ತಿನ ನೈತಿಕತೆ ಮತ್ತು ಮಾನವೀಯತೆಯ ಮಹಾ ಪತನದ ಸ್ಪಷ್ಟ ಸಂಕೇತವಾಗಿ ಕಾಣುತ್ತಿದೆ. ಅದರಲ್ಲೂ, ಇಸ್ರೇಲ್-ಅಮೆರಿಕ ಎದುರು ಮೋದಿ ಸರ್ಕಾರ ಮಂಡಿಯೂರಿ ಶರಣಾಗಿರುವುದನ್ನು ಬಹಿರಂಗಗೊಳಿಸಿದೆ.

- Advertisement -

ಗಾಜಾ ಮೇಲೆ ಇಸ್ರೇಲ್ ಕ್ರೂರ ದಾಳಿ ನಡೆಸುತ್ತಿದೆ, ನರಮೇಧ ಎಸಗುತ್ತಿದೆ. ಪ್ರತಿದಿನ ನೂರಾರು ಅಮಾಯಕ ಜೀವಗಳು, ಮಹಿಳೆಯರು ಹಾಗೂ ಕಂದಮ್ಮಗಳು ಯುದ್ಧದ ಭೀಕರತೆಗೆ ಬಲಿಯಾಗುತ್ತಿದ್ದಾರೆ. 2023ರ ಅಕ್ಟೋಬರ್ 7ರಿಂದ 2025ರ ಅಕ್ಟೋಬರ್‌ವರೆಗೆ ಸುಮಾರು 73,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳಿವೆ. ಈ ಸಾವುಗಳ ಸಂಖ್ಯೆ ಈಗ 1 ಲಕ್ಷವನ್ನೂ ಮೀರಿದೆ ಎಂದು ‘ಮ್ಯಾಕ್ಸ್ ಪ್ಲಾಂಕ್ ಇನ್ಸ್‌ಟಿಟ್ಯೂಟ್‌’ನ ಜನಸಂಖ್ಯಾಶಾಸ್ತ್ರ ಸಂಶೋಧನಾ ಕೇಂದ್ರ ಅಂದಾಜು ಮಾಡಿದೆ. ಲಕ್ಷಾಂತರ ಜನರು ಸ್ಥಳಾಂತರಗೊಂಡು ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇಸ್ರೇಲ್‌ ತನ್ನ ಕ್ರೌರ್ಯವನ್ನು ಕೇವಲ ಮಿಲಿಟರಿ ದಾಳಿಗೆ ಸೀಮಿತ ಮಾಡಿಕೊಂಡಿಲ್ಲ. ಗಾಜಾ ಮೇಲೆ ಇಸ್ರೇಲ್ ವ್ಯವಸ್ಥಿತವಾಗಿ ಹೇರಿರುವ ಕಠಿಣ ದಿಗ್ಬಂಧನಗಳಿಂದಾಗಿ ಇಡೀ ಜನಸಮುದಾಯವೇ ಜೀವಂತ ನರಕವನ್ನು ಅನುಭವಿಸುತ್ತಿದೆ. ಅಲ್ಲಿನ ಪ್ರಮುಖ ಆಸ್ಪತ್ರೆಗಳು, ಶಾಲೆಗಳು ಹಾಗೂ ವಸತಿ ಸಮುಚ್ಚಯಗಳು ಧ್ವಂಸಗೊಂಡಿವೆ. ಕುಡಿಯುವ ನೀರು, ವಿದ್ಯುತ್ ಹಾಗೂ ಕನಿಷ್ಠ ವೈದ್ಯಕೀಯ ಸೌಲಭ್ಯಗಳೂ ಇಲ್ಲದಂತಾಗಿದೆ. ಜೊತೆಗೆ, ಇಸ್ರೇಲ್‌ ಹಸಿವನ್ನೂ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

ಗಾಜಾದ ಸಣ್ಣ ಮಕ್ಕಳು ಮತ್ತು ಕಂದಮ್ಮಗಳು ಹಸಿವು, ಅಪೌಷ್ಟಿಕತೆ ಹಾಗೂ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅಲ್ಲಿನ ಪುಟ್ಟ ಕಂದಮ್ಮಗಳು ಆಹಾರವಿಲ್ಲದೆ, ತೀವ್ರ ಅಪೌಷ್ಟಿಕತೆಯಿಂದಾಗಿ ಹೆತ್ತವರ ಕಣ್ಣೆದುರೇ ಪ್ರಾಣ ಬಿಡುತ್ತಿದ್ದಾರೆ. ಆದರೆ, ಹಸಿವಿನಿಂದ ನರಳಿ ಸಾಯುತ್ತಿರುವ ಮಕ್ಕಳ ಆಕ್ರಂದನವು ಜಾಗತಿಕ ನಾಯಕರ ಕಿವಿಗಳಿಗೆ ಕೇಳಿಸುತ್ತಿಲ್ಲ. ಬದುಕುಳಿದಿರುವ ಜನರೂ ನಾಳೆ ತಮಗೆ ಕನಿಷ್ಠ ಆಹಾರ ಸಿಗುತ್ತದೆಯೇ ಅಥವಾ ಮತ್ತೊಂದು ಬಾಂಬ್ ಬಿದ್ದು ಪ್ರಾಣ ಹೋಗುತ್ತದೆಯೇ ಎಂಬ ಭೀತಿಯಲ್ಲೇ ದಿನ ಕಳೆಯುವಂತಾಗಿದೆ.

ಇಸ್ರೇಲ್‌ನ ಭೀಕರ ದಾಳಿ ಮತ್ತು ಹಸಿವಿನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಗಾಜಾದ 20,179 ಮಕ್ಕಳು ಸಾವನ್ನಪ್ಪಿದ್ದಾರೆ. ‘ಪುಟ್ಟ ಮಕ್ಕಳನ್ನು ಕೊಲ್ಲುತ್ತಿರುವ ಇಸ್ರೇಲ್, ಗಾಜಾ ಜನರ ಭವಿಷ್ಯವನ್ನೇ ನಾಶಗೊಳಿಸಲು ಹೂಡಿರುವ ಸಂಚು. ಪ್ಯಾಲೆಸ್ತೀನ್‌ ಸಮುದಾಯವನ್ನು ಬುಡಸಮೇತ ಕಿತ್ತುಹಾಕಿ, ಇಡೀ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಕುರುಹುಗಳೂ ಇಲ್ಲದಂತೆ ಮಾಡಿ, ಗಾಜಾ ಪಟ್ಟಿಯನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳಲು ಹೆಣೆದಿರುವ ನರಭಕ್ಷಕ ಯೋಜನೆ’ ಎಂದು ಹೇಳಲಾಗಿದೆ.

ಗಾಜಾ ಮೇಲೆ ಇಸ್ರೇಲ್‌ ಈ ಪ್ರಮಾಣದ ಕ್ರೌರ್ಯ ಎಸಗುತ್ತಿರುವ ಸಮಯದಲ್ಲಿ ಇರಾನ್, ದಕ್ಷಿಣ ಆಫ್ರಿಕಾ, ಯುರೋಪಿಯನ್ ರಾಷ್ಟ್ರಗಳು, ಐರ್ಲೆಂಡ್, ಸ್ಪೇನ್, ನಾರ್ವೆ, ಸ್ಲೊವೇನಿಯಾ, ಕೊಲಂಬಿಯಾ, ಬೊಲಿವಿಯಾ, ಬ್ರೆಜಿಲ್, ಚಿಲಿ, ಟರ್ಕಿ, ಈಜಿಪ್ಟ್‌, ಚೀನಾ ಹಾಗೂ ರಷ್ಯಾದಂತಹ ರಾಷ್ಟ್ರಗಳು ಗಾಜಾ ಪರವಾಗಿ ದನಿ ಎತ್ತಿವೆ. ಇಸ್ರೇಲ್‌ನ ಕ್ರೌರ್ಯವನ್ನು ಖಂಡಿಸಿವೆ. ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿವೆ. ಆದರೆ, ವಿಶ್ವಗುರು ಮೋದಿ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ. ಇಸ್ರೇಲ್ ಪರ ಧೋರಣೆ ತಳೆದಿದೆ. ಅಮೆರಿಕಗೆ ಹೆದರಿ, ಇಸ್ರೇಲ್‌ ಎದುರು ಮಂಡಿಯೂರಿದೆ.

ಐತಿಹಾಸಿಕವಾಗಿ ಭಾರತವು ಯಾವಾಗಲೂ ತುಳಿತಕ್ಕೊಳಗಾದವರ, ಸ್ವಾತಂತ್ರ್ಯಕ್ಕಾಗಿ ಹೋರಾಡುವವರ ಹಾಗೂ ಜಾಗತಿಕ ಶಾಂತಿಯ ಪರವಾಗಿ ಅತ್ಯಂತ ಗಟ್ಟಿ ಧ್ವನಿಯನ್ನು ಎತ್ತಿದೆ. ಅಂತೆಯೇ, ಪ್ಯಾಲೆಸ್ತೀನ್‌ನ  ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ನಿರಂತರ ಬೆಂಬಲ ನೀಡಿದೆ. ಮಹಾತ್ಮಾ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಕಾಲದಿಂದ ಹಿಡಿದು ಮನಮೋಹನ್ ಸಿಂಗ್‌ ಕಾಲದವರೆಗೆ ಭಾರತವು ಪ್ಯಾಲೆಸ್ತೀನ್‌ಗೆ ಮುಕ್ತದ ಪರ ನಿಲುವು ತಳೆದು, ನೈತಿಕ ಬೆಂಬಲ ನೀಡಿತ್ತು. ಮಾತ್ರವಲ್ಲ, 1988ರಲ್ಲಿಯೇ ಪ್ಯಾಲೆಸ್ತೀನ್‌ಅನ್ನು ಮಧ್ಯಪ್ರಾಚ್ಯದ ಅನೇಕ ದೇಶಗಳಿಗಿಂತ ಮೊದಲೇ ಒಂದು ಸ್ವತಂತ್ರ ರಾಷ್ಟ್ರವೆಂದು ಭಾರತ ಗುರುತಿಸಿತ್ತು.

ಆದರೆ, ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಧೋರಣೆಯು ಈ ಸಾಂಪ್ರದಾಯಿಕ ನೈತಿಕ ನಿಲುವಿನಿಂದ ಸಂಪೂರ್ಣವಾಗಿ ದೂರ ಸರಿದಿದೆ. ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌ನ ಭೀಕರ ಕ್ರೌರ್ಯವನ್ನು ಮತ್ತು ಅಮಾನವೀಯ ಕೃತ್ಯವನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುವಲ್ಲಿ ಮೋದಿ ಸರ್ಕಾರವು ಸುದೀರ್ಘ ಮೌನಕ್ಕೆ ಶರಣಾಗಿದೆ.

ಹಮಾಸ್-ಇಸ್ರೇಲ್ ನಡುವೆ ಸಂಘರ್ಷ ನಡೆಯುತ್ತಿದ್ದ ಸಮಯದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಇಸ್ರೇಲ್‌ನ ಭದ್ರತೆಗೆ ದೃಢ ಬೆಂಬಲ ವ್ಯಕ್ತಪಡಿಸಿದರು. ಹಮಾಸ್‌ನ ದಾಳಿಯನ್ನು ಖಂಡಿಸಿದರು. ಆದರೆ, ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿದ್ದ ಭೀಕರ ದಾಳಿ-ಕ್ರೌರ್ಯದ ಬಗ್ಗೆ ತುಟಿಬಿಚ್ಚಲಿಲ್ಲ. ಬದಲಾಗಿ, ಇಸ್ರೇಲ್‌ನೊಂದಿಗೆ ದೃಢವಾದ ರಕ್ಷಣಾ, ತಾಂತ್ರಿಕ ಹಾಗೂ ಆರ್ಥಿಕ ಒಪ್ಪಂದಗಳನ್ನು ಮಾಡಿಕೊಂಡು ಬಂದರು.

ಮೋದಿ ಸರ್ಕಾರವು ಇಸ್ರೇಲ್ ಪರವಾಗಿ ತಳೆದಿರುವ ಈ ಮೌನ ಸಮ್ಮತಿಯ ಧೋರಣೆಯು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಹೊಂದಿದ್ದ ‘ಜಾಗತಿಕ ಶಾಂತಿಯ ದೂತ’ ಮತ್ತು ‘ಅಲಿಪ್ತ ನೀತಿಯ ನಾಯಕ’ ಎಂಬ ಗೌರವಪೂರ್ಣ ಇಮೇಜ್‌ಗೆ ತೀವ್ರ ಧಕ್ಕೆ ತಂದೊಡ್ಡಿದೆ. ಮಾತ್ರವಲ್ಲ, ಮಧ್ಯಪ್ರಾಚ್ಯದಲ್ಲಿ ಭಾರತ ಹೊಂದಿದ್ದ ಐತಿಹಾಸಿಕ ಸಂಬಂಧಕ್ಕೂ ಕೊಡಲಿ ಪೆಟ್ಟು ನೀಡಿದೆ.

ಆದ್ದರಿಂದ, ಕಾಂಗ್ರೆಸ್‌ ನಾಯಕ ಸೋನಿಯಾ ಗಾಂಧಿ ಅವರು, “ಮೋದಿ ಸರ್ಕಾರದ ಮೌನ ಮತ್ತು ನಿಷ್ಕ್ರಿಯತೆಯು ಕೇವಲ ನೈತಿಕವಾಗಿ ಮಾತ್ರವಲ್ಲದೆ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಕೋನದಿಂದಲೂ ಖಂಡನೀಯ. ಪ್ಯಾಲೆಸ್ತೀನ್, ಇರಾನ್ ಹಾಗೂ ಒಟ್ಟಾರೆ ಮಧ್ಯಪ್ರಾಚ್ಯದಂತಹ ನಮ್ಮ ಐತಿಹಾಸಿಕ ಮಿತ್ರರಾಷ್ಟ್ರಗಳಿಂದ ನಾವು ದೂರವಾಗಿದ್ದೇವೆ. ಈ ಪ್ರದೇಶದಲ್ಲಿ ಭಾರತ ಹೊಂದಿದ್ದ ಐತಿಹಾಸಿಕ ಬಾಂಧವ್ಯದ ಕಾರಣದಿಂದಾಗಿ ಪಡೆಯಬಹುದಾಗಿದ್ದ ರಾಜತಾಂತ್ರಿಕ ಮಧ್ಯಸ್ಥಿಕೆಗಾರನ ಸ್ಥಾನವನ್ನು ಪಾಕಿಸ್ತಾನ ಆಕ್ರಮಿಸಿಕೊಳ್ಳಲು ಮೋದಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಮ್ಮ ಕಾರ್ಯತಂತ್ರದ ಹಿತಾಸಕ್ತಿ ಮತ್ತು ನೈತಿಕತೆಯನ್ನು ಬಲಿಕೊಟ್ಟಿರುವುದರ ಹಿಂದೆ ಪ್ರಧಾನಿ ಮೋದಿ ಮತ್ತು ಪ್ರಧಾನಿ ನೆತನ್ಯಾಹು ನಡುವಿನ ವೈಯಕ್ತಿಕ ಸ್ನೇಹದ ಹೊರತಾಗಿ ಬೇರೇನೂ ಇಲ್ಲ” ಎಂದು ಖಂಡಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಟ್ರಂಪ್‌ ದರ್ಪಕ್ಕೆ ಮೆಲೋನಿ ಶಿಸ್ತಿನ ಚಾಟಿ: ಮೋದಿಯವರ ‘ಮೆಲೋಡಿ’ ರಾಜಕಾರಣಕ್ಕೊಂದು ಪಾಠ!

ಭಾರತವು ಮಧ್ಯಪ್ರಾಚ್ಯದ ಅರಬ್ ರಾಷ್ಟ್ರಗಳು ಮತ್ತು ಇರಾನ್‌ನಂತಹ ದೇಶಗಳೊಂದಿಗೆ ದಶಕಗಳಿಂದ ಅತ್ಯಂತ ಆಪ್ತ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಸೌಹಾರ್ದಯುತವಾಗಿ ಕಾಪಾಡಿಕೊಂಡು ಬಂದಿತ್ತು. ಲಕ್ಷಾಂತರ ಭಾರತೀಯರು ಈ ದೇಶಗಳಲ್ಲಿ ಉದ್ಯೋಗ ಮಾಡುತ್ತಾ ದೇಶದ ಆರ್ಥಿಕತೆಗೆ ಬಿಲಿಯನ್ ಗಟ್ಟಲೆ ಕೊಡುಗೆ ನೀಡುತ್ತಿದ್ದಾರೆ. ಆದರೆ, ಇಸ್ರೇಲ್‌ನ ಕ್ರೌರ್ಯದ ವಿಷಯದಲ್ಲಿ ಮೋದಿ ಸರ್ಕಾರ ತೋರುತ್ತಿರುವ ಏಕಪಕ್ಷೀಯ ಇಸ್ರೇಲ್ ಪರ ಧೋರಣೆಯು ಈ ಐತಿಹಾಸಿಕ ಬಾಂಧವ್ಯವನ್ನು ಧೂಳಿಪಟ ಮಾಡುವ ಭೀತಿಯನ್ನು ಮೂಡಿಸಿದೆ.

ಇಡೀ ಅರಬ್ ಜಗತ್ತು ಮತ್ತು ಜಾಗತಿಕ ಸಮುದಾಯವು ಪ್ಯಾಲೆಸ್ತೀನ್‌ ಜನರ ನೋವಿಗೆ ಮಿಡಿಯುತ್ತಿರುವಾಗ, ಭಾರತವು ಇಸ್ರೇಲ್‌ನ ಕೃತ್ಯಗಳನ್ನು ಖಂಡಿಸದೆ ಮೌನವಾಗಿರುವುದು ಮಧ್ಯಪ್ರಾಚ್ಯದ ನಮ್ಮ ಹಳೆಯ ಮಿತ್ರರಾಷ್ಟ್ರಗಳನ್ನು ನಮ್ಮಿಂದ ದೂರಾಗುವಂತೆ ಮಾಡಿದೆ. ರಾಜತಾಂತ್ರಿಕ ವಲಯದಲ್ಲಿ ಭಾರತವು ಹೊಂದಿದ್ದ ಪ್ರಭಾವಶಾಲಿ ಮತ್ತು ವಿಶ್ವಾಸಾರ್ಹ ಸ್ಥಾನವನ್ನು ಇತರ ದೇಶಗಳು ಬಳಸಿಕೊಳ್ಳಲು ಇದು ದಾರಿ ಮಾಡಿಕೊಟ್ಟಿದೆ. ಕೇವಲ ಒಬ್ಬ ನಾಯಕನೊಂದಿಗಿನ ವೈಯಕ್ತಿಕ ಸ್ನೇಹ ಅಥವಾ ತಾತ್ಕಾಲಿಕ ಹಿತಾಸಕ್ತಿಗಾಗಿ ದಶಕಗಳ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾಂಪ್ರದಾಯಿಕ ಮಿತ್ರರನ್ನು ಕಳೆದುಕೊಳ್ಳುವುದು ದೀರ್ಘಾವಧಿಯಲ್ಲಿ ದೇಶದ ಭದ್ರತೆ ಮತ್ತು ರಾಜತಾಂತ್ರಿಕತೆಗೆ ಹೊಡೆತ ನೀಡಲಿದೆ.

ಇತಿಹಾಸದ ಪುಟಗಳಲ್ಲಿ ಮೌನವೂ ಒಂದು ನಿಲುವಾಗಿ ಪರಿಣಮಿಸುತ್ತದೆ. ಗಾಜಾದಲ್ಲಿ ಅಮಾಯಕರು ಮತ್ತು ಮಕ್ಕಳ ಸಾವುಗಳನ್ನು ಕಣ್ಣಾರೆ ಕಂಡೂ ರಾಜತಾಂತ್ರಿಕತೆ ಹೆಸರಿನಲ್ಲಿ ಮೌನವಾಗಿರುವುದು ಭಾರತದ ನೈತಿಕ ನಾಯಕತ್ವಕ್ಕೆ ಶೋಭೆ ತರುವಂಥದ್ದಲ್ಲ. ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಅದಕ್ಕೆ ಮೋದಿ ಸರ್ಕಾರ ತಳೆದಿರುವ ನಿರ್ಲಿಪ್ತ ಮೌನ- ಈ ಎರಡೂ ಇಂದಿನ ಭಾರತದ ನೈತಿಕ ದಿಕ್ಸೂಚಿಯನ್ನು ನಿರ್ಧರಿಸುವ ಅಂಶಗಳಾಗಿವೆ. ಶಕ್ತಿಶಾಲಿಯಾದವರ ಕ್ರೌರ್ಯದಷ್ಟೇ, ಅದನ್ನು ತಡೆಯಬಲ್ಲ ಸಾಮರ್ಥ್ಯವಿದ್ದೂ ಮೌನವಾಗಿರುವವರ ನಿಷ್ಕ್ರಿಯತೆಯೂ ಇತಿಹಾಸದ ಪುಟಗಳಲ್ಲಿ ಅಪರಾಧವೆಂದೇ ಪರಿಗಣಿಸಲ್ಪಡುತ್ತದೆ. ಮಾನವೀಯತೆಯ ಉಳಿವಿಗಾಗಿ ಇಂದಿನ ಜಗತ್ತಿಗೆ ಬೇಕಿರುವುದು ಶಸ್ತ್ರಾಸ್ತ್ರಗಳಲ್ಲ, ಶಾಂತಿ ಮತ್ತು ಜೀವಪರ ಕರುಣೆ ಎಂಬುದನ್ನು ಮೋದಿ ಸರ್ಕಾರ ಅರಿಯಬೇಕಿದೆ. ತನ್ನ ಮೌನ ಮುರಿದು, ಜೀವಪರ ನಿಲುವನ್ನು ತಳೆದು, ಮಾನವೀಯ ನೆರವು ತಲುಪಿಸಲು ಜಾಗತಿಕ ಮಟ್ಟದಲ್ಲಿ ಒತ್ತಡ ಹೇರಬೇಕಿದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...