ವಿಶ್ವ ಟಿಬೆಟ್ ದಿನವನ್ನು ಜುಲೈ 6ರಂದೇ ಆಚರಿಸಲು ಮುಖ್ಯ ಕಾರಣ, ಅಂದು ಟಿಬೆಟಿಯನ್ನರ ಪರಮೋಚ್ಚ ನಾಯಕ ಹಾಗೂ ಬೌದ್ಧ ಧರ್ಮಗುರು 14ನೇ ದಲೈ ಲಾಮಾ (Tenzin Gyatso) ಅವರ ಜನ್ಮದಿನ ಆಗಿರುವುದು. ವಿಶ್ವ ಟಿಬೆಟ್ ದಿನದ ಬಗ್ಗೆ ತಿಳಿಯುತ್ತಾ ನಾವು 'ಟಿಬೆಟ್ ದಿನ' ಅಥವಾ 'ಟಿಬೆಟ್ ರಾಷ್ಟ್ರೀಯ ದಂಗೆ ದಿನ'ದ ಬಗ್ಗೆಯೂ ತಿಳಿಯುವುದು ಮುಖ್ಯ. ಇವೆರಡೂ ಒಂದಕ್ಕೊಂದು ಕೊಂಡಿ.
ಹಿಮಾಲಯದ ಮಡಿಕೆ ಪರ್ವತಗಳಲ್ಲಿ ಹುದುಗಿರುವ ಜಗತ್ತಿನ ಅತ್ಯಂತ ಎತ್ತರದ ಪ್ರಸ್ಥಭೂಮಿ ಟಿಬೆಟ್. ಭಾರತಕ್ಕೂ ಟಿಬೆಟ್‌ಗೂ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶತಶತಮಾನಗಳ ಬಾಂಧವ್ಯವಿದೆ. ಜಾಗತಿಕ ರಾಜಕಾರಣದ ಪುಟಗಳಲ್ಲಿ ಪ್ರತಿ ವರ್ಷ ಮಾರ್ಚ್ 10ರ ದಿನವನ್ನು ಟಿಬೆಟ್ ದಿನ ಅಥವಾ ಅಧಿಕೃತವಾಗಿ “ಟಿಬೆಟ್ ರಾಷ್ಟ್ರೀಯ ದಂಗೆ ದಿನ” ಎಂದು ಆಚರಿಸಲಾಗುತ್ತದೆ. ಆದರೆ ಟಿಬೆಟಿಯನ್ನರ ಪರಮೋಚ್ಚ ಆಧ್ಯಾತ್ಮಿಕ ನಾಯಕರಾದ 14ನೇ ದಲೈ ಲಾಮಾ (Tenzin Gyatso) ಅವರ ಜನ್ಮದಿನವಾದ ಕಾರಣ ‘ವಿಶ್ವ ಟಿಬೆಟ್ ದಿನ’ವನ್ನು ಜುಲೈ 6ರಂದು ಆಚರಿಸಲಾಗುತ್ತದೆ.
ಟಿಬೆಟ್ ದಿನವು ಕೇವಲ ಒಂದು ಪ್ರಪ್ರಥಮ ಐತಿಹಾಸಿಕ ಘಟನೆಯ ನೆನಪಲ್ಲದೆ, ಇದು ಒಂದು ಇಡೀ ಸಮುದಾಯದ ಅಸ್ತಿತ್ವ, ಹೋರಾಟ ಮತ್ತು ಭಾರತದ ಭೂರಾಜಕೀಯ ಇತಿಹಾಸವನ್ನು ಬದಲಿಸಿದ ಮಹತ್ವದ ತಿರುವು. ಇವೆಲ್ಲವೂ ಕಳೆದು 1997ರಲ್ಲಿ ಶಿಕಾಗೋದಲ್ಲಿ ನಡೆದ ಜಾಗತಿಕ ಸಮಾವೇಶವೊಂದರಲ್ಲಿ, ಟಿಬೆಟ್‌ನ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಬೆಂಬಲಿಸುವ ಮತ್ತು ಜಗತ್ತಿನಾದ್ಯಂತ ಟಿಬೆಟಿಯನ್ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಟಿಬೆಟ್ ದಿನದ ಆಚರಣೆಯನ್ನು ಪ್ರಸ್ತಾಪಿಸಲಾಯಿತು. ತದನಂತರ 1998ರಿಂದ ಅಧಿಕೃತವಾಗಿ ‘ವಿಶ್ವ ಟಿಬೆಟ್ ದಿನ’ವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಇನ್ನೂ 30-40 ವರ್ಷ ಬದುಕುವ ಆಶಯ ಹೊಂದಿದ್ದೇನೆ: ದಲೈಲಾಮಾ
ಏನಿದು ವಿಶ್ವ ಟಿಬೆಟ್ ದಿನ, ಟಿಬೆಟ್ ರಾಷ್ಟ್ರೀಯ ದಂಗೆ ದಿನಕ್ಕೂ ಇರುವ ವ್ಯತ್ಯಾಸವೇನು?
ಟಿಬೆಟ್ ರಾಷ್ಟ್ರೀಯ ದಂಗೆ ದಿನ: ಪ್ರತಿ ವರ್ಷ ಮಾರ್ಚ್ 10ರಂದು ಟಿಬೆಟ್ ರಾಷ್ಟ್ರೀಯ ದಂಗೆ ದಿನ ಆಚರಿಸಲಾಗುತ್ತದೆ. 1959ರ ಲಹಾಸಾ ದಂಗೆ ಮತ್ತು ಚೀನಾ ಆಕ್ರಮಣದ ವಿರುದ್ಧದ ಹೋರಾಟದ ನೆನಪಾಗಿ ಈ ದಿನ ಆಚರಿಸಲಾಗುತ್ತದೆ. ಇದು ಹೋರಾಟ, ಹುತಾತ್ಮರ ಸ್ಮರಣೆ ಮತ್ತು ರಾಜಕೀಯ ಹಕ್ಕೊತ್ತಾಯದ ದಿನ.
ವಿಶ್ವ ಟಿಬೆಟ್ ದಿನ: ಪ್ರತಿ ವರ್ಷ ಜುಲೈ 6 ವಿಶ್ವ ಟಿಬೆಟ್ ದಿನ ಆಚರಿಸಲಾಗುತ್ತದೆ. ದಲೈ ಲಾಮಾ ಅವರ ಜನ್ಮದಿನದ ಗೌರವಾರ್ಥವಾಗಿ ಈ ದಿನ ಆಚರಣೆ ಆರಂಭಿಸಲಾಯಿತು. ಇದು ಟಿಬೆಟಿಯನ್ ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನ ಮತ್ತು ಶಾಂತಿಯ ಆಚರಣೆಯ ದಿನ.
ವಿಶ್ವ ಟಿಬೆಟ್ ದಿನ ಎಂದರೇನು? ಇದರ ಉಗಮ ಹೇಗಾಯಿತು?
ವಿಶ್ವ ಟಿಬೆಟ್ ದಿನವು ಕೇವಲ ಒಂದು ಸಾಂಕೇತಿಕ ಆಚರಣೆಯಲ್ಲ; ಇದು ಚೀನಾದ ಆಕ್ರಮಣದ ಅಡಿಯಲ್ಲಿ ನಲುಗುತ್ತಿರುವ ಟಿಬೆಟಿಯನ್ ಸಂಸ್ಕೃತಿಯ ರಕ್ಷಣೆ ಹಾಗೂ ಅಲ್ಲಿನ ಜನರ ಧಾರ್ಮಿಕ ಮತ್ತು ನಾಗರಿಕ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಜಾಗತಿಕ ಜಾಗೃತಿ ಅಭಿಯಾನವಾಗಿದೆ. ಈ ದಿನದ ಆಚರಣೆಯು 1997ರಲ್ಲಿ ಅಮೆರಿಕದ ಚಿಕಾಗೋ ನಗರದಲ್ಲಿ ಆರಂಭವಾಯಿತು. ಇತಿಹಾಸಕಾರ ಮತ್ತು ಪುಲಿಟ್ಜರ್ ಪ್ರಶಸ್ತಿ ನಾಮಿನಿ ರಿಚರ್ಡ್ ರೊಸೆನ್‌ಕ್ರಾನ್ಜ್ ಹಾಗೂ ಟಿಬೆಟಿಯನ್ ಆಧ್ಯಾತ್ಮಿಕ ಗುರು 14 ನೇ ದಲೈ ಲಾಮಾ ಅವರ ಕಿರಿಯ ಸಹೋದರ ತೆನ್ಜಿನ್ ಚೋಯಗ್ಯಾಲ್ ಅವರ ನಡುವೆ ನಡೆದ ಸಭೆಯಲ್ಲಿ ಈ ಪರಿಕಲ್ಪನೆ ಮೂಡಿದೆ.
ವಿಶ್ವ ಟಿಬೆಟ್ ದಿನವನ್ನು ಜುಲೈ 6 ರಂದೇ ಆಚರಿಸಲು ಮುಖ್ಯ ಕಾರಣ, ಅಂದು ಟಿಬೆಟಿಯನ್ನರ ಪರಮೋಚ್ಚ ನಾಯಕ ಹಾಗೂ ಬೌದ್ಧ ಧರ್ಮಗುರು 14ನೇ ದಲೈ ಲಾಮಾ (Tenzin Gyatso) ಅವರ ಜನ್ಮದಿನ ಆಗಿರುವುದು. ದಲೈ ಲಾಮಾ ಅವರ ಶಾಂತಿ ಸಂದೇಶ ಮತ್ತು ಟಿಬೆಟ್‌ನ ಹೋರಾಟದ ಸಂಕೇತವಾಗಿ ಈ ದಿನವನ್ನು ಆಯ್ದುಕೊಳ್ಳಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಟಿಬೆಟ್ ಮುಕ್ತಿಗಾಗಿ 2604 ಕಿ.ಮೀ ಸೈಕಲ್ ಯಾತ್ರೆ; ಚೀನಾದ ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಜನಜಾಗೃತಿ
ಚೀನಾ ಆಕ್ರಮಿತ ಟಿಬೆಟ್‌ನಲ್ಲಿ ಕಳೆದುಹೋಗಿರುವ ಮೂಲಭೂತ ಹಕ್ಕುಗಳು ಮತ್ತು ಮುಕ್ತ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಜಾಗತಿಕ ಬೆಂಬಲವನ್ನು ಕ್ರೋಡೀಕರಿಸುವುದು. ಚೀನಾ ಸರ್ಕಾರವು ಟಿಬೆಟಿಯನ್ ಭಾಷೆ, ಸಂಸ್ಕೃತಿ ಮತ್ತು ಬೌದ್ಧ ಧರ್ಮದ ಆಚರಣೆಗಳ ಮೇಲೆ ಹೇರುತ್ತಿರುವ ನಿರ್ಬಂಧಗಳು ಮತ್ತು ಅಲ್ಲಿ ನಡೆಯುತ್ತಿರುವ ವ್ಯವಸ್ಥಿತ ಸಾಂಸ್ಕೃತಿಕ ನಾಶವನ್ನು ಪ್ರಪಂಚದ ಮುಂದೆ ತೆರೆದಿಡುವುದು. ಟಿಬೆಟ್‌ನ ವಿಶಿಷ್ಟ ಆಧ್ಯಾತ್ಮ, ಶಾಂತಿಪ್ರಿಯ ಜೀವನಪದ್ಧತಿ ಮತ್ತು ಪರಿಸರ ಸ್ನೇಹಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಭಾರತ ಮತ್ತು ಟಿಬೆಟ್: ಶತಮಾನಗಳ ಬಾಂಧವ್ಯ
ಭಾರತ ಮತ್ತು ಟಿಬೆಟ್ ನಡುವಿನ ಸಂಬಂಧವು ನಿನ್ನೆ ಮೊನ್ನೆಯದಲ್ಲ. ಇದು ರಾಜಕೀಯ ಗಡಿಗಳಿಗಿಂತ ಮಿಗಿಲಾದ, ಆತ್ಮೀಯ ಹಾಗೂ ಆಧ್ಯಾತ್ಮಿಕ ಬಾಂಧವ್ಯವನ್ನು ಹೊಂದಿದೆ. 8ನೇ ಶತಮಾನದಲ್ಲಿ ಭಾರತದ ನಲಂದಾ ವಿಶ್ವವಿದ್ಯಾಲಯದ ಮಹಾನ್ ತತ್ವಜ್ಞಾನಿ ಶಾಂತರಕ್ಷಿತ ಮತ್ತು ಭಾರತೀಯ ಬೌದ್ಧ ಗುರು ಪದ್ಮಸಂಭವ (ಗುರು ರಿಂಪೋಚೆ) ಅವರು ಟಿಬೆಟ್‌ಗೆ ಭೇಟಿ ನೀಡಿ ಅಲ್ಲಿ ವಜ್ರಯಾನ ಬೌದ್ಧ ಧರ್ಮವನ್ನು ಪ್ರತಿಷ್ಠಾಪಿಸಿದರು. ಟಿಬೆಟ್‌ನ ಮೊದಲ ಮಠವಾದ ‘ಸಮ್ಯೆ’ ಮಠವನ್ನು ಸ್ಥಾಪಿಸಿದ್ದು ಇದೇ ಭಾರತೀಯ ಗುರುಗಳು.
ಭಾರತದ ಮೇಲೆ ನಡೆದ ಐತಿಹಾಸಿಕ ಆಕ್ರಮಣಗಳ ಸಮಯದಲ್ಲಿ ನಶಿಸಿಹೋದ ಅನೇಕ ಅಮೂಲ್ಯ ಸಂಸ್ಕೃತ ಗ್ರಂಥಗಳು ಮತ್ತು ಬೌದ್ಧ ತತ್ವಶಾಸ್ತ್ರದ ಹಸ್ತಪ್ರತಿಗಳನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸಿ, ಅಲ್ಲಿನ ಭೌದ್ಧ ವಿಹಾರಗಳಲ್ಲಿ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿತ್ತು. ಆ ಮೂಲಕ ಭಾರತದ ಜ್ಞಾನ ಪರಂಪರೆಯನ್ನು ಉಳಿಸಿದ ಕೀರ್ತಿ ಟಿಬೆಟ್‌ಗೆ ಸಲ್ಲುತ್ತದೆ.
ಇನ್ನು ಟಿಬೆಟಿಯನ್ ಲಿಪಿಯು ಭಾರತದ ಬ್ರಾಹ್ಮಿ ಲಿಪಿಯಿಂದ ಪ್ರೇರಿತವಾಗಿದೆ. ಹಾಗೆಯೇ, ಟಿಬೆಟಿಯನ್ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ‘ಸೋವಾ-ರಿಗ್ಪಾ’ (Sowa-Rigpa) ಭಾರತದ ಆಯುರ್ವೇದದ ಪ್ರಭಾವವನ್ನು ಬಲವಾಗಿ ಹೊಂದಿದೆ. ಭಾರತೀಯರ ಪರಮ ಪವಿತ್ರ ಕ್ಷೇತ್ರಗಳಾದ ಕೈಲಾಸ ಪರ್ವತ ಮತ್ತು ಮಾನಸಸರೋವರ ಇರುವುದು ಇದೇ ಟಿಬೆಟ್ ಪ್ರಸ್ಥಭೂಮಿಯಲ್ಲಿ. ಶತಮಾನಗಳಿಂದಲೂ ಭಾರತೀಯರು ಯಾವುದೇ ಅಡೆತಡೆಯಿಲ್ಲದೆ ಇಲ್ಲಿಗೆ ಯಾತ್ರೆ ಕೈಗೊಳ್ಳುತ್ತಿದ್ದರು.
ಇತಿಹಾಸದ ಕರಾಳ ಅಧ್ಯಾಯದ ಮೆಲುಕು
ವಿಶ್ವ ಟಿಬೆಟ್ ದಿನದ ಬಗ್ಗೆ ತಿಳಿಯುತ್ತಾ ನಾವು ಟಿಬೆಟ್ ದಿನ ಅಥವಾ ಟಿಬೆಟ್ ರಾಷ್ಟ್ರೀಯ ದಂಗೆ ದಿನದ ಬಗ್ಗೆಯೂ ತಿಳಿಯುವುದು ಮುಖ್ಯ. ಇವೆರಡೂ ಒಂದಕ್ಕೊಂದು ಕೊಂಡಿ. 1949-50ರಲ್ಲಿ ಚೀನಾದ ಕಮ್ಯುನಿಸ್ಟ್ ಸರ್ಕಾರ ಟಿಬೆಟ್ ಮೇಲೆ ಆಕ್ರಮಣ ಮಾಡಲು ಆರಂಭಿಸಿತು. ತನ್ನ ಸೇನಾ ಬಲದಿಂದ 1951ರಲ್ಲಿ ಟಿಬೆಟ್ ಆಡಳಿತದ ಮೇಲೆ “17 ಅಂಶಗಳ ಒಪ್ಪಂದ”ವನ್ನು ಬಲವಂತವಾಗಿ ಹೇರಿತು. ಈ ಒಪ್ಪಂದದ ಪ್ರಕಾರ ಟಿಬೆಟ್‌ಗೆ ಸ್ವಾಯತ್ತತೆ ನೀಡುವುದಾಗಿ ಚೀನಾ ಭರವಸೆ ನೀಡಿತ್ತಾದರೂ, ದಿನಕಳೆದಂತೆ ಟಿಬೆಟಿಯನ್ ಸಂಸ್ಕೃತಿ, ಬೌದ್ಧ ಧರ್ಮದ ಆಚರಣೆಗಳು ಮತ್ತು ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಶುರು ಮಾಡಿತು. ಖಾಮ್ ಮತ್ತು ಅಮ್ಡೋ ಪ್ರಾಂತ್ಯಗಳಲ್ಲಿ ಚೀನಾದ ದಬ್ಬಾಳಿಕೆಯ ವಿರುದ್ಧ ಟಿಬೆಟಿಯನ್ನರ ಸಣ್ಣ ಪ್ರಮಾಣದ ಸಶಸ್ತ್ರ ಪ್ರತಿರೋಧಗಳು ಆರಂಭವಾಗಿದ್ದವು.
1959ರ ಮಾರ್ಚ್ ಆರಂಭದಲ್ಲಿ ಟಿಬೆಟಿಯನ್ನರ ಆಧ್ಯಾತ್ಮಿಕ ಹಾಗೂ ರಾಜಕೀಯ ನಾಯಕರಾದ 14ನೇ ದಲೈ ಲಾಮಾ ಅವರಿಗೆ ಲಹಾಸಾದಲ್ಲಿದ್ದ ಚೀನಾ ಸೇನಾ ಪ್ರಧಾನ ಕಚೇರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ವೀಕ್ಷಿಸಲು ಚೀನಾ ಅಧಿಕಾರಿಗಳು ಆಹ್ವಾನ ನೀಡಿದ್ದರು. ಆದರೆ, ಈ ಆಹ್ವಾನದ ಹಿಂದೆ ಒಂದು ಕಠಿಣ ಷರತ್ತಿತ್ತು. ಅದುವೇ ದಲೈ ಲಾಮಾ ಅವರು ಯಾವುದೇ ಅಂಗರಕ್ಷಕರಿಲ್ಲದೆ, ಸಾಂಪ್ರದಾಯಿಕ ಸೈನಿಕರ ಭದ್ರತೆಯಿಲ್ಲದೆ ಗುಪ್ತವಾಗಿ ಚೀನಾ ಸೇನಾ ಕಚೇರಿಗೆ ಬರಬೇಕು ಎಂಬುದು.
ಈ ಸುದ್ದಿ ಲಹಾಸಾದಾದ್ಯಂತ ಹರಡುತ್ತಿದ್ದಂತೆ, ಚೀನಾ ಸೇನೆಯು ದಲೈ ಲಾಮಾ ಅವರನ್ನು ಅಪಹರಿಸಲು ಸಂಚು ರೂಪಿಸಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ತೀವ್ರವಾಯಿತು. ಮಾರ್ಚ್ 10ರಂದು ಸುಮಾರು 30,000ಕ್ಕೂ ಹೆಚ್ಚು ಟಿಬೆಟಿಯನ್ನರು ದಲೈ ಲಾಮಾ ಅವರ ಸುರಕ್ಷತೆಗಾಗಿ ಅವರ ಬೇಸಿಗೆ ಅರಮನೆಯಾದ ‘ನೊರ್ಬುಲಿಂಕಾ'(Norbulingka)ವನ್ನು ಸುತ್ತುವರೆದರು. ಈ ಶಾಂತಿಯುತ ಪ್ರತಿರೋಧವು ಕ್ರಮೇಣ ಚೀನಾದ ಆಕ್ರಮಣದ ವಿರುದ್ಧದ ಬೃಹತ್ ರಾಷ್ಟ್ರೀಯ ದಂಗೆಯಾಗಿ ರೂಪಾಂತರಗೊಂಡಿತು. ಟಿಬೆಟಿಯನ್ನರು ಚೀನಾದೊಂದಿಗಿನ ಒಪ್ಪಂದವನ್ನು ತಿರಸ್ಕರಿಸಿ, ಸ್ವತಂತ್ರ ಟಿಬೆಟ್‌ಗಾಗಿ ಘೋಷಣೆಗಳನ್ನು ಕೂಗಿದರು. ಬಳಿಕ ಚೀನಾ ಸೇನೆಯು ಈ ದಂಗೆಯನ್ನು ಹತ್ತಿಕ್ಕಲು ಭೀಕರ ಫಿರಂಗಿ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಈ ದಂಗೆಯ ದಮನದ ಅವಧಿಯಲ್ಲಿ ಸಾವಿರಾರು ಅಮಾಯಕ ಟಿಬೆಟಿಯನ್ನರು ಪ್ರಾಣ ಕಳೆದುಕೊಂಡರು.

ತಮ್ಮ ಜನರ ಪ್ರಾಣಹಾನಿಯನ್ನು ತಡೆಯಲು ಮತ್ತು ಟಿಬೆಟ್‌ನ ಅಸ್ತಿತ್ವವನ್ನು ಉಳಿಸಲು ದಲೈ ಲಾಮಾ ಅವರು ದೇಶ ತೊರೆಯುವುದು ಅನಿವಾರ್ಯವಾಯಿತು. ಮಾರ್ಚ್ 31, 1959 ರಂದು ದಲೈ ಲಾಮಾ ಅವರು ಅರುಣಾಚಲ ಪ್ರದೇಶದ (ಅಂದಿನ ನೆಫಾ – NEFA) ತವಾಂಗ್ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದರು. ಅಂದಿನ ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ದಲೈ ಲಾಮಾ ಮತ್ತು ಅವರೊಂದಿಗೆ ಬಂದ ಸಾವಿರಾರು ಟಿಬೆಟಿಯನ್ ನಿರಾಶ್ರಿತರಿಗೆ ರಾಜಕೀಯ ಆಶ್ರಯ ನೀಡಲು ತಕ್ಷಣವೇ ಒಪ್ಪಿಗೆ ಸೂಚಿಸಿದರು. ಪ್ರಸ್ತುತ ಹಿಮಾಚಲ ಪ್ರದೇಶದ ಧರ್ಮಶಾಲಾ (ಮ್ಯಾಕ್ಲಿಯೋಡ್ ಗಂಜ್) ಟಿಬೆಟಿಯನ್ನರ ಸರ್ಕಾರ (Central Tibetan Administration – CTA) ಮತ್ತು ದಲೈ ಲಾಮಾ ಅವರ ಆವಾಸಸ್ಥಾನವಾಗಿದೆ. ಇದನ್ನು “ಸಣ್ಣ ಲಹಾಸಾ” ಎಂದೂ ಕರೆಯಲಾಗುತ್ತದೆ. ಭಾರತದ ಕರ್ನಾಟಕದ ಬೈಲಕುಪ್ಪೆ, ಮುಂಡಗೋಡು ಸೇರಿದಂತೆ ದೇಶದ ಹಲವೆಡೆ ಟಿಬೆಟಿಯನ್ ಪುನರ್ವಸತಿ ಕೇಂದ್ರಗಳಿವೆ.
ಕರ್ನಾಟಕದಲ್ಲಿ ಟಿಬೆಟಿಯನ್ ವಸಾಹತು
1959ರಲ್ಲಿ ಟಿಬೆಟ್‌ನಿಂದ ಪಲಾಯನ ಮಾಡಿ ಭಾರತಕ್ಕೆ ಬಂದ ಸಹಸ್ರಾರು ಟಿಬೆಟಿಯನ್ ನಿರಾಶ್ರಿತರಿಗೆ ಆಶ್ರಯ ನೀಡುವಲ್ಲಿ ಕರ್ನಾಟಕ ರಾಜ್ಯವು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಪಾತ್ರವನ್ನು ವಹಿಸಿದೆ. ಇಂದು ಭಾರತದಲ್ಲೇ ಅತ್ಯಂತ ಹೆಚ್ಚು ಟಿಬೆಟಿಯನ್ ನಿರಾಶ್ರಿತರು ವಾಸಿಸುತ್ತಿರುವುದು ಕರ್ನಾಟಕದಲ್ಲಿ ಎಂಬುದು ಗಮನಾರ್ಹ ಸಂಗತಿ. 1959ರಲ್ಲಿ ದಲೈ ಲಾಮಾ ಅವರು ಭಾರತಕ್ಕೆ ಬಂದಾಗ, ಅವರೊಂದಿಗೆ ಸುಮಾರು 80,000ಕ್ಕೂ ಹೆಚ್ಚು ಟಿಬೆಟಿಯನ್ನರು ನಿರಾಶ್ರಿತರಾಗಿ ಬಂದರು. ಹಿಮಾಲಯದ ತಂಪಾದ ವಾತಾವರಣಕ್ಕೆ ಒಗ್ಗಿಕೊಂಡಿದ್ದ ಇವರಿಗೆ ಭಾರತದ ಬಯಲು ಸೀಮೆಯಲ್ಲಿ ಪುನರ್ವಸತಿ ಕಲ್ಪಿಸುವುದು ದೊಡ್ಡ ಸವಾಲಾಗಿತ್ತು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ನಿರಾಶ್ರಿತರಿಗೆ ಭೂಮಿ ನೀಡಿ ಆಶ್ರಯ ಕೊಡುವಂತೆ ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು.
ಈ ಕರೆಗೆ ತಕ್ಷಣವೇ ಹಾಗೂ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದವರು ಮೈಸೂರು ರಾಜ್ಯದ (ಪ್ರಸ್ತುತ ಕರ್ನಾಟಕ) ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ ಅವರು. ಅವರು ಟಿಬೆಟಿಯನ್ ನಿರಾಶ್ರಿತರ ಪುನರ್ವಸತಿಗಾಗಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿ 3,000 ಎಕರೆ ದಟ್ಟ ಅರಣ್ಯ ಹಾಗೂ ಪಾಳು ಭೂಮಿಯನ್ನು ಮಂಜೂರು ಮಾಡಿದರು.
ಬೈಲಕುಪ್ಪೆಯಲ್ಲಿ 1961ರಲ್ಲಿ ಭಾರತದ ಅತ್ಯಂತ ಮೊದಲ ಅಧಿಕೃತ ಟಿಬೆಟಿಯನ್ ನಿರಾಶ್ರಿತರ ವಸಾಹತು ‘ಲುಗ್ಸಮ್ ಸ್ಯಾಮ್ದುಪ್ಲಿಂಗ್’ (Lugsum Samdupling) ಸ್ಥಾಪನೆಯಾಯಿತು. ಆರಂಭದಲ್ಲಿ ಸುಮಾರು 3,000 ಟಿಬೆಟಿಯನ್ನರು ಇಲ್ಲಿಗೆ ಬಂದು ನೆಲೆಸಿದರು. ಅವರು ಕಾಡನ್ನು ಕಡಿದು, ಭೂಮಿಯನ್ನು ಹದಗೊಳಿಸಿ ಕೃಷಿ ಯೋಗ್ಯವಾಗಿಸಿದರು. 1969ರಲ್ಲಿ ಬೈಲಕುಪ್ಪೆಯಲ್ಲೇ ಮತ್ತೊಂದು ವಸಾಹತು ‘ಡಿಕೆಯಿ ಲಾರ್ಸೋ’ (Dickeyi Larsoe) ಸ್ಥಾಪಿತವಾಯಿತು. ಪ್ರಸ್ತುತ ಕರ್ನಾಟಕದಲ್ಲಿ 5 ಪ್ರಮುಖ ಟಿಬೆಟಿಯನ್ ವಸಾಹತುಗಳಿವೆ.
ಹೀಗೆ ಭಾರತವು ಮಾನವೀಯತೆಯ ಆಧಾರದ ಮೇಲೆ ಟಿಬೆಟಿಯನ್ನರಿಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸೌಲಭ್ಯಗಳನ್ನು ನೀಡಿದ್ದರೂ, ರಾಜತಾಂತ್ರಿಕವಾಗಿ ಚೀನಾದೊಂದಿಗೆ ಶಾಂತಿ ಕಾಯ್ದುಕೊಳ್ಳಲು ‘ಟಿಬೆಟ್ ಚೀನಾದ ಸ್ವಾಯತ್ತ ಭಾಗ’ ಎಂಬ ನಿಲುವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. 2003ರ ಅಟಲ್ ಬಿಹಾರಿ ವಾಜಪೇಯಿ ಅವರ ಚೀನಾ ಭೇಟಿಯ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.
ಚೀನಾ ಸರ್ಕಾರವು ಟಿಬೆಟ್‌ನಲ್ಲಿ ಕಠಿಣ ನಿಯಂತ್ರಣಗಳನ್ನು ಇಂದಿಗೂ ಹೇರಿದ್ದರೂ, ಜಾಗತಿಕ ವೇದಿಕೆಯಲ್ಲಿ ಟಿಬೆಟಿಯನ್ನರ ಧ್ವನಿ ಅಡಗಿಲ್ಲ. ಅಷ್ಟಕ್ಕೂ ವಿಶ್ವ ಟಿಬೆಟ್ ದಿನವು ಕೇವಲ ಒಂದು ದೇಶದ ಸ್ವಾತಂತ್ರ್ಯದ ಕೂಗಲ್ಲ; ಅದು ಬಲವಂತದ ಆಕ್ರಮಣದ ವಿರುದ್ಧ ಅಹಿಂಸೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳಲು ಒಂದು ಇಡೀ ಜನಾಂಗ ನಡೆಸುತ್ತಿರುವ ಸತ್ಯಾಗ್ರಹ. ಟಿಬೆಟ್‌ನ ಭವಿಷ್ಯ ಮತ್ತು ಸ್ವಾತಂತ್ರ್ಯದ ಹೋರಾಟವು ಭಾರತದ ಗಡಿ ಭದ್ರತೆ, ಜಲ ಭದ್ರತೆ ಮತ್ತು ಹಿಮಾಲಯದ ಶಾಂತಿಯೊಂದಿಗೆ ನೇರವಾಗಿ ಹೆಣುಕಿಕೊಂಡಿದೆ. ಹೀಗಾಗಿ, ವಿಶ್ವ ಟಿಬೆಟ್ ದಿನವು ಭಾರತೀಯರಿಗೂ ಅತ್ಯಂತ ಪ್ರಸ್ತುತ ಹಾಗೂ ಚಿಂತನಾರ್ಹ ದಿನವಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



