ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಆಧಾರ್, ಪಡಿತರ ಚೀಟಿ ಸೇರಿದಂತೆ ಭಾರತೀಯ ದಾಖಲೆಗಳು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಹೊಂದಿರುವ ಯಾವುದೇ ಪಾಕಿಸ್ತಾನಿ, ಬಾಂಗ್ಲಾದೇಶಿ ಅಥವಾ ಇರಾನ್ ಪ್ರಜೆಗಳು ಪತ್ತೆಯಾಗಿಲ್ಲ ಎಂದು ರಾಜ್ಯ ಸರ್ಕಾರ ವಿಧಾನಸಭೆಗೆ ತಿಳಿಸಿದೆ. ಎಸ್‌ಐಆರ್ ಸಂದರ್ಭದಲ್ಲಿ ಅಕ್ರಮ ವಲಸಿಗರಿಗೆ ಕಾಂಗ್ರೆಸ್ ಸರ್ಕಾರ ನೆರವು ನೀಡುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಈ ಮಾಹಿತಿ ನೀಡಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇರಾನ್‌ನ ಪ್ರಜೆಗಳು ಆಧಾರ್, ಪಡಿತರ ಚೀಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆದು ಮತದಾರರಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಪರವಾಗಿ ನೀಡಿದ ಲಿಖಿತ ಉತ್ತರದಲ್ಲಿ, ಎಸ್‌ಐಆರ್ ಪ್ರಕ್ರಿಯೆ ವೇಳೆ ಇಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಎಸ್‌ಐಆರ್ ಗಣತಿ ಪ್ರಕ್ರಿಯೆ ಆಗಸ್ಟ್ 17ರಂದು ಪೂರ್ಣಗೊಂಡಿದ್ದು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಈ ಪ್ರಕ್ರಿಯೆಯಲ್ಲಿ ‘ಗೈರು, ಸ್ಥಳಾಂತರ, ಮೃತಪಟ್ಟವರು, ನಕಲಿ ಹಾಗೂ ಇತರೆ’ (ASDDO) ವರ್ಗಕ್ಕೆ ಸೇರಿದ ಸುಮಾರು 1.07 ಕೋಟಿ ಮತದಾರರು ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ಇದೇ ವೇಳೆ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 911 ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ ಎಂದು ಸರ್ಕಾರ ಮತ್ತೊಂದು ಲಿಖಿತ ಉತ್ತರದಲ್ಲಿ ತಿಳಿಸಿದೆ. ಇವರಲ್ಲಿ ಅತಿ ಹೆಚ್ಚು 868 ಮಂದಿ ಬಾಂಗ್ಲಾದೇಶದವರು. ಉಳಿದಂತೆ ಪಾಕಿಸ್ತಾನದ 20, ನೈಜೀರಿಯಾದ 13, ಶ್ರೀಲಂಕಾದ 8, ಮ್ಯಾನ್ಮಾರ್‌ನ ಒಬ್ಬರು ಹಾಗೂ ಉಗಾಂಡಾದ ಒಬ್ಬರು ಸೇರಿದ್ದಾರೆ.
ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರಲ್ಲಿ ಹೆಚ್ಚಿನವರು ಚಿಂದಿ ಆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಅವರ ಚಲನವಲನದ ಮೇಲೆ ನಿಗಾ ಇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಪೊಲೀಸ್ ಠಾಣಾ ಮಟ್ಟದಲ್ಲಿರುವ ಗುಪ್ತಚರ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗೆ ವಿದೇಶಿಗರ ಚಲನವಲನದ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ದಲಿತ-ಒಬಿಸಿಗಳ ರಕ್ಷಣೆಯ ಯುಜಿಸಿ ನಿಯಮಕ್ಕೆ ಮೇಲ್ವರ್ಗದ ವಿರೋಧ; ಮರುಪರಿಶೀಲನೆಗೆ ಮುಂದಾದ ಕೇಂದ್ರ
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಪ್ರಕರಣ ಇತ್ಯರ್ಥವಾಗುವವರೆಗೆ ವಿದೇಶಿಗರ ನಿರ್ಬಂಧ ಕೇಂದ್ರ (FRC)ದಲ್ಲಿ ಇರಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ನ್ಯಾಯಾಲಯದ ಆದೇಶ ಹಾಗೂ ನಿರ್ಗಮನ ಪರವಾನಗಿ ಪಡೆದ ನಂತರ ಅವರನ್ನು ಗಡೀಪಾರು ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಗಡೀಪಾರು ಪ್ರಕ್ರಿಯೆ ಆರಂಭಿಸಲು ‘ಆಪರೇಷನ್ ಮುಕ್ತ’ ಅಡಿಯಲ್ಲಿ ವಿಶೇಷ ಕಾರ್ಯಾಚರಣೆಗಳನ್ನೂ ನಡೆಸಲಾಗಿದೆ ಎಂದು ಸರ್ಕಾರ ತಿಳಿಸಿದೆ.




