ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿಯಲ್ಲಿ ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ಯುವತಿಯ ಹತ್ಯೆ ಪ್ರಕರಣ ಸಂಬಂಧ ಸಿರವಾರ ಪೊಲೀಸರು ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ಅಶ್ವಿನಿ ತಿಮ್ಮಾರೆಡ್ಡಿ(22) ಎಂಬ ಯುವತಿಯನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಯುವತಿಯ ತಂದೆ ತಿಮ್ಮಾರೆಡ್ಡಿ ನೀಡಿದ ದೂರಿನ ಅನ್ವಯ ಹೊಕ್ರಾಣಿಯ ಗುಂಡ್ಯ ರಾಮಣ್ಣ(22), ಮಹಾಂತೇಶ ಹುಲಿಗೆಪ್ಪ(22), ವೀರೇಶ ರಾಜಪ್ಪ(23) ಹಾಗೂ ಮುಂಡರಗಿಯ ಬಸವರಾಜ ಮಹಾದೇವ(45) ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವೀರೇಶ ರಾಜಪ್ಪನನ್ನು ಹೊರತುಪಡಿಸಿ ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಬುಧವಾರ ಸಂಜೆ ಶೌಚಕ್ಕೆಂದು ಮನೆಯ ಹೊರಗೆ ಹೋಗಿದ್ದ ಅಶ್ವಿನಿ ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಗುರುವಾರ ಬೆಳಿಗ್ಗೆ ಬಾವಿಯಲ್ಲಿ ನಗ್ನ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು.
ಇದನ್ನೂ ಓದಿದ್ದೀರಾ? ಲಿಂಗಸಗೂರು | ಜಾಲಿಬೆಂಚಿ ಬಳಿ ಮಹಿಳೆ ಶವ ಪತ್ತೆ: ಅತ್ಯಾಚಾರ, ಕೊಲೆ ಶಂಕೆ
ಬಳ್ಳಾರಿ ವಲಯದ ಐಜಿಪಿ ಪಿ ಎಸ್ ಹರ್ಷ, ಜಿಲ್ಲಾಧಿಕಾರಿ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ದೇಶದಲ್ಲಿ ನೈರ್ಮಲ್ಯವನ್ನು ಕಾಪಾಡಲು, ಕಸಮುಕ್ತ ವಾತಾವರಣ ನಿರ್ಮಿಸಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2014 ರಂದು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು. ಪ್ರತಿಷ್ಠಿತ ರಸ್ತೆಗಳಲ್ಲಿ ಪೊರಕೆ ಹಿಡಿದು ಫೋಸ್ ಕೂಡ ನೀಡಿದರು. ಹಳ್ಳಿಗಳು ಮತ್ತು ನಗರಗಳಲ್ಲಿ ಶೌಚಾಲಯಗಳ ನಿರ್ಮಾಣದಿಂದ ಮಹಿಳೆಯರಿಗೆ ಗೌರವ ಮತ್ತು ಭದ್ರತೆ ದೊರೆಯುತ್ತಿದೆ ಎಂಬ ಬಿಟ್ಟಿ ಭಾಷಣಗಳನ್ನು ಮಾಡಿದರು. ಆದರೆ, ಬಯಲು ಶೌಚಕ್ಕೆ ಹೋಗುವಾಗ ಉತ್ಪ್ರೇಕ್ಷೆಗೊಳಗಾಗುವ ನೀಚ ಮನಸಿನ ಗಂಡಸರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು, ಅತ್ಯಾಚಾರ ಎಸಗುವುದು, ಇಂತಹ ಕೃತ್ಯ ಬಯಲಿಗೆ ಬರುತ್ತದೆಂದು ಹೆದರಿ ಮಹಿಳೆಯರನ್ನು ಕೊಲೆ ಮಾಡುವಂಥಹ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಹಾಗಾಗಿ ಬಯಲು ಶೌಚ, ಸ್ವತಂತ್ರ ಭಾರತವನ್ನು ಆಳಿರುವ ಸರ್ಕಾರಗಳು ನಾಚಿಕೆಯಿಂದ ತಲೆ ತಗ್ಗಿಸಬೇಕಿರುವ ಸಂಗತಿಗಳಲ್ಲೊಂದು. ಬಹು ದೊಡ್ಡ ನಾಚಿಕೆಗೇಡು.




