ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ಸರಳವಾಗಿ ಹಾಗೂ ಆತ್ಮವಿಶ್ವಾಸದಿಂದ ಸಂವಹನ ನಡೆಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಮಹತ್ವದ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯಾದ್ಯಂತ ಆಯ್ದ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಸ್ಪೋಕನ್ ಇಂಗ್ಲಿಷ್’ (Spoken English) ತರಬೇತಿಯನ್ನು ಪ್ರಾರಂಭಿಸಲು ಶಾಲಾ ಶಿಕ್ಷಣ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಯೋಜನೆಗಾಗಿ ರಾಜ್ಯದ ಒಟ್ಟು 1,919 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 601 ದ್ವಿಭಾಷಾ ಮಾಧ್ಯಮ ಶಾಲೆಗಳು, 550 ಪಿಎಂಶ್ರೀ ಕೆಪಿಎಸ್ ಶಾಲೆಗಳು, 463 ಎಡಿಬಿ ಯೋಜನೆಯ ಕೆಪಿಎಸ್ ಶಾಲೆಗಳು ಹಾಗೂ 305 ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಸೇರಿವೆ.
ಇದನ್ನೂ ಓದಿ: ಕಾಲೇಜು-ವಿವಿ ಕ್ಯಾಂಪಸ್ಗಳಲ್ಲಿ ಇಂಗ್ಲಿಷ್ ಭಾಷೆಯ ‘ಹೇರಿಕೆ’ ಸರಿಯೇ?
2026 ಸೆಪ್ಟೆಂಬರ್ನಿಂದ 2027 ರ ಫೆಬ್ರವರಿವರೆಗೆ ಒಟ್ಟು 6 ತಿಂಗಳ ಕಾಲ ಈ ವಿಶೇಷ ತರಬೇತಿ ನಡೆಯಲಿದೆ. ‘ಸಮಗ್ರ ಶಿಕ್ಷಣ ಕರ್ನಾಟಕ’ (SSK) ಯೋಜನೆಯಡಿ ಈ ತರಬೇತಿ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ₹19.67 ಕೋಟಿ (₹1,967.87 ಲಕ್ಷ) ಅನುದಾನವನ್ನು ಕಾಯ್ದಿರಿಸಿದೆ.
ತರಬೇತಿಗಾಗಿ ಅತಿಥಿ ಶಿಕ್ಷಕರ ನೇಮಕ
ಈ ತರಬೇತಿಗಾಗಿ ಆಯಾ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಮೂಲಕ ಸ್ಥಳೀಯವಾಗಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. ಇಂಗ್ಲಿಷ್ ಐಚ್ಛಿಕ ವಿಷಯವಾಗಿರುವ ಕಲಾ ಪದವಿ (BA/BA Hons) ಅಥವಾ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ 25 ರಿಂದ 55 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಆಯ್ಕೆಯಾದ ಅತಿಥಿ ಶಿಕ್ಷಕರಿಗೆ ತಿಂಗಳಿಗೆ ₹12,000 ಗೌರವಧನ ನೀಡಲಾಗುತ್ತದೆ.
ದಿನಕ್ಕೆ 3 ಗಂಟೆಯಂತೆ ವಾರಕ್ಕೆ 4 ಅವಧಿಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ನಡೆಯಲಿದೆ. ಇಂಗ್ಲಿಷ್ ಪದಗಳ ಸರಿಯಾದ ಉಚ್ಚಾರಣೆ, ವಾಕ್ಯ ರಚನೆ, ದಿನನಿತ್ಯದ ಸಂಭಾಷಣೆ, ಸಂವಹನ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಮಕ್ಕಳ ಕಲಿಕಾ ಪ್ರಗತಿಯನ್ನು ಅಳೆಯಲು ನವೆಂಬರ್ ಕೊನೆಯಲ್ಲಿ ಹಾಗೂ ಮಾರ್ಚ್ ಆರಂಭದಲ್ಲಿ ಹೀಗೆ ಎರಡು ಹಂತಗಳಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ.
ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆಯೇ ಸರ್ಕಾರಿ ಶಾಲಾ ಮಕ್ಕಳೂ ಸಹ ಇಂಗ್ಲಿಷ್ನಲ್ಲಿ ಸುಲಭವಾಗಿ ಮಾತನಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎನ್ನುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.





