ಕೇಂದ್ರ ಸರ್ಕಾರವು ಬೆಂಗಳೂರು ನಗರಕ್ಕಾಗಿ ಮಂಜೂರು ಮಾಡಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಗೆ ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ಕ್ಯಾಬಿನೆಟ್ ಅನುಮೋದನೆ ನೀಡದೆ ಬಾಕಿ ಉಳಿಸಿಕೊಂಡಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಎಎನ್‌ಐಗೆ ಪ್ರತಿಕ್ರಿಯಿಸಿರು ತೇಜಸ್ವಿ ಸೂರ್ಯ, ರಾಜ್ಯ ಕಾಂಗ್ರೆಸ್ ಸರ್ಕಾರವು ಸಾಮಾನ್ಯ ಜನರನ್ನು ಕಡೆಗಣಿಸಿ, ಕೇವಲ ವಿಐಪಿ ಸಂಸ್ಕೃತಿ ಹಾಗೂ ಕಮಿಷನ್ ದಂಧೆಗೆ ಪೂರಕವಾದ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ‘ಸೂರ್ಯ ಬಂಡಲ್ ಬ್ಯಾಂಕ್’: ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ವಿನೂತನ ಕ್ಯಾಂಪೇನ್
ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರ್ಕಾರವು 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಆದರೆ, ರಾಜ್ಯ ಸರ್ಕಾರವು ಇವುಗಳ ನಿಯೋಜನೆಗೆ ಅಗತ್ಯವಿರುವ ಸಚಿವ ಸಂಪುಟದ (ಕ್ಯಾಬಿನೆಟ್) ಒಪ್ಪಿಗೆಯನ್ನು ನೀಡುತ್ತಿಲ್ಲ ಎಂದಿದ್ದಾರೆ.
ಸಾರ್ವಜನಿಕ ಸಾರಿಗೆಗೆ ಹಣವಿಲ್ಲ ಎನ್ನುವ ಸರ್ಕಾರ, 1,300 ಕಿಲೋಮೀಟರ್ ಉದ್ದದ ಸುರಂಗ ಮಾರ್ಗಗಳು (Tunnel Roads) ಹಾಗೂ ಕಾರುಗಳಿಗಾಗಿಯೇ ಪ್ರತ್ಯೇಕವಾಗಿ ನಿರ್ಮಿಸುವ 2 ಕಿಲೋಮೀಟರ್ ಸುರಂಗ ರಸ್ತೆಗಳಂತಹ ದುಬಾರಿ ಯೋಜನೆಗಳಿಗೆ ಹಣ ಮತ್ತು ಸಂಪನ್ಮೂಲಗಳನ್ನು ವ್ಯಯಿಸುತ್ತಿದೆ ಎಂದು ಟೀಕಿಸಿದ್ದಾರೆ.
ಪ್ರಸ್ತುತ ಆಡಳಿತದಲ್ಲಿ ಸಾರ್ವಜನಿಕ ಸಾರಿಗೆ ಬಳಸುವವರನ್ನು ‘ಎರಡನೇ ದರ್ಜೆಯ ನಾಗರಿಕರು’ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ. ಪ್ರತಿದಿನ ಮೆಟ್ರೋದಲ್ಲಿ ಪ್ರಯಾಣಿಸುವವರು, ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿರುವ ಮಹಿಳೆಯರು ಹಾಗೂ ಫುಟ್‌ಪಾತ್, ಸ್ಕೈವಾಕ್‌ಗಳನ್ನು ಬಳಸುವ ಪಾದಚಾರಿಗಳು ಈ ಸರ್ಕಾರದ ಆದ್ಯತೆಯಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಸೆಲೆಕ್ಟಿವ್ ಸೂರ್ಯ’ – ನೀಟ್ ರದ್ದಾದ ಮೇಲೆ ಕಾಣೆಯಾಗಿದ್ದ ಸಂಸದ ದಿಢೀರ್ ಪತ್ತೆ!
ರಾಜ್ಯ ಸರ್ಕಾರವು ಕೇವಲ ದೊಡ್ಡ ಮೊತ್ತದ ಕಿಕ್‌ಬ್ಯಾಕ್ (ಕಮಿಷನ್) ಪಡೆಯುವ ಏಕೈಕ ಉದ್ದೇಶದಿಂದ, ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲದ ‘ಬಿಳಿ ಆನೆ’ಯಂತಹ ವಿಐಪಿ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ (PM E-Drive) ಯೋಜನೆಯಡಿ ಕರ್ನಾಟಕಕ್ಕೆ ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆಯಲು ರಾಜ್ಯ ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಿದೆ. ಈ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೇಂದ್ರ ಹೆವಿ ಇಂಡಸ್ಟ್ರೀಸ್ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಪ್ರಮುಖ ನಗರಗಳಿಗೆ ಇ-ಬಸ್‌ಗಳನ್ನು ಮಂಜೂರು ಮಾಡುವಂತೆ ವಿನಂತಿಸಿದ್ದರು. ಸದ್ಯ ಚಾರ್ಜಿಂಗ್ ಸ್ಟೇಷನ್ ಮತ್ತು ಡಿಪೋ ಮೂಲಸೌಕರ್ಯಗಳ ಬಗ್ಗೆ ಎರಡೂ ಸರ್ಕಾರಗಳ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




