‘ಸೆಲೆಕ್ಟಿವ್ ಸೂರ್ಯ’ – ನೀಟ್ ರದ್ದಾದ ಮೇಲೆ ಕಾಣೆಯಾಗಿದ್ದ ಸಂಸದ ದಿಢೀರ್ ಪತ್ತೆ!

Date:

ಭಾರತ ಸೂಪರ್ ಪವರ್ ಆಗುತ್ತಿದೆ, ವಿದೇಶಗಳು ಭಾರತದತ್ತ ಕಣ್ಣರಳಿಸಿ ನೋಡುತ್ತಿವೆ ಎಂದು ಪ್ರಚಾರ ಮಾಡುವುದಕ್ಕೆ ಸೀಮಿತವಾಗಿರುವ ತೇಜಸ್ವಿ ಸೂರ್ಯ ಅವರು, ನೀಟ್ ಪರೀಕ್ಷೆಯ ನೋವಿಗೆ ತುತ್ತಾದವರ ಬಗ್ಗೆ ತುಟಿ ಬಿಚ್ಚದೆ ಇದ್ದರು.

“ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೇರೊಂದು ದಿನ ಕಾರ್ಯಕ್ರಮ ಆಯೋಜಿಸಿಕೊಳ್ಳಬೇಕಿತ್ತು. ಸಾವಿರಾರು ವಿದ್ಯಾರ್ಥಿಗಳು ನೀಟ್ (NEET) ಪರೀಕ್ಷೆಗೆ ಹಾಜರಾಗುತ್ತಿರುವ ದಿನವನ್ನೇ ಅದು ಆಯ್ದುಕೊಂಡಿತು. ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿ ರಸ್ತೆಗಳು ಸ್ತಬ್ಧಗೊಂಡಿದ್ದರಿಂದ, ಅನೇಕ ವಿದ್ಯಾರ್ಥಿಗಳು ತಡವಾಗಿ ತಲುಪಿದರು. ಕೆಲವರಂತೂ ತೀವ್ರ ಆತಂಕದಲ್ಲೇ ಪರೀಕ್ಷಾ ಕೇಂದ್ರಗಳನ್ನು ತಲುಪಿ, ತಮ್ಮನ್ನು ಒಳಗೆ ಬಿಟ್ಟುಕೊಳ್ಳುವಂತೆ ಅಧಿಕಾರಿಗಳ ಬಳಿ ಗೋಗರೆಯಬೇಕಾಯಿತು. ಅದೃಷ್ಟವಶಾತ್, ಪರೀಕ್ಷಾ ಅಧಿಕಾರಿಗಳು ಅವರಿಗೆ ಅವಕಾಶ ಕಲ್ಪಿಸಿಕೊಟ್ಟರಲ್ಲದೆ, ನಷ್ಟವಾದ ಸಮಯವನ್ನು ಸರಿದೂಗಿಸಲು ಹೆಚ್ಚುವರಿ ಸಮಯವನ್ನೂ ನೀಡಿದರು” ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

- Advertisement -

ಮುಂದುವರಿದು, “ಕಳೆದ ಕೆಲವು ವಾರಗಳಿಂದ ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಒಂದು ವೇಳೆ ಅವರ ಕಾಳಜಿ ಪ್ರಾಮಾಣಿಕವಾಗಿದ್ದಿದ್ದರೆ, ನೀಟ್ ನಡೆಯುವ ಸಮಯದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ತಪ್ಪಿಸುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಇದನ್ನೂ ಓದಿ: ನೀಟ್ ಪರೀಕ್ಷೆ ದಿನ ಸಮಾವೇಶ: ತೇಜಸ್ವಿ ಸೂರ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಸಾರ್ವಜನಿಕರಿಗೆ ತೊಂದರೆ ಕೊಡುವಂತಹ ಸಮಾರಂಭಗಳನ್ನು ಯಾರೂ ನಡೆಸಬಾರದು ಎಂಬ ‘ಕಳಕಳಿ’ಯನ್ನು ವ್ಯಕ್ತಪಡಿಸಿ, 162 ಪದಗಳ ಮತ್ತೊಂದು ಪೋಸ್ಟ್ ಹಾಕಿರುವ ಅವರು, ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ಯಾವುದೇ ಜನಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ ಸಾರ್ವಜನಿಕರ ಪರವಾಗಿ ಕಾಳಜಿ ಇರಬೇಕು. ಪರೀಕ್ಷೆಗಳಂತಹ ಗಂಭೀರ ವಿಚಾರಗಳು ರಾಜಕೀಯ ಸಮಾರಂಭಗಳಿಂದ ತೊಂದರೆಗೆ ಒಳಗಾಗಬಾರದು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. 2023ರ ಮೇ 7ರಂದು ನೀಟ್ ಪರೀಕ್ಷೆ ಇದ್ದಾಗಲೇ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ಹಮ್ಮಿಕೊಂಡಿದ್ದರು. ಈ ಸಂಬಂಧ ಭಾರೀ ಟೀಕೆಗಳು ಬಂದಿದ್ದರಿಂದ ಬಿಜೆಪಿ ನಾಯಕರು ರೋಡ್ ಶೋ ಅವಧಿಯನ್ನು ಕಡಿತಗೊಳಿಸಿದ್ದರು. ಈಗ ನೀಟ್ ಪರೀಕ್ಷೆ ಇರುವಾಗ ಕಾರ್ಯಕ್ರಮ ನಡೆಸಿರುವ ಕಾಂಗ್ರೆಸ್ ಟೀಕೆಗೆ ಗುರಿಯಾಗಿದೆ. ಮುಂಜಾಗ್ರತೆ ಕೈಗೊಳ್ಳಲಾಗಿತ್ತು ಎಂದು ಕಾಂಗ್ರೆಸ್ ನಾಯಕರು ಹೇಳಿದರೂ, ಟೀಕೆಗಳು ಸಹಜವಾಗಿ ಕೇಳಿಬಂದಿವೆ. ಆದರೆ ಈ ವಿಚಾರದಲ್ಲಿ ತೇಜಸ್ವಿ ಸೂರ್ಯನಂಥವರು ಪ್ರಶ್ನೆ ಕೇಳುವ ನೈತಿಕತೆಯನ್ನು ಹೊಂದಿದ್ದಾರಾ? ಎಂಬ ಸಂಗತಿ ಮುನ್ನಲೆಗೆ ಬಂದಿದೆ. ನೀಟ್ ಪರೀಕ್ಷೆಯನ್ನು ರದ್ದು ಮಾಡಿದಾಗ ಮುಳುಗಿ ಹೋಗಿದ್ದ ‘ಸೂರ್ಯ’ ಈಗ ಪ್ರತ್ಯಕ್ಷರಾಗಿರುವುದು ಅವರ ಕಾಳಜಿಯ ಅಪ್ರಾಮಾಣಿಕತೆಯನ್ನು ತೆರೆದಿಟ್ಟಿದೆ!

ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಗೊತ್ತಾದ ನಂತರ ಪರೀಕ್ಷೆಯನ್ನು ಮೇ 12ರಂದು ಸಂಪೂರ್ಣವಾಗಿ ರದ್ದು ಮಾಡಲಾಯಿತು. ಸರ್ಕಾರದ ಈ ನಿರ್ಧಾರದಿಂದ 22 ಲಕ್ಷ ನೀಟ್ ಆಕಾಂಕ್ಷಿಗಳ ಭವಿಷ್ಯ ಕತ್ತಲೆಗೆ ದೂಡಲ್ಪಟ್ಟಿತು. ಕನಸುಗಳು ಕಮರಿ ಖಿನ್ನತೆಗೆ ಬಿದ್ದವರಲ್ಲಿ 11 ಮಂದಿ ಸಾ*ವಿಗೆ ಶರಣಾದರು. ಒಂದು ಪರೀಕ್ಷೆಯನ್ನು ಸರಿಯಾಗಿ ಮಾಡಲು ಬಾರದ ಅಸಮರ್ಥ ಸರ್ಕಾರದಿಂದಾಗಿ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಆಗ ತೇಜಸ್ವಿ ಸೂರ್ಯ ಎಲ್ಲಿದ್ದರು ಎಂದು ಕೇಳಲಾಗುತ್ತಿದೆ.

ಪರೀಕ್ಷೆ ರದ್ದಾದ ದಿನ ಮತ್ತು ಆನಂತರ ತೇಜಸ್ವಿ ಸೂರ್ಯ ಏನು ಮಾಡುತ್ತಿದ್ದರು ಎಂದು ಅವರ ‘ಎಕ್ಸ್’ ಖಾತೆಯನ್ನು ತೆರೆದು ನೋಡಿದರೆ ತಿಳಿಯುತ್ತದೆ. ಪ್ರತಿಯೊಂದಕ್ಕೂ ಟ್ವೀಟ್ ಮಾಡುವ ಇವರು, ಜೂನ್ 21ರವರೆಗೂ ನೀಟ್ ಬಗ್ಗೆ ದಿವ್ಯ ಮೌನ ತಾಳಿರುವುದು ಗೊತ್ತಾಗುತ್ತದೆ.

ನೀಟ್ ರದ್ದಾದ ಮೇ 12 ಮತ್ತು ನಂತರದ ನಾಲ್ಕೈದು ದಿನಗಳಲ್ಲಿ ತೇಜಸ್ವಿ ಸೂರ್ಯ ಅವರ ಪೋಸ್ಟ್‌ಗಳು ಹೀಗಿದ್ದವು:

ಮೇ 12:

  • * ಅಸ್ಸಾಂ ನೂತನ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಅಭಿನಂದನೆ ಸಲ್ಲಿಸಿ ಪೋಸ್ಟ್
  • ಭಾರತವು ಅಭೂತಪೂರ್ವ ಬೆಳವಣಿಗೆ ಹೊಂದುತ್ತಿದೆ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಪೋಸ್ಟ್
  • * “ಭಾರತದ ನಗರಗಳು ಜಾಗತಿಕ ಬೆಳವಣಿಗೆಯ ಕೇಂದ್ರಗಳಾಗಿ ಹೊರಹೊಮ್ಮುತ್ತಿರುವಾಗ ಬಲಿಷ್ಠವಾದ ನಗರ ಆಡಳಿತದ ತುರ್ತು ಅಗತ್ಯದ ಬಗ್ಗೆ ನಿನ್ನೆ ಸ್ಟ್ಯಾನ್ಫೋರ್ಡ್‌ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ನಾನು ಮಾತನಾಡಿದ್ದೆ” ಅಂತ ಪೋಸ್ಟ್
  • * “ಬೆಂಗಳೂರು ನಗರದಲ್ಲಿ ದುರಸ್ತಿ ಮಾಡಲಾಗದಷ್ಟು ಹಾನಿ ಮಾಡುವ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ವಿರೋಧಿಸಬೇಕು” ಎಂದು ಪೋಸ್ಟ್

ಮೇ 13:

  • * ಪುದುಚೆರಿ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸುವುದನ್ನು ಅಭಿನಂದಿಸಿ ಪೋಸ್ಟ್
  • * ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯ ಕೋರಿ ಪೋಸ್ಟ್

ಮೇ 14:

  • “ನಗರದ ಸಮರ್ಪಕ ಸಾರಿಗೆ ಯೋಜನೆಗಾಗಿ ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್‌ ಅಥಾರಿಟಿ (BMLTA) ಅನ್ನು ಬಲಪಡಿಸಬೇಕು” ಎಂದು ಪೋಸ್ಟ್

ಮೇ 15:

* “ಕರ್ನಾಟಕದಲ್ಲಿ ಡಿಪ್ಲೊಮಾ ಪ್ಯಾರಾಮೆಡಿಕಲ್ ಕೋರ್ಸ್‌ಗಳ ಪ್ರವೇಶ ಅರ್ಹತೆಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಿದ್ದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರಿಗೆ ಧನ್ಯವಾದಗಳು” ಅಂತ ಪೋಸ್ಟ್* “ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಬೆಂಗಳೂರಿನ ನಗರಾಭಿವೃದ್ಧಿ ಯೋಜನೆ ಸಂಪೂರ್ಣ ಹದಗೆಟ್ಟಿದೆ” ಅಂತ ಪೋಸ್ಟ್

* “ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಸ್ವಾಗತಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಮೋದಿ ಸಲ್ಲಿಸಿದ ಕೃತಜ್ಞತೆ” ಕುರಿತ ಪೋಸ್ಟ್‌ನ ರೀಪೋಸ್ಟ್.

ಹೀಗೆ ತೇಜಸ್ವಿ ಸೂರ್ಯ ಅವರ ಪೋಸ್ಟ್‌ಗಳ ಪುರಾಣ ಸಾಗುತ್ತದೆ. ಭಾರತ ಸೂಪರ್ ಪವರ್ ಆಗುತ್ತಿದೆ, ವಿದೇಶಗಳು ಭಾರತದತ್ತ ಕಣ್ಣರಳಿಸಿ ನೋಡುತ್ತಿವೆ ಎಂದು ಪ್ರಚಾರ ಮಾಡುವುದಕ್ಕೆ ಸೀಮಿತವಾಗಿರುವ ತೇಜಸ್ವಿ ಸೂರ್ಯ ಅವರು, ನೀಟ್ ಪರೀಕ್ಷೆಯ ನೋವಿಗೆ ತುತ್ತಾದವರ ಬಗ್ಗೆ ತುಟಿ ಬಿಚ್ಚದೆ ಇದ್ದರು. ತೇಜಸ್ವಿಯವರಿಗೆ ರವಿಶಂಕರ ಗುರೂಜಿ ಮೇಲೆ ಎಲ್ಲಿಲ್ಲದ ಪ್ರೀತಿ ಎನಿಸುತ್ತದೆ. ಮೇ 24ರಂದು ಮತ್ತೆ ಪೋಸ್ಟ್ ಮಾಡಿ, ಗುರೂಜಿ ಜನ್ಮದಿನದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು.

“Tejasvi_Surya NEET” ಎಂದು ನಿರ್ದಿಷ್ಟವಾಗಿ ಸರ್ಚ್ ಮಾಡಿ ನೋಡಿದರೆ, 2026ರ ನೀಟ್ ರದ್ದಾದ ಬಳಿಕ ಒಂದೇ ಒಂದು ಮಾತನ್ನೂ ಸಂಸದರು ಹೇಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 2024ರಲ್ಲಿ ನೀಟ್ ರದ್ದಾದಾಗ ಮತ್ತು ಈ ಹಿಂದೆ ನೀಟ್ ಪರೀಕ್ಷೆಗಳು ನಡೆದಾಗ ತೇಜಸ್ವಿ ಸೂರ್ಯ ಪೋಸ್ಟ್‌ಗಳನ್ನು ಹಾಕಿರುವುದು ಕಂಡುಬರುತ್ತದೆಯಷ್ಟೇ. ಈ ಬಾರಿ ನೀಟ್ ಸಂಬಂಧ ಈ ವ್ಯಕ್ತಿ ಪೋಸ್ಟ್ ಹಾಕುವುದು ಜೂನ್ 21ನೇ ತಾರೀಕಿನ ನಂತರ ಮಾತ್ರ! ಕಾಂಗ್ರೆಸ್ ಸಮಾರಂಭ ನಡೆದಿದ್ದರಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅಭ್ಯರ್ಥಿಗಳು ಪರದಾಡಿದ್ದಾರೆ ಅಂತ ಪ್ರಚೋದನೆ ಮಾಡಲು ಬರೋಬ್ಬರಿ ಐದು ಪೋಸ್ಟ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಮೀಡಿಯಾ ರಿಪೋರ್ಟ್‌ಗಳು, ರಿಟ್ವೀಟ್‌ಗಳು ಸೇರಿವೆ.

ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ

ಕಾಂಗ್ರೆಸ್ ಸಮಾರಂಭದಿಂದಾಗಿ ನೀಟ್ ಆಕಾಂಕ್ಷಿಗಳಿಗೆ ತೊಂದರೆಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಸೇರಿ ಕನ್ನಡ ದುನಿಯಾ, ಕನ್ನಡ ನ್ಯೂಸ್‌ ಸಂಪಾದಕರ ಮೇಲೆ ಎಫ್‌ಐಆರ್‌

“ನೀಟ್ ಪರೀಕ್ಷೆಯ ಸಮಯವನ್ನು ನೋಡಿಯೇ ಕಾರ್ಯಕ್ರಮದ ವೇಳಾಪಟ್ಟಿಯನ್ನು ಕೂಡ ನಿಗದಿ ಮಾಡಿದ್ದೇವೆ. ಆದರೂ ನೀಟ್ ಪರೀಕ್ಷೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಎರಡು ಮೂರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೆ ಉಳಿದಿದ್ದಾರೆ ಎಂದು ನೋಡಿದೆ. ನಮ್ಮ ಕಾರ್ಯಕ್ರಮದಿಂದ ಇಂತಹ ಪ್ರಮಾದ ನಡೆದಿದ್ದರೆ ಖಂಡಿತಾ ಪರೀಕ್ಷೆಗೆ ಹಾಜರಾಗದೆ ಇರುವ ಎರಡು-ಮೂರು ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಪರೀಕ್ಷೆಯಿಂದ ಹೊರಗುಳಿದಿರುವ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿ, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ನಮ್ಮ ತಂಡ ಹೋಗಲಿದೆ. ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಗೊತ್ತಾಗಿದೆ. ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಮಾಹಿತಿ ಮೇರೆಗೆ ನಮ್ಮ ಸರ್ಕಾರದ ಗೃಹ ಇಲಾಖೆ ಎರಡು ದಿನದ ಮುಂಚೆ ಬದಲಿ ರಸ್ತೆಗಳನ್ನು ಪ್ರಕಟಣೆ ಮಾಡಿತ್ತು. ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿತ್ತು. ಅದನ್ನು ಮೀರಿಯೂ ಲಕ್ಷಾಂತರ ಜನರು ನಮ್ಮ ಕಾರ್ಯಕ್ರಮಕ್ಕೆ ಬಂದಿರುವ ಕಾರಣ ಸಣ್ಣಪುಟ್ಟ ಲೋಪಗಳು ಆಗಿರಬಹುದು” ಎಂದು ತಿಳಿಸಿದ್ದಾರೆ.

ಮುಂದುವರಿದು, “ಬಿಜೆಪಿಯ ನಾಯಕರ ಆರೋಪಗಳನ್ನು ನೋಡಿದ್ರೆ ಬಿಜೆಪಿ ನಾಯಕರಿಗೆ ನಾಚಿಕೆ ಅನ್ನೋದೇ ಇಲ್ವಾ? ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದೆ. ದೇಶದಾದ್ಯಂತ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ದೇಶದಲ್ಲಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಯಾರು? ಆತ್ಮಹತ್ಯೆಗಳು ಮಾಡಿಕೊಂಡ ವಿದ್ಯಾರ್ಥಿಗಳು ಆತ್ಮಹತ್ಯೆ ಪತ್ರವನ್ನು ಬರೆದು ಬಿಜೆಪಿ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಯುವ ಸಂಸದರಿಗೆ ನೈತಿಕತೆ ಇದ್ದರೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಡಲಿ” ಎಂದರು.

“ದೇಶಾದ್ಯಂತ ವಿದ್ಯಾರ್ಥಿಗಳು ಏಕೆ ಆತಂಕಕ್ಕೆ ಒಳಗಾದರು? ಪ್ರಶ್ನೆ ಪತ್ರಿಕೆ ಸೋರಿಕೆ ಏಕೆ ನಡೆಯಿತು? ಪರೀಕ್ಷೆಯ ವಿಶ್ವಾಸಾರ್ಹತೆ ಏಕೆ ಕುಸಿಯಿತು? ಮರುಪರೀಕ್ಷೆಯ ಅನಿವಾರ್ಯತೆ ಏಕೆ ಎದುರಾಯಿತು? ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಕಾಂಗ್ರೆಸ್ ಮೇಲೆ ಬೆರಳು ತೋರಿಸುವುದು ಬಿಜೆಪಿಯ ಹಳೆಯ ಚಾಳಿ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಉತ್ತರ ಕೊಡುವವರು ಯಾರು? ಪರೀಕ್ಷಾ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಹೋಗುವಂತೆ ಮಾಡಿದವರು ಯಾರು? ಈಗ ಕರ್ನಾಟಕದಲ್ಲಿ ನಡೆದ ನಮ್ಮ ಕಾರ್ಯಕ್ರಮವನ್ನು ಕಾರಣವನ್ನಾಗಿ ಮಾಡಿ ವಿದ್ಯಾರ್ಥಿಗಳ ಗೈರುಹಾಜರಾತಿಯನ್ನು ಕಾಂಗ್ರೆಸ್ ಮೇಲೆ ಹೊರಿಸಲು ಯತ್ನಿಸುತ್ತಿದ್ದಾರೆ. ಇದು ರಾಜಕೀಯ ದಿವಾಳಿತನದ ಪರಮಾವಧಿ. ಮೈಸೂರಿನಲ್ಲಿ 1,847 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಾದಗಿರಿಯಲ್ಲಿ 286 ಅಭ್ಯರ್ಥಿಗಳು ಗೈರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದಾರೆ. ರಾಜ್ಯದ ಹಲವೆಡೆ ಇದೇ ಪರಿಸ್ಥಿತಿ ಕಂಡುಬಂದಿದೆ. ಹಾಗಾದರೆ ಈ ಎಲ್ಲ ಜಿಲ್ಲೆಗಳಲ್ಲೂ ಕಾಂಗ್ರೆಸ್ ಕಾರ್ಯಕ್ರಮ ನಡೆದಿತ್ತೆ?” ಎಂದು ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್ ಸಮಾವೇಶದ ಕಾರಣಕ್ಕೆ ಪರೀಕ್ಷೆಗೆ ಹೋಗಲಾಗಲಿಲ್ಲ” ಎಂಬ ನರೇಟಿವ್‌ಗಳಲ್ಲಿ ಯಾವುದೇ ಅರ್ಥವಿಲ್ಲ ಎಂದು ಅನೇಕರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಮುಖಂಡರಾದ ಎಂ.ಜಿ. ಹೆಗಡೆಯವರು ಫೇಸ್ ಬುಕ್‌ನಲ್ಲಿ ಪ್ರತಿಕ್ರಿಯಿಸಿ, “ಒಟ್ಟು ಕೇಂದ್ರಗಳು ಇದ್ದದ್ದು 68. ಬೆಂಗಳೂರಿನಲ್ಲಿ ಪರೀಕ್ಷೆಗೆ ಹೋದವರು ಸುಮಾರು 35000 ವಿದ್ಯಾರ್ಥಿಗಳು. ತಡವಾಗಿ ತಲುಪಿದ ವಿದ್ಯಾರ್ಥಿಗಳ ಸಂಖ್ಯೆ ಬಹುಶಃ 10. ಇದೇ ದಿನ ಯೋಗ ದಿನಾಚರಣೆ, ಮ್ಯಾರಾಥಾನ್ ಕಾರ್ಯಕ್ರಮ ಕೂಡಾ ಇತ್ತು. ಸಮಾವೇಶದ ಒಂದು ದಿನ ಮೊದಲೇ ಆ ಸ್ಥಳದಲ್ಲಿ ನಾನಿದ್ದೆ. ಅಲ್ಲಿದ್ದ ಎಲ್ಲ ನಾಯಕರಿಗೂ ನೀಟ್ ಪರೀಕ್ಷೆ ವಿವರ ಗೊತ್ತಿತ್ತು. ಪರೀಕ್ಷೆ ಸಮಯ 1.30. ಒಳಗೆ ಹೋಗಬೇಕಾದ ಸಮಯ ಬೆಳಿಗ್ಗೆ 11 ರಿಂದ 1.15. ಕಾಂಗ್ರೆಸ್ ಸಮಾವೇಶ 11.30ಕ್ಕೆ ಶುರುವಾದದ್ದು. ಬಹುತೇಕ ಜನ ಕಾರ್ಯಕ್ರಮ ತಲುಪಿಯಾಗಿತ್ತು. ಐವರು ಹಿರಿಯ ನಾಯಕರು ಒಟ್ಟಿಗೆ 12.30ಕ್ಕೆ ಬಂದರು. ಕಾರ್ಯಕ್ರಮ ಮುಗಿದದ್ದು ಸುಮಾರು 4 ಗಂಟೆಗೆ. ಈ ಕುರಿತು ಪೊಲೀಸ್ ಮತ್ತು ಇತರೆ ಇಲಾಖೆಗಳು ಸಂಪೂರ್ಣ ವಿವರವನ್ನು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿದ್ದಾರೆ. ಹೀಗಿರುವಾಗ ಈ ಹತ್ತು ವಿದ್ಯಾರ್ಥಿಗಳು ಕಾಂಗ್ರೆಸ್ ಸಮಾವೇಶದಿಂದ ತಡವಾಗಿ ತಲುಪಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು” ಎಂದಿದ್ದಾರೆ.

“ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಒಬ್ಬನೇ ಒಬ್ಬ ಸಂಬಂಧಪಟ್ಟ ಸಿಬ್ಬಂದಿಯನ್ನು ಈವರೆಗೂ ಬಂಧನ ಮಾಡಲಾಗದ, ಸುಮಾರು ಹತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೂ, ಅವರ ಮನೆಗೆ ಹೋಗಿ ಮಾತನಾಡಿಸದ ಆರ್‌ಎಸ್‌ಎಸ್ ಬಿಜೆಪಿ ಸರ್ಕಾರದ ಮಹಾತಪ್ಪನ್ನು ಬದಿಗೆ ಸರಿಸಲು, ಈಗ ವಿದ್ಯಾರ್ಥಿಗಳ ಕುರಿತು ಭಾರೀ ಆಸಕ್ತಿಯನ್ನು ಭಕ್ತರು ತೋರಿಸುತ್ತಿದ್ದಾರೆ. ಇದು ಕಾಂಗ್ರೆಸ್ ತಲೆಗೆ ಕಟ್ಟುವ ವ್ಯರ್ಥ ಪ್ರಯತ್ನ” ಎಂದು ಕುಟುಕಿದ್ದಾರೆ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ಪ್ರತಿಯೊಬ್ಬರೂ ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವುದು ಸೂಕ್ತ: ಅಕ್ಬರ್ ಅಲಿ ಉಡುಪಿ

ಜಾತಿ, ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಪ್ರೀತಿ, ತ್ಯಾಗ ಹಾಗೂ ಸಮಾನತೆಯ...

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...