ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಿಧಿಸಲಾಗಿದ್ದ ಸಫಾರಿ ನಿರ್ಬಂಧವನ್ನು ರಾಜ್ಯ ಸರ್ಕಾರ ಇದೀಗ ತೆರವುಗೊಳಿಸಿದ್ದು, ಇನ್ನು ಮುಂದೆ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿ ಆರಂಭವಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಜಂಗಲ್ ಸಫಾರಿಯನ್ನು ಪುನರಾರಂಭಿಸುವ ಕುರಿತು ಅಧ್ಯಯನ ನಡೆಸಿದ್ದ ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಸಂಪೂರ್ಣವಾಗಿ ಅಂಗೀಕರಿಸಿದೆ. ವೈಜ್ಞಾನಿಕ ಮೌಲ್ಯಮಾಪನಗಳನ್ನು ನಡೆಸಿದ ನಂತರ, ಉದ್ಯಾನಗಳ ‘ಸಾಗಣೆ ಸಾಮರ್ಥ್ಯ’ವನ್ನು (Carrying Capacity) ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ, ಸಮಿತಿಯ ಶಿಫಾರಸಿನಂತೆ ಸಫಾರಿಯನ್ನು ಸಂಪೂರ್ಣ ನಿಯಂತ್ರಿತ ರೀತಿಯಲ್ಲಿ ನಡೆಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್
ಕರ್ನಾಟಕದ ಪರಿಸರ ಪ್ರವಾಸೋದ್ಯಮವು ಸ್ಥಳೀಯರಿಗೆ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರ, ವನ್ಯಜೀವಿಗಳ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವ ಜೊತೆಗೆ, ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ಪಾಲಿಸಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.
ಈ ನಿರ್ಧಾರದಿಂದಾಗಿ ವನ್ಯಜೀವಿ ಪ್ರಿಯರು ಮತ್ತು ಪ್ರವಾಸಿಗರಲ್ಲಿ ಸಂತಸ ಮನೆಮಾಡಿದ್ದು, ಸ್ಥಳೀಯ ಆರ್ಥಿಕತೆಗೂ ಹೆಚ್ಚಿನ ಉತ್ತೇಜನ ಸಿಗುವ ನಿರೀಕ್ಷೆಯಿದೆ.




