ʼಡಬ್ಲೆಟ್‌ʼಗಳಿಂದ ನಡುಗಿದ ವೆನೆಜುವೆಲಾ; ಏನಿದು ಅವಳಿ ಭೂಕಂಪ? ಯಾಕಿಷ್ಟು ಅಪಾಯಕಾರಿ?

Date:

ಪ್ರಕೃತಿ ವಿಕೋಪಗಳ ಪಟ್ಟಿಯಲ್ಲಿ ಭೂಮಿ ಕಂಪಿಸುವುದನ್ನ ಅತ್ಯಂತ ಅನಿರೀಕ್ಷಿತ ಮತ್ತು ಅತೀ ಹೆಚ್ಚು ಜೀವಹಾನಿ ಉಂಟುಮಾಡುವ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಒಂದು ಭೂಕಂಪದ ಭೀಕರತೆಯಿಂದ ಚೇತರಿಸಿಕೊಳ್ಳುವ ಮುನ್ನವೇ, ಅದೇ ತೀವ್ರತೆಯ ಮತ್ತೊಂದು ಕಂಪನ ಅಪ್ಪಳಿಸಿದರೆ ಏನಾದೀತು? ಕೇವಲ 39 ಸೆಕೆಂಡುಗಳ ಅಂತರದಲ್ಲಿ ವೆನಿಜುವೆಲಾವನ್ನು ಅಲುಗಾಡಿಸಿ ಬೆಂಡಾಗಿಸಿದ ‘ಡಬ್ಲೆಟ್’ (Doublet) ಅಲಿಯಾಸ್ ‘ಅವಳಿ ಭೂಕಂಪಗಳು’ ಸೃಷ್ಟಿಸಿದ ಪ್ರಳಯ, ಭೂಕಂಪಶಾಸ್ತ್ರಜ್ಞರ ಎದೆಯಲ್ಲೂ ನಡುಕ ಹುಟ್ಟಿಸಿದೆ.

- Advertisement -

ಒಂದೇ ಭೂ ಪ್ರದೇಶದಲ್ಲಿ, ಒಂದೇ ರೀತಿಯ ತೀವ್ರತೆಯ ಎರಡು ಕಂಪನಗಳು ಸಂಭವಿಸುವುದು ಹೇಗೆ? ಭೂಮಿಯ ಆಳದಲ್ಲಿ ಅಡಗಿರುವ ‘ಆಸ್ಪೆರಿಟಿಗಳು’ (Asperities) ಈ ವಿನಾಶಕ್ಕೆ ಹೇಗೆ ಕಾರಣವಾಗುತ್ತವೆ? ಸಾಂಪ್ರದಾಯಿಕ ಭೂಕಂಪಗಳಿಗಿಂತ ಇವು ಏಕೆ ಹೆಚ್ಚು ಘಾತುಕ? ವೈಜ್ಞಾನಿಕವಾಗಿ ನೋಡಿದಾಗಲೇ ಈ ಸಂಕೀರ್ಣಗಳು ಅರ್ಥವಾಗುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಮೊದಲಿಗೆ Asperities ಎಂದರೆ, ಭೂಕಂಪ ಶಾಸ್ತ್ರದ ಪರಿಭಾಷೆಯಲ್ಲಿ, ಭೂಮಿಯ ಒಳಗಿನ ಫಾಲ್ಟ್ ವಲಯಗಳಲ್ಲಿ (Fault zones) ಕಂಡುಬರುವ ಒರಟಾದ, ಅಸಮತೋಲಿತ ಅಥವಾ ಸಿಕ್ಕಿಹಾಕಿಕೊಂಡಿರುವ ಬಂಡೆಗಳ ಭಾಗ. ಇವು ಭೂಮಿಯ ಪದರಗಳು ಸುಲಭವಾಗಿ ಜಾರದಂತೆ ತಡೆಯೊಡ್ಡುತ್ತವೆ. ಭೂಮಿಯ ಮೇಲ್ಮೈಯಲ್ಲಿರುವ ಬೃಹತ್ ಟೆಕ್ಟೋನಿಕ್ ಪ್ಲೇಟ್‌ಗಳು ನಿರಂತರವಾಗಿ ಚಲಿಸುತ್ತಿರುತ್ತವೆ. ಈ ಪ್ಲೇಟ್‌ಗಳು ಒಂದರ ಮೇಲೊಂದು ಅಥವಾ ಒಂದಕ್ಕೊಂದು ಅಡ್ಡಲಾಗಿ ಜಾರುವಾಗ, ಅವುಗಳ ಸಂಪರ್ಕ ವಲಯದಲ್ಲಿರುವ ಬಂಡೆಗಳ ಮೇಲ್ಮೈ ಒರಟಾಗಿರುತ್ತದೆ. ಈ ಒರಟಾದ, ಸಿಕ್ಕಿಹಾಕಿಕೊಂಡಿರುವ ಭಾಗಗಳೇ ಆಸ್ಪೆರಿಟಿಗಳು.

image 148 2

ಪ್ಲೇಟ್‌ಗಳು ಚಲಿಸಲು ಪ್ರಯತ್ನಿಸುತ್ತಿದ್ದರೂ, ಈ ಆಸ್ಪೆರಿಟಿಗಳು ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತವೆ (Locking mechanism). ಇದರಿಂದಾಗಿ ಕ್ರಮೇಣ ಆ ಪ್ರದೇಶದಲ್ಲಿ ಭಾರೀ ಪ್ರಮಾಣದ ಶಕ್ತಿ ಮತ್ತು ಒತ್ತಡ ಸಂಗ್ರಹವಾಗುತ್ತದೆ. ಒಂದು ಹಂತದಲ್ಲಿ, ಸಂಗ್ರಹವಾದ ಒತ್ತಡ ಬಂಡೆಗಳ ಸಾಮರ್ಥ್ಯವನ್ನು ಮೀರಿದಾಗ, ಈ ಆಸ್ಪೆರಿಟಿಗಳು ಇದ್ದಕ್ಕಿದ್ದಂತೆ ಮುರಿಯುತ್ತವೆ ಅಥವಾ ಜಾರುತ್ತವೆ. ಈ ಅನಿರೀಕ್ಷಿತ ಬಿಡುಗಡೆಯೇ ಭೂಕಂಪವಾಗಿ ಭೂಮಿಯ ಮೇಲ್ಮೈಗೆ ಅನುಭವಕ್ಕೆ ಬರುತ್ತದೆ. ಸಾಮಾನ್ಯ ಭೂಕಂಪದಲ್ಲಿ, ಆಸ್ಪೆರಿಟಿಯು ಪೂರ್ತಿಯಾಗಿ ಮುರಿದು ಒಮ್ಮೆಯೇ ಒತ್ತಡ ಬಿಡುಗಡೆಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮೊದಲ ಕಂಪನವು ಸಿಕ್ಕಿಹಾಕಿಕೊಂಡಿರುವ ಆಸ್ಪೆರಿಟಿಯನ್ನು ಪೂರ್ಣವಾಗಿ ಮುರಿಯಲು ವಿಫಲವಾಗಿರುತ್ತದೆ. ಆಗ ಆ ಬಂಡೆ ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಕೆಲವೇ ಸೆಕೆಂಡುಗಳ ಅಥವಾ ನಿಮಿಷಗಳ ಅಂತರದಲ್ಲಿ ಅದು ಸಂಪೂರ್ಣವಾಗಿ ಮುರಿದಾಗ ಎರಡನೇ ಕಂಪನ (Doublet) ಉಂಟಾಗುತ್ತದೆ. ಇದೇ ಅವಳಿ ಭೂಕಂಪ!

ಇನ್ನೂ ಸರಳವಾಗಿ, ಆಸ್ಪೆರಿಟಿಗಳು ಎಂದರೆ ಭೂಮಿಯ ಒಳಗಿನ “ಭೂಕಂಪದ ಲಾಕ್‌ಗಳು” (Earthquake locks) ಎಂದುಕೊಳ್ಳಬಹುದು. ಇವು ಎಷ್ಟು ಬಲವಾಗಿರುತ್ತವೆಯೋ, ಅಷ್ಟು ಹೆಚ್ಚು ಶಕ್ತಿ ಸಂಗ್ರಹವಾಗುತ್ತದೆ ಮತ್ತು ಭೂಕಂಪದ ತೀವ್ರತೆಯೂ ಅಷ್ಟೇ ಹೆಚ್ಚಾಗುತ್ತದೆ.

ವೆನಿಜುವೆಲಾದ ಉತ್ತರ ಕರಾವಳಿಯಲ್ಲಿ ಕೇವಲ 39 ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಕಂಪನಗಳಿಂದ ಅನಾಹುತದ ಕೂಪ ಬಾಯ್ತೆರೆದಿತ್ತು. ಈ ಭಯಾನಕ ಪ್ರಾಕೃತಿಕ ವಿಕೋಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ 235ಕ್ಕೆ ಏರಿಕೆಯಾಗಿದೆ. ಸುಮಾರು  5 ಸಾವಿರ ಜನರು ಗಾಯಗೊಂಡಿದ್ದಾರೆ. ಈ ಸಂಖ್ಯೆ ಏರುತ್ತಲೇ. ಕಾಣೆಯಾದ ಸಾವಿರಾರು ಜನರಿಗೆ ಸಮರೋಪಾದಿಯಲ್ಲಿ ಶೋಧ ಕಾರ್ಯವೂ ನಡೆಯುತ್ತಿದೆ. ಇದು ಶತಮಾನದಲ್ಲೇ ಅತ್ಯಂತ ಪ್ರಬಲ ಭೂಕಂಪ ಎಂದು ಪರಿಗಣಿಸಲ್ಪಟ್ಟಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿರುವ ಜನರು ತಮ್ಮ ಮನೆಗಳನ್ನು ತೊರೆದು ಹೊರ ಬರುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಭೂಕಂಪಗಳಿಂದ ತತ್ತರಿಸಿ ಹೋದ ದೇಶದ ನೆರವಿಗೆ ಧಾವಿಸುತ್ತಿರುವ ವಿಶ್ವದ ನಾಯಕರಿಗೆ ಆ ದೇಶದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಧನ್ಯವಾದ ಹೇಳಿದ್ದಾರೆ. ವೆನೆಜುವೆಲಾ ಈಗ ತುರ್ತುಪರಿಸ್ಥಿತಿಯಲ್ಲಿದೆ!

ವೆನಿಜುವೆಲಾದ ಬೊಕೊನೊ ಫಾಲ್ಟ್ ವಲಯದ ಬಗ್ಗೆ ಅಧ್ಯಯನ ನಡೆಸಿದ ಸ್ಥಳೀಯ ಭೂಕಂಪಶಾಸ್ತ್ರಜ್ಞರು ಮತ್ತು ಅಂತಾರಾಷ್ಟ್ರೀಯ ತಂಡಗಳು (ಫೆಂಡೆಲ್ ಮತ್ತು ತಂಡ), “ಈ ವಲಯವು ಅತ್ಯಂತ ಸಂಕೀರ್ಣವಾಗಿದೆ (Complex Fault System). ಇಲ್ಲಿ ಪ್ಲೇಟ್‌ಗಳು ಜಾರುವ ವೇಗವು ಬೃಹತ್ ಪ್ರಮಾಣದ ಶಕ್ತಿಯನ್ನು ಸಂಗ್ರಹಿಸುತ್ತದೆ. ಹೀಗಾಗಿ ಇಲ್ಲಿ ಬರುವ ಯಾವುದೇ ಭೂಕಂಪವು ‘ಸಿಂಗಲ್’ ಆಗಿರದೆ, ‘ಮಲ್ಟಿಪಲ್’ (ಡಬ್ಲೆಟ್) ಆಗುವ ಸಾಧ್ಯತೆ ಹೆಚ್ಚಿರುತ್ತದೆ” ಎಂದು ಎಚ್ಚರಿಸಿದ್ದಾರೆ.

image 72 3

ಏನಿದು ಡಬ್ಲೆಟ್ ವಿದ್ಯಮಾನ?

ʼಡಬ್ಲೆಟ್ʼ ಅಥವಾ ಅವಳಿ ಭೂಕಂಪ ಎಂದರೆ ಒಂದೇ ಪ್ರದೇಶದಲ್ಲಿ, ಒಂದೇ ರೀತಿಯ ಸೀಸ್ಮಿಕ್ ವೇವ್ ಫಾರ್ಮ್‌ಗಳನ್ನು (Seismic waveforms) ಹೊಂದಿರುವ, ಅತೀ ಕಡಿಮೆ ಕಾಲಾವಧಿಯಲ್ಲಿ ಸಂಭವಿಸುವ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರಬಲ ಕಂಪನಗಳ ಸರಣಿ. ಸಾಮಾನ್ಯವಾಗಿ ಒಂದು ಸಾಂಪ್ರದಾಯಿಕ ಭೂಕಂಪ ಸಂಭವಿಸಿದಾಗ ಅದನ್ನು ‘ಮೇನ್ ಶಾಕ್’ ಎಂದೂ ಅದಾದ ನಂತರ ಭೂಮಿಯ ಒಳಗಿನ ಒತ್ತಡ ಸಮಸ್ಥಿತಿಗೆ ಬರುವ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ಕಂಪನಗಳು ಸಂಭವಿಸುವುದನ್ನು ಆಫ್ಟರ್‌ಶಾಕ್ಸ್ ಎಂದೂ ಕರೆಯಲಾಗುತ್ತದೆ. ಆದರೆ ಡಬ್ಲೆಟ್ ಕೇಸಿನಲ್ಲಿ ಎರಡೂ ಕಂಪನಗಳು ಬೃಹತ್ ಪ್ರಮಾಣದ ಶಕ್ತಿ ಹೊಂದಿರುತ್ತವೆ. ಇವುಗಳ ನಡುವಿನ ತೀವ್ರತೆಯ ವ್ಯತ್ಯಾಸ ಸಾಮಾನ್ಯವಾಗಿ 0.4 ಮ್ಯಾಗ್ನಿಟ್ಯೂಡ್‌ಗಿಂತ ಕಡಿಮೆ ಇರುವುದರಿಂದ, ಇವೆರಡೂ ಪ್ರಧಾನ ಭೂಕಂಪಗಳಾಗಿಯೇ ಪರಿಗಣಿಸಲ್ಪಡುತ್ತವೆ.

ಇತಿಹಾಸದಲ್ಲಿ ಹೇಗಿತ್ತು ಡಬ್ಲೆಟ್‌ ಆರ್ಭಟ?

ಅವಳಿ ಭೂಕಂಪಗಳು ಈಚಿನ ವಿದ್ಯಮಾನಗಳಲ್ಲ. ಇಂತಹ ಘಟನೆಗಳು ವಿಜ್ಞಾನಿಗಳಿಗೆ, ಪ್ರಕೃತಿಯ ಅನಿರೀಕ್ಷಿತ ಶಕ್ತಿಯ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿವೆ. ಈ ಅವಳಿ ಭೂಕಂಪಗಳು ಸಂಭವಿಸಿದಾಗ ಅನಾಹುತದ ಪ್ರಮಾಣ ಕಂಪನದ ತೀವ್ರತೆಯ ಮೇಲೆ ಮಾತ್ರವಲ್ಲ, ಆ ಕಂಪನಗಳು ಮುಂದುವರಿಯುವ ‘ಅವಧಿ’ಯ ಮೇಲೆ ಅವಲಂಬಿತವಾಗಿರುತ್ತದೆ.

1812ರ ಮಾರ್ಚ್ 26ರ ಸಂಜೆ 4:37ರ ಸುಮಾರಿಗೆ ವೆನೆಜುವೆಲಾದಲ್ಲಿ ಮೊದಲ ಪ್ರಬಲ ಭೂಕಂಪ ಸಂಭವಿಸಿತು. ಕ್ಯಾರಕಾಸ್ ನಗರದ ಜನರು ಅಂದು ಧಾರ್ಮಿಕ ಆಚರಣೆಯಲ್ಲಿ (Holy Thursday) ತೊಡಗಿದ್ದಾಗ ಈ ದುರಂತ ಸಂಭವಿಸಿತು. ಮೊದಲ ಕಂಪನ ಸಂಭವಿಸಿದ ಕೆಲವೇ ನಿಮಿಷಗಳ ನಂತರ, ಅದೇ ತೀವ್ರತೆಯ ಮತ್ತೊಂದು ಭೀಕರ ಕಂಪನ ಅಪ್ಪಳಿಸಿತು.ಆ ಕಂಪನಗಳು ಅಕ್ಷರಶಃ ಎಲ್ಲವನ್ನೂ ನೆಲಸಮ ಮಾಡಿದ್ದವು. ಅಂದಿನ ವರದಿಗಳ ಪ್ರಕಾರ, ಈ ದುರಂತದಲ್ಲಿ ಸುಮಾರು 30,000 ಜನರು ಬಲಿಯಾಗಿದ್ದರು.

image 148 3

ಇದನ್ನೂ ಓದಿ: ಅಕ್ರಮ ಕಟ್ಟಡಗಳ ಅಗ್ನಿ ದುರಂತಗಳು; ಸಾಲು ಸಾಲು ಸಾವಿಗೆ ಹೊಣೆ ಯಾರು?

1997ರಲ್ಲಿ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಹರ್ನಾಯ್‌ನಲ್ಲಿ ಸಂಭವಿಸಿದ ಭೂಕಂಪವು ‘ಡಬ್ಲೆಟ್’ ವಿದ್ಯಮಾನದ ಅಧ್ಯಯನಕ್ಕೆ ಒಂದು ಪ್ರಮುಖ ಪಾಠ. ಮೊದಲಿಗೆ 7.0 ತೀವ್ರತೆಯ ಭೂಕಂಪ ಸಂಭವಿಸಿತು. ಕೇವಲ 19 ಸೆಕೆಂಡುಗಳ ಅಂತರದಲ್ಲಿ 6.8 ತೀವ್ರತೆಯ ಮತ್ತೊಂದು ಭೂಕಂಪ ಅಪ್ಪಳಿಸಿತು. ಈ ಎರಡೂ ಕಂಪನಗಳ ನಡುವಿನ ಅಲ್ಪಾವಧಿಯು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರಿಗೆ ಅಥವಾ ಕಟ್ಟಡದಿಂದ ಹೊರಬರಲು ಪ್ರಯತ್ನಿಸುತ್ತಿದ್ದವರಿಗೆ ಯಾವ ಅವಕಾಶವನ್ನೂ ನೀಡಿರಲಿಲ್ಲ. ಮೊದಲ ಕಂಪನದಲ್ಲಿ ಬಿರುಕು ಬಿಟ್ಟಿದ್ದ ಕಟ್ಟಡಗಳು ಎರಡನೇ ಕಂಪನದಲ್ಲಿ ಸಂಪೂರ್ಣವಾಗಿ ಕುಸಿದುಬಿದ್ದಿದ್ದವು.

ಸೊಲೊಮನ್ ದ್ವೀಪಗಳು ಮತ್ತು ಪೆಸಿಫಿಕ್ ಸಾಗರದಂತಹ ಪ್ಲೇಟ್ ಬೌಂಡರಿ ವಲಯಗಳಲ್ಲಿ ಭೂಕಂಪಶಾಸ್ತ್ರಜ್ಞರು ನಡೆಸಿದ ದೀರ್ಘಕಾಲೀನ ಅಧ್ಯಯನಗಳು ಆತಂಕಕಾರಿ ವಿಷಯವೊಂದನ್ನ ಬಹಿರಂಗಪಡಿಸಿದ್ದಾರೆ. ಈ ವಲಯಗಳಲ್ಲಿ ಸಂಭವಿಸುವ 7.0 ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪಗಳ ಪೈಕಿ ಸುಮಾರು 10% ರಿಂದ 25% ರಷ್ಟು ಭೂಕಂಪಗಳು ಡಬ್ಲೆಟ್ ಸ್ವರೂಪದಲ್ಲೇ ಇರುತ್ತವೆ ಎಂದು ಅಂಕಿಅಂಶಗಳು ಹೇಳುತ್ತವೆ.

ಡಬ್ಲೆಟ್ ಭೂಕಂಪಗಳು ಏಕೆ ಹೆಚ್ಚು ಘಾತುಕ?

ಈ ವಿದ್ಯಮಾನವು ಸಾಮಾನ್ಯ ಭೂಕಂಪಗಳಿಗಿಂತ ಭೀಕರವಾಗಿರುವುದಕ್ಕೆ ಮುಖ್ಯ ಕಾರಣ ಕಂಪನದ ಅವಧಿ ದುಪ್ಪಟ್ಟಾಗುವುದು. ಒಂದರ ಮೇಲೊಂದು ಬರುವ ಕಂಪನಗಳಿಂದ ಭೂಮಿ ಅಲುಗಾಡುವ ಅವಧಿ ಹೆಚ್ಚಾಗುತ್ತದೆ. ಇದು ಕಟ್ಟಡಗಳ ರಚನೆಯನ್ನು ಸಂಪೂರ್ಣವಾಗಿ ಅಸ್ಥಿರಗೊಳಿಸಿ, ಅವು ನೆಲಸಮವಾಗುವಂತೆ ಮಾಡುತ್ತದೆ. ಮೊದಲ ಕಂಪನದಿಂದಾಗಿ ಕಟ್ಟಡಗಳು ಬಿರುಕು ಬಿಟ್ಟಿರುತ್ತವೆ, ಅಂತಹ ಸಮಯದಲ್ಲಿ ಎರಡನೇ ಕಂಪನ ಬಂದರೆ, ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಗಳು ಮತ್ತು ಕಟ್ಟಡದ ಒಳಗಿನವರು ಅಪಾಯಕ್ಕೆ ಸಿಲುಕುತ್ತಾರೆ. ರಸ್ತೆಗಳು ಮುಚ್ಚಿ ಹೋಗುವುದು ಮತ್ತು ಸಂಪರ್ಕ ಕಡಿತಗೊಳ್ಳುವುದು ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗುತ್ತದೆ. ಭೂಮಿಯ ಮೇಲೆ ಸುಮಾರು 20% ನಷ್ಟು ಬೃಹತ್ ಭೂಕಂಪಗಳು ಈ ರೀತಿಯ ಡಬ್ಲೆಟ್ ಸ್ವರೂಪದಲ್ಲಿಯೇ ಸಂಭವಿಸುತ್ತವೆ.

1970 ಮತ್ತು 80ರ ದಶಕದವರೆಗೆ ಇವುಗಳನ್ನು ಕೇವಲ ಸಾಮಾನ್ಯ ಫೋರ್‌ಶಾಕ್ ಅಥವಾ ಆಫ್ಟರ್‌ಶಾಕ್ ಎಂದು ತಪ್ಪಾಗಿ ಭಾವಿಸಲಾಗಿತ್ತು. ಆದರೆ ಆಧುನಿಕ ಸೀಸ್ಮೋಗ್ರಾಮ್ ಅಧ್ಯಯನಗಳು ಇವು ಪ್ರತ್ಯೇಕವಾದ ಸೀಕ್ವೆನ್ಸ್‌ಗಳೆಂದು ದೃಢಪಡಿಸಿವೆ. ಸದ್ಯ ವಿಜ್ಞಾನಿಗಳು ‘ಯುಸಿಇಆರ್‌ಎಫ್-3’ (UCERF3) ನಂತಹ ಸಂಕೀರ್ಣ ಮಾದರಿಗಳನ್ನು ಬಳಸುತ್ತಿದ್ದಾರೆ. ಇದು ಫಾಲ್ಟ್ ವಲಯವು ವಿಭಜನೆಯಾಗುವ ಬದಲು, ಒಂದಕ್ಕಿಂತ ಹೆಚ್ಚು ಸೆಗ್ಮೆಂಟ್‌ಗಳು ಏಕಕಾಲದಲ್ಲಿ ಅಥವಾ ಸರಣಿಯಲ್ಲಿ ಮುರಿಯುವ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಹೊಸ ಮಾದರಿಗಳು ಭೂಕಂಪದ ಅಪಾಯದ ಅಂದಾಜನ್ನು ಹೆಚ್ಚು ನಿಖರವಾಗಿ ಮಾಡಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ಭೂಕಂಪಗಳನ್ನು ತಡೆಯಲು ಅಥವಾ ನಿಖರವಾಗಿ ಮುನ್ಸೂಚಿಸಲು ಇಂದಿನ ತಂತ್ರಜ್ಞಾನಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಇದನ್ನೂ ಓದಿ: ʼಮೇ ವಾಪಸ್ ಆವೂಂಗಾʼ: ಬಿರುಕುಬಿಟ್ಟ ಬಯಲಿನೊಳಗೊಂದು ಚಿಗುರು!

ವೆನಿಜುವೆಲಾದ ದುರಂತಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಆ ದೇಶದಲ್ಲಿ ‘ಅರ್ಲಿ ವಾರ್ನಿಂಗ್ ಸಿಸ್ಟಮ್’ ಇಲ್ಲದಿರುವುದು. ಸೆನ್ಸಾರ್‌ಗಳ ಮೂಲಕ ಭೂಕಂಪದ ಮೊದಲ ಲಕ್ಷಣಗಳನ್ನು ಪತ್ತೆ ಹಚ್ಚಿ, ಪ್ರಬಲ ಶಾಕ್ ಅಪ್ಪಳಿಸುವ ಮುನ್ನ ಜನರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಜೀವ ರಕ್ಷಣೆಗೆ ಅತ್ಯಗತ್ಯ. ಇಂತಹ ದೊಡ್ಡ ಕಂಪನದ ನಂತರ ಮುಂದಿನ ಒಂದು ವಾರದಲ್ಲಿ ಆಫ್ಟರ್‌ಶಾಕ್ ಬರುವ ಸಾಧ್ಯತೆ ಅತಿ ಹೆಚ್ಚಿರುತ್ತದೆ ಎಂಬುದನ್ನು ವಿಜ್ಞಾನಿಗಳು ನಿರಂತರವಾಗಿ ಎಚ್ಚರಿಸುತ್ತಲೇ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಾವು ಕಟ್ಟಡ ನಿರ್ಮಾಣದ ತಂತ್ರಜ್ಞಾನವನ್ನು ಸುಧಾರಿಸಿದ್ದರೂ, ಅವಳಿ ಭೂಕಂಪಗಳಂತಹ ಅನಿರೀಕ್ಷಿತ ವಿದ್ಯಮಾನಗಳು ನಮ್ಮ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ದೊಡ್ಡ ಸವಾಲೇ ಆಗಿವೆ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಒಂದು ಕಟ್ಟಡವನ್ನ ಒಂದು ಸಾಧಾರಣ ಕಂಪನ ತಡೆದುಕೊಳ್ಳುವಂತೆಯೇ ಕಟ್ಟಲಾಗಿರುತ್ತದೆ.

ಪ್ರಕೃತಿಯ ಶಕ್ತಿಯ ಮುಂದೆ ಮಾನವನ ನಿರ್ಮಾಣಗಳು, ತಂತ್ರಜ್ಞಾನ, ವಿಜ್ಞಾನಗಳು ಅಲ್ಪವೇ ಅನಿಸಬಹುದು, ಆದರೆ ಮುನ್ನೆಚ್ಚರಿಕೆಯ ಮೂಲಕ ದುರಂತದ ಪ್ರಮಾಣವನ್ನು ಕಡಿಮೆ ಮಾಡಬಹುದು. ನಗರ ಯೋಜನೆ ಮಾಡುವವರು, ಎಂಜಿನಿಯರ್‌ಗಳು ಮತ್ತು ನೀತಿ ನಿರೂಪಕರು ಇಂತಹ ಭೌಗೋಳಿಕ ಸತ್ಯಗಳನ್ನು ಅರ್ಥಮಾಡಿಕೊಂಡು ವಿಪತ್ತು ನಿರ್ವಹಣೆಯನ್ನು ಮರುರೂಪಿಸಬೇಕು. ಪ್ರಕೃತಿಗೆ ಎದುರಾಗಿ ಹೋರಾಡಲು ಸಾಧ್ಯವಿಲ್ಲ. ಆದರೆ ವಿಕೋಪಗಳ ಪ್ರಭಾವವನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ಬದುಕಲು ಕಲಿಯಬಹುದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...