ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿನ ನಾಗರಿಕ ಪ್ರಜ್ಞೆಯನ್ನು ಪ್ರಶ್ನಿಸಿರುವ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದ್ದು, ‘ನಿಮ್ಮ ಪತಿಗೆ ಹೇಳಿ ಈ ಸಮಸ್ಯೆ ಬಗೆಹರಿಸಬಾರದೇಕೆ?’ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೆಪ್ಟೆಂಬರ್ 24ರಂದು ಬೆಳಗ್ಗೆ ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ (@ArtSivasri) ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಶಿವಶ್ರೀ, ತಮ್ಮ 5 ಗಂಟೆಗಳ ರೈಲು ಪ್ರಯಾಣದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 56 ಆಸನಗಳಿದ್ದ ಕೋಚ್‌ನಲ್ಲಿ ಸುಮಾರು 40 ಮಂದಿ ಮಧ್ಯವಯಸ್ಕ ಪುರುಷರ ಗುಂಪೊಂದು ಐದು ಗಂಟೆಗಳ ಕಾಲ ನಿರಂತರವಾಗಿ ಗದ್ದಲ ಮಾಡಿದೆ. ಜೋರಾಗಿ ಮಾತನಾಡುವುದು, ನಗುವುದು, ಯುಎನ್‌ಒ (UNO) ಆಟವಾಡುವುದು ಹಾಗೂ ಹಾಡುಗಳನ್ನು ಹಾಡುವ ಮೂಲಕ ತಮಗೆ ತೀವ್ರ ತೊಂದರೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಗದ್ದಲವನ್ನು ಸಹಿಸಲಾಗದೆ ಟಿಟಿಇ (TTE) ಅವರಿಗೆ ದೂರು ನೀಡಿ, ಬೇರೆ ಕೋಚ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರೂ, ಆಸನ ಲಭ್ಯವಿಲ್ಲದ ಕಾರಣ ಅದು ಸಾಧ್ಯವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕನಿಷ್ಠ ನಾಗರಿಕ ಪ್ರಜ್ಞೆಯೂ ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೊನೆಯಲ್ಲಿ “ದೇವರೇ ಈ ದೇಶವನ್ನು ಕಾಪಾಡಬೇಕು” (God save this country) ಎಂದು ಬರೆದುಕೊಂಡಿದ್ದಾರೆ.
ಆದರೆ, ಅವರು ಯಾವ ರೈಲು, ಯಾವ ಮಾರ್ಗದಲ್ಲಿ ಹಾಗೂ ಯಾವ ನಿಲ್ದಾಣಗಳ ನಡುವೆ ಪ್ರಯಾಣಿಸುತ್ತಿದ್ದರು ಎನ್ನುವ ನಿಖರ ವಿವರಗಳನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿಲ್ಲ. ಈವರೆಗೂ ರೈಲ್ವೆ ಇಲಾಖೆಯಿಂದ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಪ್ರಸ್ತುತ ವರದಿಯು ಸಂಪೂರ್ಣವಾಗಿ ಶಿವಶ್ರೀ ಅವರು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿದೆ.
ನೆಟ್ಟಿಗರ ತೀಕ್ಷ್ಣ ಪ್ರತಿಕ್ರಿಯೆ
ಶಿವಶ್ರೀ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ನೆಟ್ಟಿಗರು, ಸಾರ್ವಜನಿಕ ಸಾರಿಗೆಯ ವಾಸ್ತವ ಸ್ಥಿತಿಯನ್ನು ಮುಂದಿಟ್ಟು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. “ಬಿಜೆಪಿ ಸಂಸದರ ಪತ್ನಿಯಾಗಿರುವ ನೀವು ಕೇವಲ ಒಂದು ದಿನದ ಪ್ರಯಾಣಕ್ಕೆ ಇಷ್ಟೊಂದು ಸುಸ್ತಾದರೆ, ನಿತ್ಯ ಕೆಲಸ ಕಾರ್ಯಗಳಿಗಾಗಿ ರೈಲಿನಲ್ಲಿ ಸಂಚರಿಸುವ ಸಾಮಾನ್ಯ ಪ್ರಯಾಣಿಕರ ಪಾಡೇನು? ನೀವೇಕೆ ನಿಮ್ಮ ಪತಿಗೆ ಹೇಳಿ ಪ್ರಧಾನಿ ಮೂಲಕ ರೈಲ್ವೆ ವ್ಯವಸ್ಥೆಯಲ್ಲಿನ ಈ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸಬಾರದು?” ಎಂದು ನೆಟ್ಟಿಗರು ನೇರವಾಗಿ ಪ್ರಶ್ನಿಸಿದ್ದಾರೆ.




