ಕರ್ನಾಟಕದಲ್ಲಿ ಎಸ್‌ಐಆರ್ ನಡೆಯುವುದನ್ನು ತಡೆಗಟ್ಟಬೇಕು... ಈ ನಾಡಿನಲ್ಲಿ ಇಂತಹ ಅನ್ಯಾಯ ನಡೆಯಲು ನೀವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಬಹಿರಂಗ ಪತ್ರ ಸಲ್ಲಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸುವಾಗ, ‘ಸಮಾನ ಮತದಾನದ ಹಕ್ಕು ನಾವು ಪಡೆದುಕೊಂಡಿರುವ ರಾಜಕೀಯ ಸ್ವಾತಂತ್ರ್ಯದ ಅತಿ ಮೂಲಭೂತ ಗುರುತು’ ಎಂದು ಹೇಳಿದ್ದರು. ಆ ಸ್ವಾತಂತ್ರ್ಯ ಬೇರೆಯಲ್ಲ, ಸಮಾನ ಮತದಾನದ ಹಕ್ಕು ಬೇರೆಯಲ್ಲ. ಆ ಹಕ್ಕು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಡಿಗಲ್ಲಾಗಿದೆ. ಆ ಪ್ರಕಾರವಾಗಿ ‘ಪ್ರತಿಯೊಬ್ಬರಿಗೂ ಒಂದು ಮತ. ಪ್ರತಿಯೊಬ್ಬರ ಮತದ ಮೌಲ್ಯವೂ ಒಂದೇ’ ಎನ್ನುವ ತತ್ವವನ್ನು ಎತ್ತಿ ಹಿಡಿಯಲೇಬೇಕು. ಕರ್ನಾಟಕದಲ್ಲಿ ಎಸ್‌ಐಆರ್ ನಡೆಯುವುದನ್ನು ತಡೆಗಟ್ಟಬೇಕು… ಈ ನಾಡಿನಲ್ಲಿ ಇಂತಹ ಅನ್ಯಾಯ ನಡೆಯಲು ನೀವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ, ಕರ್ನಾಟಕದ ಲೇಖಕ-ಕಲಾವಿದರ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಬಹಿರಂಗ ಪತ್ರ ಸಲ್ಲಿಸಿದರು.
“ಈ ಕೆಳಗೆ ಸಹಿ ಮಾಡಿರುವ ನಾವೆಲ್ಲ ಬಸವಣ್ಣ ಮೊದಲಾದ ಶರಣರು, ಶಿಶುನಾಳ ಶರೀಫ ಮುಂತಾದ ಸೂಫಿಗಳು, ಮಂಟೇಸ್ವಾಮಿ, ಕೈವಾರ ತಾತಯ್ಯ ಮುಂತಾದ ಸಂತರಿಂದ ಮೊದಲುಗೊಂಡು ಕುವೆಂಪು, ಬೇಂದ್ರೆ, ಮಾಸ್ತಿ, ಪುತಿನ, ಶಿವರಾಮ ಕಾರಂತ, ಬಿ.ವಿ. ಕಾರಂತ, ಕಮಲಾದೇವಿ ಚಟ್ಟೋಪಾಧ್ಯಾಯ, ಶಾಂತವೇರಿ ಗೋಪಾಲಗೌಡ, ಗೌರೀಶ ಕಾಯ್ಕಿಣಿ, ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ.ವಿ. ಸುಬ್ಬಣ್ಣ, ಗಿರೀಶ ಕಾರ್ನಾಡ, ಬೆಸಗರಹಳ್ಳಿ ರಾಮಣ್ಣ, ಬಿ. ಕೃಷ್ಣಪ್ಪ, ಸಿದ್ಧಲಿಂಗಯ್ಯ, ಸಾರಾ ಅಬೂಬಕ್ಕರ್, ಡಿ.ಆರ್. ನಾಗರಾಜ್, ಜಿ. ರಾಜಶೇಖರ್, ಡಿ.ಎಸ್. ನಾಗಭೂಷಣ, ವರನಟ ರಾಜ್‍ಕುಮಾರ್ ಮುಂತಾದವರಿಂದ ಸಭ್ಯತೆ, ನ್ಯಾಯಪರತೆ ಮತ್ತು ಕಲೆಗಾರಿಕೆಯನ್ನು ಕಲಿತು ಕೆಲಸ ಮಾಡುತ್ತ ಬಂದವರು. ಅವರೆಲ್ಲ ವಹಿಸಿದ ಜವಾಬ್ದಾರಿಕೆ ಮತ್ತು ಕಲಿಸಿದ ಸಂಸ್ಕಾರ, ಇವುಗಳ ವಾರಸುದಾರರಾಗಿ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ. ಜತೆಗೆ, ಇದರ ಪ್ರತಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅವರಿಗೆ ತಲುಪಿಸುತ್ತೇವೆ” ಎಂದರು.
“ಪ್ರಜಾಪ್ರಭುತ್ವದ ತಿರುಳಾದ ‘ಪ್ರತಿಯೊಬ್ಬರಿಗೂ ಒಂದು ಮತ. ಪ್ರತಿಯೊಬ್ಬರ ಮತದ ಮೌಲ್ಯವೂ ಒಂದೇ’ ಎನ್ನುವ ತತ್ವವನ್ನು ಸ್ವತಂತ್ರ ಭಾರತದ ಚುನಾವಣಾ ಆಯೋಗಗಳೆಲ್ಲವೂ ಈವರೆಗೆ ಪಾಲಿಸಿಕೊಂಡು ಬಂದಿದ್ದವು. ಆದರೆ ಈಗ ಭಾರತ ಚುನಾವಣಾ ಆಯೋಗದ ಮೂಲಕ ಜಾರಿಗೆ ತರಲಾಗುತ್ತಿರುವ SIR ಪ್ರಕ್ರಿಯೆಯು ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿ, ಆ ಜಾತಿ, ಈ ಜಾತಿಯವರೆನ್ನದೆ ಬಡವರೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಈವರೆಗೂ ಅಗತ್ಯವಿಲ್ಲದಿದ್ದ ಹೊಸ ದಾಖಲೆಗಳನ್ನು ತೋರಿಸಬೇಕು ಎಂಬ ಷರತ್ತನ್ನು ಮುಂದಿಟ್ಟು, ಪ್ರಜೆಗಳ ಮತದಾನದ ಮೂಲಭೂತ ಹಕ್ಕನ್ನು ಅವರ ಜೀವಿತಕಾಲದಲ್ಲಿಯೇ ಇಲ್ಲವಾಗಿಸಲು ತೊಡಗಿದೆ. ಇದು ಪ್ರಜಾತಂತ್ರದ ಕಗ್ಗೊಲೆಯಾಗಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಈ ಹಿಂದೆ ದೇಶದ ಒಕ್ಕೂಟ ಸರ್ಕಾರವು CAA ಮತ್ತು NRC ಕಾಯ್ದೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ ಸೋತಿತ್ತು. ಇದೀಗ SIR ಎಂಬ ಹೆಸರಲ್ಲಿ ಹೆಚ್ಚುಕಡಿಮೆ ಹಿಂಬಾಗಿಲಿನ ಮೂಲಕ ಅವುಗಳನ್ನೇ ಜಾರಿಗೆ ತಂದು ಬಡವರು, ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳ ಪೌರತ್ವವನ್ನು ಅಳಿಸಿಹಾಕುವ ಹುನ್ನಾರದಲ್ಲಿದೆ” ಎಂದು ದೂರಿದರು.
“SIR ಜಾರಿಗೆ ಬಂದಾದಮೇಲೆ ಈಗಾಗಲೇ ಚುನಾವಣೆಗಳು ನಡೆದಿರುವ ಹದಿಮೂರು ರಾಜ್ಯಗಳತ್ತ ನೋಡಿದರೆ, ಲಕ್ಷದ್ವೀಪದಲ್ಲಿ 181 ಜನರಿಂದ ತೊಡಗಿ ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಜನರವರೆಗೆ, ಉತ್ತರ ಪ್ರದೇಶದಲ್ಲಿ 2.04 ಕೋಟಿ ಜನರವರೆಗೆ ಆ ಎಲ್ಲ ರಾಜ್ಯಗಳಲ್ಲಿನ ಆ ಒಟ್ಟು ವಹಿವಾಟು ಸೇರಿ 5.18 ಕೋಟಿ ಜನರ ಮತದಾನದ ಹಕ್ಕನ್ನು ಅಮಾನ್ಯ ಮಾಡಲಾಗಿದೆ. ಅದರಿಂದಾಗಿ, ನುಸುಳುಕೋರರನ್ನು ಪತ್ತೆಹಚ್ಚುವುದರ ಬದಲಿಗೆ ದೊಡ್ಡ ಸಂಖ್ಯೆಯ ಜನರಿಂದ ಅವರ ಪೌರತ್ವದ ಹಕ್ಕನ್ನು ಕಸಿದುಕೊಂಡು, ಅವರನ್ನು ಎರಡನೆಯ ದರ್ಜೆಯ ಜನವರ್ಗವನ್ನಾಗಿಸುವ ಹುನ್ನಾರ ನಡೆಯುತ್ತಿದೆಯೇ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ನಾವೆಲ್ಲ ಇರುವ ಈ ನಾಡಿನಲ್ಲಿ, ಈ ಹಿಂದೆ ಇಲ್ಲಿ ಹೆಸರಿಸಿದ ದೊಡ್ಡವರೆಲ್ಲ ಇದ್ದ ಈ ನಾಡಿನಲ್ಲಿ ಇಂತಹ ಅನ್ಯಾಯ ನಡೆಯಲು ನೀವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು” ಎಂದು ಆಗ್ರಹಿಸಿದರು.
ಚುನಾವಣಾ ಆಯೋಗದ ಮೇಲಿನ ನಮ್ಮ ಒತ್ತಾಯಗಳು:
- ಪಶ್ಚಿಮ ಬಂಗಾಳದಲ್ಲಿ ಬಳಸಿದ ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರೆಪೆನ್ಸಿ) ಸಾಫ್ಟವೇರ್ ಅನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಳಸಬಾರದು.
- ಮತದಾರರ ಹೆಸರುಗಳ ಕರಡು ಪಟ್ಟಿ ತಯಾರಾದ ನಂತರ ಗ್ರಾಮಸಭೆಗಳನ್ನು ಕರೆದು ಅಲ್ಲಲ್ಲಿನ ಮತದಾರರ ಇತ್ಯೋಪರಿ ಕುರಿತು ಸಾರ್ವಜನಿಕ ಪರಿಶೀಲನೆ ನಡೆಸಿ ಮತಪಟ್ಟಿಯನ್ನು ಅಂತಿಮಗೊಳಿಸಬೇಕು.
- ಮತದಾರರ ಪಟ್ಟಿಯನ್ನು ಮಷೀನ್ ರೀಡಬಲ್ ಫಾರ್ಮ್ಯಾಟಿನಲ್ಲಿ ತಯಾರಿಸಿ, ಪಾರದರ್ಶಕತೆಯನ್ನು ಪಾಲಿಸಬೇಕು.
- ಮನವಿ/ಆಕ್ಷೇಪಣೆ ಸಲ್ಲಿಸಲು ಮತ್ತು ಅಗತ್ಯ ದಾಖಲೆ ಒದಗಿಸಲು ಕನಿಷ್ಠ 6 ತಿಂಗಳ ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರಕ್ಕೆ ನಮ್ಮ ಒತ್ತಾಯ:
“ಸ್ಥಳೀಯ ಚುನಾವಣೆಗಳು ಬರುತ್ತಿರುವುದರಿಂದ ಮತ್ತು ಜನರಲ್ಲಿ ಆತಂಕ ಇರುವುದರಿಂದ, ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಗಳೆರಡೂ ಮಾಸ್ಟರ್ ರೋಲಿನ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಮತ್ತು ನ್ಯಾಯಯುತವಾಗಿ ತಯಾರಿಸಲು ವಿಶೇಷ ಗಮನ ನೀಡಬೇಕು. ಚುನಾವಣಾ ಆಯೋಗದ ಕೈಪಿಡಿಯಲ್ಲಿ ವಿಧಿಸಿರುವಂತೆ, ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಗ್ರಾಮಸಭೆಗಳನ್ನು ಹಾಗೂ ವಾರ್ಡ್ ಸಭೆಗಳನ್ನು ಕರೆದು ತಿದ್ದುಪಡಿಗಳನ್ನು ಸ್ವೀಕರಿಸಿ, ಅವುಗಳ ಪರಿಶೀಲನೆಯನ್ನು ಸಾರ್ವಜನಿಕ-ಪಾರದರ್ಶಕವಾಗಿ ನಡೆಸಿ, ಅಗತ್ಯವಾದ ಮತ್ತು ನ್ಯಾಯಯುತವಾದ ಪರಿಷ್ಕರಣೆ ಮಾಡಿದ ಮೇಲೆಯೇ ಪಟ್ಟಿಯನ್ನು ಅಂತಿಮಗೊಳಿಸಬೇಕು” ಎಂದು ಹೇಳಿದರು.
“ಚುನಾವಣಾ ಆಯೋಗವು ರೂಪಿಸಿರುವ ಸಾಂಪ್ರದಾಯಿಕ ಸಾಮಾಜಿಕ ಪರಿಶೀಲನೆಯ ಮಾನದಂಡಗಳನ್ನು ಅನ್ವಯಿಸಿಯೇ ಗ್ರಾಮಸಭೆ, ವಾರ್ಡ್ ಸಭೆಗಳನ್ನು ನಡೆಸಬೇಕು. ಅದರಿಂದ, ರಾಜ್ಯ ಚುನಾವಣಾ ಆಯೋಗದ ಪಟ್ಟಿಗೆ ಹೆಚ್ಚಿನ ಖಚಿತತೆ ಹಾಗೂ ಮಾನ್ಯತೆ ಬರುವಂತೆ ನೋಡಿಕೊಳ್ಳಬೇಕು. ಸಾರಾಂಶದಲ್ಲಿ, ರಾಜ್ಯದ ಯಾವುದೇ ಅರ್ಹ ಮತದಾರರು ಕೂಡ ಮತಪಟ್ಟಿಯ ಹೊರಗೆ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಹೊರಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ” ಎಂದರು.
“ಈ ಸಂಬಂಧ, 2026ರ ಜೂನ್ 20 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ, ರಾಜ್ಯದ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವು ಏರ್ಪಡಿಸಿ ನಡೆಸಿದ SIR ವಿರೋಧಿ ಕರ್ನಾಟಕ ಎಂಬ ಪ್ರತಿರೋಧದ ಸಮಾವೇಶಕ್ಕೂ, ಇನ್ನು ಮುಂದೆ ಈ ವಿಷಯದಲ್ಲಿ ನಡೆಯಲಿರುವ ಎಲ್ಲ ಶಾಂತಿಯುತ, ನ್ಯಾಯಬದ್ಧ, ಅಹಿಂಸಾತ್ಮಕ ಪ್ರತಿಭಟನೆಗಳಿಗೂ ನಾವು ನಮ್ಮ ಬೆಂಬಲವನ್ನು ಸೂಚಿಸುತ್ತಿದ್ದೇವೆ” ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿದ್ದೀರಾ? ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ: ಸಂಘ ಪರಿವಾರದ ಅನೀಶ್ ಪೂಜಾರಿ ವಿರುದ್ಧ ಕ್ರಮಕ್ಕೆ ಆಗ್ರಹ
ಪ್ರತಿ: ವಿ ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ರಾಜ್ಯ
ಸಹಿಮಾಡಿದವರು:
- ರಘುನಂದನ, ಬೆಂಗಳೂರು
- ನಾಗೇಶ ಹೆಗಡೆ, ಬಕ್ಕೆಮನೆ
- ಚಂದ್ರಶೇಖರ ತಾಳ್ಯ, ಚಿತ್ರದುರ್ಗ
- ಓ.ಎಲ್.ನಾಗಭೂಷಣ ಸ್ವಾಮಿ, ಮೈಸೂರು
- ರಾಜೇಂದ್ರ ಚೆನ್ನಿ, ಶಿವಮೊಗ್ಗ
- ವಿವೇಕ ಶಾನಭಾಗ, ಬೆಂಗಳೂರು
- ಜ.ನಾ. ತೇಜಶ್ರೀ, ಹಾಸನ
- ಕೆ. ಫಣಿರಾಜ್, ಉಡುಪಿ
- ಅರುಣ್ ಜೋಳದಕೂಡ್ಲಿಗಿ, ಕಲಬುರಗಿ
- ಪ್ರಕಾಶ ಗರುಡ, ಧಾರವಾಡ
- ನಾ. ದಿವಾಕರ, ಮೈಸೂರು
- ಎನ್.ಕೆ. ಮೋಹನ್‌ರಾಮ್, ಬೆಂಗಳೂರು
- ಜಿ.ಪಿ. ಬಸವರಾಜು, ಮೈಸೂರು.
- ಎನ್ ಮನು ಚಕ್ರವರ್ತಿ, ಬೆಂಗಳೂರು
- ಡಾ.ಡಿ.ಎಸ್. ಚೌಗಲೆ, ಬೆಳಗಾವಿ
- ವಸಂತ ಬನ್ನಾಡಿ, ಕುಂದಾಪುರ
- ಪಿಚ್ಚಳ್ಳಿ ಶ್ರೀನಿವಾಸ್, ಮಾಲೂರು
- ಎಂ. ಶ್ರೀಧರಮೂರ್ತಿ, ಬೆಂಗಳೂರು
- ಎಂ.ಎಸ್. ಪ್ರಕಾಶ್ ಬಾಬು, ಬೆಂಗಳೂರು
- ರಕ್ಷಿತ್ ಎಂ.ಆರ್., ಬೆಂಗಳೂರು
- ಅಮರ್ ಬಿ. ಹೊಳೆಗದ್ದೆ, ತುಮಕೂರು
- ಧನುಷ್ ಹೆಚ್. ಶೇಖರ್, ತುಮಕೂರು.
- ಮನು ಕೆ., ಮೈಸೂರು
- ಸರ್ಜಾಶಂಕರ ಹರಳಿಮಠ, ಶಿವಮೊಗ್ಗ
- ಲೋಕೇಶ್ ಮೊಸಳೆ
- ನಟರಾಜ ಎಂ.ವಿ., ಚಿತ್ರದುರ್ಗ
- ಸುಶೀಲಾ ಬಸು, ಮೈಸೂರು
- ಮೆರೀನಾ ಪ್ರಸಾದ್, ಮೈಸೂರು
- ಮಾರುತೇಶ ಕಸಾಪುರ
- ವಿಜಯ ಪ್ರಸಾದ್ ಜಿ., ಬೆಂಗಳೂರು
- ಸಂಜಯ ವಿ, ಇಂಗಳುಪ್ಪೆ ಗ್ರಾಮ, ಮಂಡ್ಯ ಜಿಲ್ಲೆ
- ಸುಪ್ರೀತಾ ಸತೀಶ್
- ನೇಮಿರಾಜ, ಮಂಗಳೂರು
- ಎಂ.ಎಸ್. ವೀರೇಶ್, ಶಿವಮೊಗ್ಗ
- ಧರ್ಮರಾಜ ಗೋನಾಳ
- ರವಿಚಂದ್ರ ಪ್ರಕಾಶ್
- ಶ್ರೀನಿವಾಸಮೂರ್ತಿ ಟಿ, ಮದಕರಿಪುರು
- ಅಕ್ಷಯ ಗೌಡ
- ಗೌರೀಶ್
- ಕುಣಿಗಲ್ ರಂಗ, ಕುಣಿಗಲ್
- ನಟರಾಜ್ ಹೊನ್ನವಳ್ಳಿ, ತುಮಕೂರು
- ಮಹಾದೇವ ಹಡಪದ, ಧಾರವಾಡ
- ಪ್ರಭಾಕರ ಕಾಪಿಕಾಡ್, ಮಂಗಳೂರು
- ಗೋಪಾಲಕೃಷ್ಣ ದೇಶಪಾಂಡೆ, ಬೆಂಗಳೂರು
- ಶ್ಯಾಮಸುಂದರ್ ರಾವ್ ಪಿ, ಮಂಗಳೂರು
- ಎಚ್.ಎಸ್. ಬಸವಪ್ರಭು, ಕಲಬುರಗಿ
- ಸಾಲಿಯಾನ್ ಉಮೇಶ್ ನಾರಾಯಣ, ಮೈಸೂರು
- ಪ್ರವೀಣ್ ರೆಡ್ಡಿ, ಗುಂಜಹಳ್ಳಿ
- ಶ್ವೇತಾರಾಣಿ ಎಚ್.ಕೆ, ಹಾಸನ-ಚಿಕ್ಕಮಗಳೂರು
- ನವೀನ ಸಂ.ಕೃ.




