ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ದುರ್ಬಳಕೆ ಮಾಡಿಕೊಂಡು ಆಕೆಯ ಆತ್ಮಹತ್ಯೆಗೆ ಕಾರಣವಾಗಿರುವ ಸಂಘ ಪರಿವಾರದ ಅನೀಶ್ ಪೂಜಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಗಂಜಿಮಠ ಮೂಲದ ಸಂಘ ಪರಿವಾರದ ಕಾರ್ಯಕರ್ತ ಅನೀಶ್ ಪೂಜಾರಿ ಎಂಬಾತ ಸುರತ್ಕಲ್ ಕಾಟಿಪಳ್ಳದ ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯನ್ನಾಗಿ ಮಾಡಿ ನಂತರ ಮದುವೆಯಾಗದೆ ವಂಚಿಸಿದ್ದಾನೆ. ಅಲ್ಲದೆ ಆಕೆಯನ್ನು ಅಶ್ಲೀಲವಾಗಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರಚೋದಿಸಿದ್ದರಿಂದ ಆತನ ಕಿರುಕುಳಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆಬಂದಿದೆ.
ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಅಥವಾ ಅವರ ಬೆಂಬಲಿಗರು ಅಪ್ರಾಪ್ತೆಯರು ಸೇರಿದಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಪ್ರೀತಿಸುವ ನಾಟಕವಾಡಿ, ನಂಬಿಸಿ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡು ಮೋಸ ಮಾಡುತ್ತಿರುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಯುವತಿಯನ್ನು ನಂಬಿಸಿ ವಂಚಿಸಿರುವ ಪ್ರಕರಣ ಮಾಸುವ ಮುನ್ನವೇ ಕರಾವಳಿಯಲ್ಲಿ ಇಂತಹ ಮತ್ತೊಂದು ಪ್ರಕರಣ ಬೆಳಕಿಗೆಬಂದಿದೆ.
ಇದನ್ನೂ ಓದಿದ್ದೀರಾ? ಶಿರಸಿ | ವಿವಾಹೇತರ ಸಂಬಂಧ; ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ
“ಬಹಳ ಶಿಸ್ತು, ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುವ ಸಂಘ ಪರಿವಾರ ಹಾಗೂ ಆರ್‌ಎಸ್‌ಎಸ್‌ನ ನಾಯಕರು ಈ ಪ್ರಕರಣಕ್ಕೆ ಉತ್ತರ ನೀಡಬೇಕು. ʼಬೇಟಿ ಬಚಾವೋ, ಬೇಟಿ ಪಡಾವೋʼ ಎಂದು ಘೋಷಣೆ ಕೂಗುವ ಮೋದಿ ನೇತೃತ್ವದ ಆಡಳಿತದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕೊನೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ನಿಮ್ಮ ಕೃತ್ಯಗಳಿಗೆ ಇನ್ನೆಷ್ಟು ಮಹಿಳೆಯರು ಮತ್ತು ಯುವತಿಯರು ಬಲಿಯಾಗಬೇಕು? ಅತ್ಯಾಚಾರ, ಮೋಸ, ವಂಚನೆ ಹಾಗೂ ಆತ್ಮಹತ್ಯೆಗೆ ಕಾರಣವಾಗುತ್ತಿರುವ ಇಂತಹ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದೇ ನಿಮ್ಮ ಹಿಂದುತ್ವದ ಸಂಸ್ಕೃತಿಯೇ ? ಎಂದು ಪ್ರಶ್ನಿಸಬೇಕಾಗಿದೆ. ಆದ್ದರಿಂದ ಇಂತಹ ಕಪಟ ದೇಶಭಕ್ತರು ಹಾಗೂ ಮಹಿಳಾ ವಿರೋಧಿ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.





