ಫ್ಲೈಓವರ್ ನಿರ್ಮಾಣವಾಗಲಿದೆ ಎಂದು ಮೊದಲೇ ತಿಳಿದಿದ್ದರೂ, ಆ ರಸ್ತೆಗೆ (ಜೆಸಿ ರಸ್ತೆ ಮತ್ತು ಎನ್.ಆರ್. ರಸ್ತೆ) ವೈಟ್‌ಟಾಪಿಂಗ್ ಮಾಡಿದ್ದೇಕೆ? ಇದು ಸಾರ್ವಜನಿಕರ ಹಣದ ಪೋಲು ಅಲ್ಲವೇ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬಿ-ಸ್ಮೈಲ್ (B-SMILE) ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ (ಬಿ-ಸ್ಮೈಲ್) ಅಧಿಕಾರಿಗಳೊಂದಿಗೆ ನಡೆದ ತಮ್ಮ ಚೊಚ್ಚಲ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಿಲೋಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಿಸಲು ಸರ್ಕಾರ 10 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡುತ್ತದೆ. ಇಂತಹ ರಸ್ತೆಯನ್ನು ವೈಟ್‌ಟಾಪಿಂಗ್ ಮಾಡಿ, ನಂತರ ಫ್ಲೈಓವರ್ ನಿರ್ಮಾಣಕ್ಕಾಗಿ ಅದನ್ನು ಒಡೆಯುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಹಣದ ದುರ್ಬಳಕೆಯಲ್ಲವೇ ಎಂದು ಬಿ-ಸ್ಮೈಲ್ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಮತ್ತು ಅವರ ತಂಡದ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರು. ಇದಕ್ಕೆ ಸಮರ್ಥನೆ ನೀಡಲು ಅಧಿಕಾರಿಗಳು ಪರದಾಡಿದ ಸನ್ನಿವೇಶ ಸಭೆಯಲ್ಲಿ ಕಂಡುಬಂತು.
ನಗರದ ದೀರ್ಘಕಾಲೀನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ. ನಗರದಲ್ಲಿ 150 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಗುರಿ ಹೊಂದಲಾಗಿದ್ದು, ಈ ವರ್ಷವೇ 75 ಕಿ.ಮೀ ಕಾಮಗಾರಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಸಂಚಾರ ದಟ್ಟಣೆ ನಿವಾರಣೆಗೆ ಸೂಕ್ತ ನೀಲನಕ್ಷೆ ಸಿದ್ಧಪಡಿಸಿದ್ದಾರೆ, ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಅತಿಯಾದ ಸಂಚಾರವಿರುವ ರಸ್ತೆಗಳು ಪದೇ ಪದೇ ಹದಗೆಡುವುದನ್ನು ತಪ್ಪಿಸಲು 2016 ರಿಂದ ವೈಟ್‌ಟಾಪಿಂಗ್ ಕಾರ್ಯ ಕೈಗೊಳ್ಳಲಾಗುತ್ತಿದೆ. ಆಸ್‌ಫಾಲ್ಟಿಂಗ್‌ಗೆ ಹೋಲಿಸಿದರೆ ವೈಟ್‌ಟಾಪಿಂಗ್‌ಗೆ ಆರಂಭಿಕ ವೆಚ್ಚ ಹೆಚ್ಚಿದ್ದರೂ, ಇದು 20-30 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಈಗಾಗಲೇ 196 ಕಿ.ಮೀ ವೈಟ್‌ಟಾಪಿಂಗ್ ಪೂರ್ಣಗೊಂಡಿದ್ದು, ಹೊಸದಾಗಿ 126 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ಬಾಕಿ ಇರುವ ಕಾಮಗಾರಿಗಳನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರ ಮೇಲೆ ಒತ್ತಡ ಹೇರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸುರಂಗ ಮಾರ್ಗ (Tunnel Road) ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದ ಅವರು, 16.7 ಕಿ.ಮೀ ಉದ್ದದ ಸುರಂಗ ಮಾರ್ಗದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಚಿವ ಸಂಪುಟದ ಅನುಮೋದನೆಗೆ ಕಳುಹಿಸಲಾಗಿದೆ. ಜೊತೆಗೆ ಓಲ್ಡ್ ಮದ್ರಾಸ್ ರಸ್ತೆಯಿಂದ ಮೈಸೂರು ರಸ್ತೆಯವರೆಗೆ 22 ಕಿ.ಮೀ ಉದ್ದದ ಈಸ್ಟ್-ವೆಸ್ಟ್ ಸುರಂಗ ಮಾರ್ಗದ ಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.




