ಹನೂರು ತಾಲ್ಲೂಕಿನ ಮರಿಮಂಗಳ ಅರಣ್ಯ ಬೀಟ್ ವ್ಯಾಪ್ತಿಯ ತೋಮಿಯಾರ್ ಪಾಳ್ಯದಲ್ಲಿ ಮೂವರು ರೈತರನ್ನು ಎನ್‌ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರಾಂತ ರೈತ ಸಂಘ (KPRS) ಉತ್ತರ ಕನ್ನಡ ಜಿಲ್ಲಾ ಸಮಿತಿ, ಘಟನೆಗೆ ಕಾರಣರಾದ ಎಲ್ಲರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಈ ಕಗ್ಗೊಲೆಗಳನ್ನು KPRS ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಹಾಗೂ ಇತರೆ ಜನರು ಅರಣ್ಯ ಇಲಾಖೆಯಿಂದ ಅನುಭವಿಸುತ್ತಿರುವ ದಬ್ಬಾಳಿಕೆಗೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ನಡೆದ ಸ್ಥಳದ ‘ಶುದ್ಧೀಕರಣ’ ಖಂಡನೀಯ: ಪ್ರಸನ್ನ ಶೆಟ್ಟಿ
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಅಧೀನದ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ತನಿಖೆಯನ್ನು ಹಿಂಪಡೆದು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಗ್ಗೊಲೆಗೆ ಒಳಗಾದ ರೈತರ ಕುಟುಂಬಗಳಿಗೆ ಕನಿಷ್ಠ ₹5 ಕೋಟಿ ಪರಿಹಾರ ಘೋಷಿಸಬೇಕು. ಅಲ್ಲದೆ, ಎನ್‌ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಅನ್ವಯ ಕೊಲೆ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು KPRS ಜಿಲ್ಲಾ ಸಮಿತಿ ಆಗ್ರಹಿಸಿದೆ.
ಇದೇ ವೇಳೆ, ಅಖಿಲ ಭಾರತ ಕಿಸಾನ್ ಸಭಾ (AIKS) ರಾಷ್ಟ್ರೀಯ ಸಹ ಕಾರ್ಯದರ್ಶಿ ಕಾಮ್ರೇಡ್ ಡಿ. ರವೀಂದ್ರನ್ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಯಶವಂತ ಟಿ. ಅವರ ನೇತೃತ್ವದಲ್ಲಿ ರೈತ ಸಂಘದ ಉನ್ನತ ಮಟ್ಟದ ನಿಯೋಗವು ಮೃತ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದೆ. ಅಲ್ಲದೆ, ಅಂತಿಮ ಸಂಸ್ಕಾರದಲ್ಲೂ ನಿಯೋಗ ಭಾಗವಹಿಸಲಿದೆ ಎಂದು ಶಾಂತಾರಾಮ ನಾಯಕ ತಿಳಿಸಿದ್ದಾರೆ.
ಘಟನೆ ದೇಶದಾದ್ಯಂತ ತೀವ್ರ ಆತಂಕ ಮೂಡಿಸುವಂತಹ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಪ್ರಕರಣದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಮೃತ ರೈತರ ಕುಟುಂಬಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರಿಸಲು ರೈತ ಸಂಘದ ಉನ್ನತ ಸಮಿತಿ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.




