ತಾಲೂಕಿನ ಜೀವನಾಡಿಯಾಗಿರುವ ಚಿತ್ರಾವತಿ ನದಿಯನ್ನು ಸಂರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಾಗೇಪಲ್ಲಿಯ ಹಿರಿಯ ವಕೀಲರು ಹಾಗೂ ಸಮಾಜ ಚಿಂತಕರಾದ ಎ. ಜಿ. ಸುಧಾಕರ್ ಅವರು ತಿಳಿಸಿದರು.
ಪಟ್ಟಣದಲ್ಲಿ ಚಿತ್ರಾವತಿ ಹಕ್ಕು ಸಮಿತಿ ಹಾಗೂ ದಿ ಎಕ್ಸ್ಪರ್ಟ್ ಪಿ ಯು ಕಾಲೇಜು ಜಂಟಿಯಾಗಿ ಆಯೋಜಿಸಿದ್ದ “ನಮ್ಮ ಚಿತ್ರಾವತಿ ನಮ್ಮ ಹಕ್ಕು – ಚಿತ್ರಾವತಿ ಉಳಿಸಿ ಜೀವ ರಕ್ಷಿಸಿ ಮಾನವ ಸರಪಳಿ ಮಾಡಿ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ನದಿಯ ಒಡಲು ಒಣಗುತ್ತಿರುವುದು ಮತ್ತು ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವುದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಸಂಘಟಕರು, ನದಿಯ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
“ಚಿತ್ರಾವತಿ ನದಿಯು ಕೇವಲ ನೀರಿನ ಮೂಲವಲ್ಲ, ಅದು ಈ ಭಾಗದ ಜನರ ಜೀವಜಲವಾಗಿದೆ. ನದಿಯ ಹಕ್ಕನ್ನು ರಕ್ಷಿಸುವುದು ಎಂದರೆ ನಮ್ಮ ಜೀವವನ್ನು ನಾವೇ ರಕ್ಷಿಸಿಕೊಂಡಂತೆ. ಪ್ರಕೃತಿಯನ್ನು ನಾವು ಗೌರವಿಸಿದರೆ ಮಾತ್ರ ಪ್ರಕೃತಿ ನಮ್ಮನ್ನು ಸಲಹುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನೂ ನದಿ ಪಾತ್ರದ ಸ್ವಚ್ಛತೆ ಹಾಗೂ ಜಲಮೂಲಗಳ ರಕ್ಷಣೆಗೆ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ..? ಕೋಲಾರ | ಪ್ರೀತಿವಿಶ್ವಾಸದಿಂದ ಮನಸ್ಸು ಗೆಲ್ಲುವ ದಾರಿಯನ್ನು ಹುಡುಕಬೇಕು : ವಕ್ಕಲೇರಿ ರಾಜಪ್ಪ – ಈ ದಿನ.ಕಾಮ್
ದಿ ಎಕ್ಸ್ಪರ್ಟ್ ಪಿ ಯು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಚಿತ್ರಾವತಿ ಹಕ್ಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದಈ ಅಭಿಯಾನದಲ್ಲಿ, ನದಿಯನ್ನು ಮಾಲಿನ್ಯಮುಕ್ತಗೊಳಿಸಲು ಮತ್ತು ಜಲ ಮರುಪೂರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಕಲ್ಪ ಮಾಡಲಾಯಿತು. ವಿದ್ಯಾರ್ಥಿಗಳು ಚಿತ್ರಾವತಿ ನದಿಯ ಉಳಿವಿಗಾಗಿ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿದರು.




