ರೈತರ ಬಿತ್ತನೆಗೆ ಉತ್ತಮ ಬೀಜ, ಸಮರ್ಪಕ ರಸಗೊಬ್ಬರ, ವಿದ್ಯುತ್, ನೀರು ಒದಗಿಸಬೇಕು. ರೈತರಿಗೆ ಲಿಂಕ್ ರಹಿತ ರಸಗೊಬ್ಬರ ಪೂರೈಸಬೇಕು. ರೈತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ತಹಶೀಲ್ದಾರ ಕಚೇರಿ ಮುಂದೆ ಭಾರತೀಯ ಕಿಸಾನ್ ಸಂಘ ಹಾಗೂ ತಾಲ್ಲೂಕು ಘಟಕದ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ಪ್ರತಿ ಎಕರೆಗೆ 30 ರಿಂದ 40 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ ಬಿಡದೆ ಟೌನ್ ಪ್ಲಾನಿಗೆ ಪ್ರತಿ ಎಕರೆಗೆ 2.30 ಕೋಟಿಯಿಂದ 4 ಕೋಟಿಯವರೆಗೆ ಪರಿಹಾರ ನೀಡುತ್ತಿದ್ದಾರೆ. ಭೂ ಪರಿಹಾರದಲ್ಲಿ ತಾರತಮ್ಯ ಆಗುತ್ತಿದೆ. ರಾಜ್ಯದ ಎಲ್ಲಾ ರೈತರಿಗೆ ಏಕರೂಪ ಪರಿಹಾರ ಒದಗಿಸಬೇಕು” ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.
“ಕೃಷ್ಣ, ಘಟಪ್ರಭೆ, ಮಲಪ್ರಭಾ ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದು ಸಂಬಂಧಪಟ್ಟ ನೀರಾವರಿ ಇಲಾಖೆಯವರು ಪ್ರತಿ ನದಿಗೆ ಎರಡು ಟಿಎಂಸಿ ನೀರನ್ನು ಹರಿಸುವುದು. ಬರಗಾಲ ಆವರಿಸುವುದರಿಂದ ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ನಾಟದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು ಅವರಿಗೆ ಪರಿಹಾರ ಒದಗಿಸಬೇಕು. ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಹೆಸ್ಕಾಂ ಲಕ್ಷಾಂತರ ಹಣ ಪಡೆಯುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದ್ದು ಹಿಂದಿನ ಸರ್ಕಾರದ ನಿಯಮಾವಳಿಗಳನ್ನೇ ಮುಂದುವರಿಸಿಕೊಂಡು ಹೋಗಬೇಕು” ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಆಗ್ರಹಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಪ್ಪ ಗಾಣಗೇರ, ಜಿಲ್ಲಾ ಕಾರ್ಯದರ್ಶಿ ಕುಮಾರ ಯಡಹಳ್ಳಿ, ತಾಲ್ಲೂಕು ಕಾರ್ಯದರ್ಶಿ ಗೊರಪ್ಪ ಅನಗವಾಡಿ, ರಮೇಶ ಸಾರವಾಡ, ಗುರುನಾಥ ಹಿರೇಮಠ, ಗುರು ಕಾಖಂಡಕಿ, ಹನುಮಂತ ಬೇಳಂಡಿ, ಎಚ್ ಟಿ ಮೊಕಾಶಿ ಹಾಗೂ ವೆಂಕಟೇಶ ಸಂಸಿ ಇದ್ದರು.




