ಬ್ರಿಟನ್ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿದೆ. ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ 5ನೇ ಬಾರಿಗೆ ಬ್ರಿಟನ್ ಹೊಸ ಪ್ರಧಾನಿಯನ್ನು ಕಾಣಲು ಸಜ್ಜಾಗಿದೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ್ದ ಸ್ಟಾರ್ಮರ್, ಕಳೆದ ಕೆಲವು ತಿಂಗಳುಗಳಿಂದ ಪಕ್ಷದೊಳಗಿನ ಅತೃಪ್ತಿ ಮತ್ತು ರಾಜಕೀಯ ಒತ್ತಡಗಳಿಗೆ ಮಣಿದು ಅಧಿಕಾರದಿಂದ ಕೆಳಗಿಳಿದಿದ್ದಾರೆ.
2019ರ ನಂತರದ ರಾಜಕೀಯ ಅಸ್ಥಿರತೆಯನ್ನು ಹೋಗಲಾಡಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ ಸ್ಟಾರ್ಮರ್, ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಪಿಂಚಣಿದಾರರಿಗೆ ನೀಡುತ್ತಿದ್ದ ಚಳಿಗಾಲದ ಇಂಧನ ಸಬ್ಸಿಡಿ ಕಡಿತ ಮತ್ತು ಕಲ್ಯಾಣ ಯೋಜನೆಗಳಲ್ಲಿನ ದಿಢೀರ್ ಬದಲಾವಣೆಗಳು ಅವರ ಜನಪ್ರಿಯತೆಗೆ ಪೆಟ್ಟು ನೀಡಿದ್ದವು. ಹೆಚ್ಚಾಗಿ, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ನಂಟಿದ್ದ ಆರೋಪವಿದ್ದ ಪೀಟರ್ ಮ್ಯಾಂಡಲ್ಸನ್ ಅವರನ್ನು ಅಮೆರಿಕದ ರಾಯಭಾರಿಯಾಗಿ ನೇಮಿಸಿದ್ದು, ದ್ವಿತೀಯ ಮಹಾಯುದ್ಧದ ನಂತರದ ಅತಿದೊಡ್ಡ ರಾಜಕೀಯ ಹಗರಣಗಳಲ್ಲಿ ಒಂದಾಗಿ ಪರಿಣಮಿಸಿತು. ಜೊತೆಗೆ, ನೈಗೆಲ್ ಫಾರೇಜ್ ಅವರ ನೇತೃತ್ವದ ‘ರಿಫಾರ್ಮ್ ಯುಕೆ’ ಪಕ್ಷವು ಪ್ರಬಲ ಪೈಪೋಟಿ ನೀಡುತ್ತಿರುವುದು ಲೇಬರ್ ಪಕ್ಷದ ಪಾಳಯದಲ್ಲಿ ಆತಂಕ ಮೂಡಿಸಿತ್ತು.
ಸದ್ಯ ಬ್ರಿಟನ್ ಪ್ರಧಾನಿ ಹುದ್ದೆಗೆ ಲೇಬರ್ ಪಕ್ಷದ ಹಿರಿಯ ನಾಯಕ, ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಂಡಿ ಬರ್ನ್ಹ್ಯಾಮ್ ಅತ್ಯಂತ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. 56 ವರ್ಷದ ಬರ್ನ್ಹ್ಯಾಮ್, ಟೋನಿ ಬ್ಲೇರ್ ಮತ್ತು ಗೋರ್ಡನ್ ಬ್ರೌನ್ ಅವರ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವಿ. ಮ್ಯಾಂಚೆಸ್ಟರ್ ನಗರದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿ ‘ಕಿಂಗ್ ಇನ್ ದಿ ನಾರ್ತ್’ ಎಂದು ಜನಪ್ರಿಯರಾಗಿರುವ ಇವರು, ರಿಫಾರ್ಮ್ ಪಕ್ಷದ ಸವಾಲನ್ನು ಎದುರಿಸಲು ಸಮರ್ಥ ನಾಯಕ ಎಂದು ಪಕ್ಷದ ವಲಯದಲ್ಲಿ ಪರಿಗಣಿಸಲ್ಪಟ್ಟಿದ್ದಾರೆ.
ಇದನ್ನೂ ಓದಿ: ಮಮತಾರನ್ನು ಸೈಡ್‌ಲೈನ್ ಮಾಡಿದ ಬಂಡುಕೋರರು: TMC ಅಧ್ಯಕ್ಷ ಸ್ಥಾನದಿಂದ ದೀದಿ ಪದಚ್ಯುತಿ!
ಇತ್ತೀಚೆಗೆ ನಡೆದ ವಿಶೇಷ ಚುನಾವಣೆಯಲ್ಲಿ ಮೇಕರ್ಫೀಲ್ಡ್ ಕ್ಷೇತ್ರದಿಂದ ಗೆದ್ದು ಸಂಸತ್ತಿಗೆ ಮರುಪ್ರವೇಶಿಸಿರುವುದು ಅವರ ಪ್ರಧಾನಿ ಹುದ್ದೆಯ ಕನಸಿಗೆ ಬಲ ತುಂಬಿದೆ. ಸದ್ಯದ ಮಾಹಿತಿ ಪ್ರಕಾರ, ಲೇಬರ್ ಪಕ್ಷದ ಕಾರ್ಯಕಾರಿ ಸಮಿತಿಯು ಹೊಸ ನಾಯಕನ ಆಯ್ಕೆಗೆ ವೇಳಾಪಟ್ಟಿ ಸಿದ್ಧಪಡಿಸುತ್ತಿದೆ. ಜುಲೈ 9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜುಲೈ 16ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ, ಪ್ರಭಾವಿ ನಾಯಕ ವೆಸ್ ಸ್ಟ್ರೀಟಿಂಗ್ ಅವರು ಬರ್ನ್ಹ್ಯಾಮ್ ಅವರಿಗೆ ಬೆಂಬಲ ಸೂಚಿಸಿರುವುದರಿಂದ, ಯಾವುದೇ ಸ್ಪರ್ಧೆಯಿಲ್ಲದೆ ಆಂಡಿ ಬರ್ನ್ಹ್ಯಾಮ್ ಅವರು ಜುಲೈ 17 ಅಥವಾ 18ರ ವೇಳೆಗೆ ಲೇಬರ್ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ. ಬಳಿಕ ಬ್ರಿಟನ್ ರಾಜ ಚಾರ್ಲ್ಸ್ ಅವರು ಸರ್ಕಾರ ರಚಿಸಲು ಅವರನ್ನು ಆಹ್ವಾನಿಸಲಿದ್ದು, ಸೆಪ್ಟೆಂಬರ್ 1ರಂದು ಸಂಸತ್ ಅಧಿವೇಶನ ಆರಂಭವಾಗುವ ಹೊತ್ತಿಗೆ ಬ್ರಿಟನ್ ಹೊಸ ಪ್ರಧಾನಿಯನ್ನು ಹೊಂದಲಿದೆ




