ರಬಕವಿ ಬನಹಟ್ಟಿ ಸಮೀಪದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮಹೀಷವಾಡಗಿ ಸೇತುವೆ ಕಾಮಗಾರಿ ನಿರ್ಮಾಣದಲ್ಲಿ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಕೊಡುಗೆ ಶೂನ್ಯ ಎಂದು ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಆರೋಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಸಮೀಪದ ಮಹೀಷವಾಡಗಿ ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, “ಸೇತುವೆ ನಿರ್ಮಾಣ ಕಾರ್ಯದಲ್ಲಿ ಸಿದ್ದು ಸವದಿಯವರು ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಸವದಿಯವರು ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ. ಮಹೀಷವಾಡಗಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಮತ್ತು ಅಭಿವೃದ್ಧಿ ಪರ ಹೋರಾಟಗಳಲ್ಲಿ ಭಾಗಿಯಾಗಿಲ್ಲ” ಎಂದು ಆರೋಪಿಸಿದರು.
“ರಬಕವಿ ಮುಖಂಡ ರಾಮಣ್ಣ ಹುಲಕುಂದ ಮತ್ತು ಇತರ ನಾಗರಿಕರ ನೇತೃತ್ವದಲ್ಲಿ ತ್ವರಿತ ಕಾಮಗಾರಿ ಕುರಿತು ನನಗೆ ಒತ್ತಡ ಹಾಕಿದ ನಂತರ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಆರ್.ಬಿ ತಿಮ್ಮಾಪುರ ನೇತೃತ್ವದಲ್ಲಿ ₹10 ಕೋಟಿ ಹೆಚ್ಚುವರಿ ಅನುದಾನದಿಂದಾಗಿ ಕಾಮಗಾರಿಗೆ ವೇಗ ದೊರೆತಿದೆ. ಎಂಟು ವರ್ಷಗಳಿಂದ ಸಿದ್ದು ಸವದಿಯವರು ಶಾಸಕರಾಗಿದ್ದಾರೆ. 2017ರಿಂದ ಕಾಮಗಾರಿ ಅಪೂರ್ಣವಾಗಿಯೇ ಉಳಿಯಲು ಸವದಿಯವರ ನಿರ್ಲಕ್ಷವೇ ಕಾರಣ” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿಯೇ ಕ್ಷೇತ್ರದ ಅಭಿವೃದ್ಧಿ:
“ಕಾಂಗ್ರೆಸ್ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಆಗಿದೆ. ರಾಮಪುರದ ಬೆಟ್ಟವನ್ನು ಕಡಿದು ರಸ್ತೆ ಸುಗಮಗೊಳಿಸಲಾಯಿತು. ವೆಂಕಟೇಶ್ವರ, ಸಸಾಲಟ್ಟಿ ಮತ್ತು ಢವಳೇಶ್ವರ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡದ್ದು ಕಾಂಗ್ರೆಸ್ ಆಡಳಿತಾವಧಿಯಲ್ಲಿ” ಎಂದು ತಿಳಿಸಿದರು.
ಬಂಡಾಯ ಅಭ್ಯರ್ಥಿಯಿಂದಲೇ ಸೋಲು: “ಕ್ಷೇತ್ರದ ಜನರು ಸೋಲಿಸಿದ್ದಾರೆ ಎಂದು ಶಾಸಕರು ಹೇಳುತ್ತಿದ್ದು, ಕಳೆದ ಚುನಾವಣೆಯಲ್ಲಿ 67 ಸಾವಿರ ಮತಗಳನ್ನು ಪಡೆದುಕೊಂಡಿದ್ದೇನೆ. ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿಯಿಂದಲೇ ನನಗೆ ಸೋಲಾಗಿದೆ ಹೊರತು, ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೋಲಲಿಲ್ಲ” ಎಂದು ಪ್ರತಿಕ್ರಿಯಿಸಿದರು.
ರಾಮಣ್ಣ ಹುಲಕುಂದ, ಸಂಜಯ ಜೋತಾವರ, ಸಂಗಮೇಶ ಮಡಿವಾಳ, ಹೊನ್ನಪ್ಪ ಬಿರಡಿ, ಬುದ್ದಪ್ಪ ಕುಂದಗೋಳ, ಭೀಮಶಿ ಪಾಟೀಲ, ಮಹಮ್ಮದ ಮಕಾನದಾರ್, ಮಹಮ್ಮದ್ ಝಾರೆ ಮತ್ತು ಸುನಿಲ್ ಹರಿಜನ ಇದ್ದರು.




