ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಅಧ್ಯಕ್ಷ ಅಜಯ್ ರಾಯ್ ವಿರುದ್ಧ ಮಹೋಬಾ ಜಿಲ್ಲೆಯಲ್ಲಿ ಇಂದು (ಮೇ 23) ಎಫ್‌ಐಆರ್ ದಾಖಲಿಸಲಾಗಿದೆ.
ಬಿಜೆಪಿ ಕಾರ್ಯಕರ್ತ ನೀರಜ್ ರಾವತ್ ಅವರು ನೀಡಿದ ದೂರಿನ ಆಧಾರದ ಮೇಲೆ ಮಹೋಬಾದ ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಅಪಹರಣ ಮತ್ತು ಅತ್ಯಾಚಾರಕ್ಕೊಳಗಾದ 16 ವರ್ಷದ ‘ನೀಟ್’ ವಿದ್ಯಾರ್ಥಿನಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಅಜಯ್ ರೈ ಅವರು ಶುಕ್ರವಾರ ಮಹೋಬಾಗೆ ತೆರಳಿದ್ದರು. ಸಂತ್ರಸ್ತೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಕಾರಿನಲ್ಲಿ ಮರಳುವಾಗ ಅವರು ಪ್ರಧಾನಿ ಮೋದಿ ಹಾಗೂ ಸ್ಥಳೀಯ ಎಸ್ಪಿ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ, ವಿವಾದಕ್ಕೆ ಕಾರಣವಾಗಿತ್ತು.
ಇದನ್ನು ಓದಿದ್ದೀರಾ? ಗಾಝಾ ಮೇಲಿನ ಇಸ್ರೇಲ್ ಕ್ರೌರ್ಯಕ್ಕೆ ಜಾಗತಿಕ ಆಕ್ರೋಶ; ಮೋದಿಯ ಮೌನವೇಕೆ?
ತಮ್ಮ ಮೇಲಿನ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಅಜಯ್ ರಾಯ್, ಈ ವಿಡಿಯೊ ನಕಲಿಯಾಗಿದ್ದು, ‘ಕೃತಕ ಬುದ್ಧಿಮತ್ತೆ’ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಸದಾ ಘನತೆಯನ್ನು ಕಾಯ್ದುಕೊಂಡಿದ್ದೇನೆ. ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ಬಿಜೆಪಿ ಐಟಿ ಸೆಲ್ ಈ ತಿರುಚಿದ ವಿಡಿಯೊವನ್ನು ಹರಿಬಿಟ್ಟಿದೆ. ಲಕ್ನೊ ತಲುಪಿದ ಕೂಡಲೇ ಇದರ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಪ್ರತಿಕ್ರಿಯಿಸಿ, “ಇದೇ ತಿಂಗಳ ಮೇ 2ರಂದು ಅಜಯ್ ರೈ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ, ಅವರು ಶೀಘ್ರ ಗುಣಮುಖರಾಗುವಂತೆ ಪ್ರಧಾನಿ ಮೋದಿ ಸಾರ್ವಜನಿಕವಾಗಿ ಹಾರೈಸಿದ್ದರು. ಆದರೆ, ಇಂದು ಅದೇ ಪ್ರಧಾನಿಗೆ ಅಜಯ್ ರೈ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಇದು ಕಾಂಗ್ರೆಸ್ ಪಕ್ಷದ ದಿಕ್ಕುತಪ್ಪಿದ ಮತ್ತು ಹತಾಶ ಮನಸ್ಥಿತಿಗೆ ಕನ್ನಡಿಯಾಗಿದೆ,” ಎಂದು ಕಿಡಿಕಾರಿದ್ದಾರೆ.




