ಮಹಿಳೆಯೊಬ್ಬರಿಗೆ ಸಾಕು ನಾಯಿಯೊಂದು ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿಯ ಮಾಲೀಕನೊಬ್ಬನನ್ನು ಕೊತ್ತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಂಜುಂಡ ಬಾಬು ಬಂಧಿತ ಆರೋಪಿ. ನಾಯಿ ಕಚ್ಚಿದ ಬಳಿಕ ಮಹಿಳೆಯ ಚಿಕಿತ್ಸಾ ವೆಚ್ಚ ತಾವೇ ಸಂಪೂರ್ಣವಾಗಿ ನೋಡಿಕ್ಕೊಳ್ಳುತ್ತೇವೆ ಎಂದು ಭರವಸೆ ನೀಡಿ ಬಳಿಕ, ಚಿಕಿತ್ಸಾ ವೆಚ್ಚ ಭರಿಸದ ನಾಯಿ ಮಾಲೀಕರ ವಿರುದ್ಧ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ದೂರು ನೀಡಿದ್ದರು. ಇದಕ್ಕೆ ಕೋಪಗೊಂಡ ಮಾಲೀಕ ಮಹಿಳೆಯ ಮತ್ತು ಆತನ ಮಗನ ಬೈಕ್‌ಗಳಿಗೆ ರಾತ್ರೋರಾತ್ರಿ ಬೆಂಕಿ ಹಚ್ಚಿದ್ದನು. ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಘಟನೆ?
ಜೂನ್ 13ರಂದು ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಪುಷ್ಪ (43) ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ನೆರೆಹೊರೆಯವರಾದ ಕೊತ್ತನೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಎಚ್‌ಎಂಟಿ ರಾಜಣ್ಣ ಅಲಿಯಾಸ್ ನಾಗರಾಜ್ ಅವರ ಸಾಕು ನಾಯಿ ಪುಷ್ಪಾ ಅವರ ಮೇಲೆ ಹಲವು ಬಾರಿ ದಾಳಿ ಮಾಡಿತ್ತು. ಇದರಿಂದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು.
ಇದನ್ನು ಕಣ್ಣಾರೆ ಕಂಡ ಮಾಲೀಕ ನಾಗರಾಜ್, ಬಾಬು ಹಾಗೂ ಗಾಯತ್ರಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ, ನಡೆದ ಘಟನೆ ಬಗ್ಗೆ ಪೊಲೀಸ್ ದೂರು ನೀಡದಂತೆ ಪುಷ್ಪಾ ಮತ್ತು ಆಕೆಯ ಮಗನಿಗೆ ಮನವಿ ಮಾಡಿದ್ದಾರೆ.
ನಾಗರಾಜ್ ಮತ್ತು ಅವರ ಪತ್ನಿ ಗೌರಮ್ಮ ಗಾಯಗೊಂಡಿರುವ ಪುಷ್ಪಾ ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದು ಜತೆಗೆ ಅವರು ಕೆಲಸ ಮಾಡಲು ಸಾಧ್ಯವಾಗುವವರೆಗೆ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಒಂದು ತಿಂಗಳು ಕಳೆದರೂ ವೈದ್ಯಕೀಯ ವೆಚ್ಚ ಭರಿಸಲು ಹಣ ನೀಡಿಲ್ಲ.
ಇದರಿಂದ ಕಂಗಾಲಾದ ಪುಷ್ಪಾ ವೈದ್ಯಕೀಯ ವೆಚ್ಚಕ್ಕೆ ಆಕೆಯ ಬಳಿ ಯಾವುದೇ ಹಣವಿಲ್ಲದ ಕಾರಣ, ಚಿಟ್ ಫಂಡ್‌ನಿಂದ ಹಣ ಹಿಂತೆಗೆದುಕೊಂಡಿದ್ದಾರೆ. ಈ ಚಿಟ್‌ಫಂಡ್‌ನಲ್ಲಿ ನಾಗರಾಜ್ ಅವರ ಕುಟುಂಬವೂ ಸೇರಿದೆ. ಚಿಟ್ ಫಂಡ್ ಹಣದಿಂದ ಚಿಕಿತ್ಸೆ ಮತ್ತು ಆಸ್ಪತ್ರೆಯ ಬಿಲ್ ಪಾವತಿ ಮಾಡಿದ್ದಾರೆ.
ಕುಟುಂಬವು ವೈದ್ಯಕೀಯ ವೆಚ್ಚ ಪಾವತಿಸಲು ನಿರಾಕರಿಸಿದ್ದರಿಂದ ಜುಲೈನಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಭೂತಿಪುರ ಕೆರೆಯ ಸುತ್ತ ಸಿಸಿಟಿವಿ ಮತ್ತು ಬ್ಯಾರಿಕೇಡ್ ಅಳವಡಿಸಲು ನಿವಾಸಿಗಳ ಒತ್ತಾಯ
“ಈ ಘಟನೆಯ ನಂತರ ಎಚ್‌ಎಂಟಿ ರಾಜಣ್ಣ ಅವರ ಮಗ ಬಾಬು ಅವರು ಸೋಮವಾರ ಪುಷ್ಪಾ ಅವರ ಮನೆ ಬಳಿ ತೆರಳಿ ಚಿಟ್ ಫಂಡ್ ಹಣ ವಾಪಸ್ ಮಾಡುವಂತೆ ಕಿರುಕುಳ ನೀಡಿದ್ದಾರೆ. ಹಣ ಮರುಪಾವತಿ ಮಾಡಲು ಸ್ವಲ್ಪ ಸಮಯಬೇಕು ಎಂದು ಕೇಳಿದ್ದರೂ, ಪುಷ್ಪಾ ಮತ್ತು ಅವರ ಮಗನಿಗೆ ಬೆದರಿಕೆ ಹಾಕಿ, ಕೆಟ್ಟ ಮಾತಿನಿಂದ ನಿಂದಿಸಿದ್ದಾನೆ. ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಎರಡೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ” ಎಂದು ಪುಷ್ಪಾ ದೂರಿದ್ದಾರೆ.