ಮೈಸೂರು ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡ ಬಹುತೇಕ ಬಿಜೆಪಿ ಶಾಸಕರು ಭ್ರಷ್ಟಾಚಾರದಲ್ಲಿ ಪಿ ಎಚ್ ಡಿ ಪಡೆದವರು ಎಂದು ಬೀಳಗಿಯಲ್ಲಿ ಅಹಿಂದ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.
ಅಹಿಂದ ಮುಖಂಡರು ಮತ್ತು ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಬಿಜೆಪಿ ಜೆಡಿಎಸ್ ಮೈಸೂರ್ ಚಲೋ ಪಾದಯಾತ್ರೆ ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಪ್ಪುಪಟ್ಟಿ ಧರಿಸಿ ಬಿಜೆಪಿ-ಜೆಡಿಎಸ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಹಿಂದ ಮುಖಂಡ ಯಲ್ಲಪ್ಪ ಹೆಗಡೆ , “ಚೆಕ್ ಮುಖಾಂತರ ಹಣ ತೆಗೆದುಕೊಂಡು ಜೈಲಿಗೆ ಹೋದವರು, ದೊಡ್ಡ ದೊಡ್ಡ ಶುಗರ್ ಫ್ಯಾಕ್ಟರಿ ಕಟ್ಟಿದವರು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಯನ್ನ ತೆಗೆದುಕೊಂಡು ಶಿಕ್ಷಣ ವ್ಯವಸ್ಥೆ ಹಾಳು ಮಾಡಿದವರು, ಭೂ ಮಾಫಿಯಾ ಮಾಡಿದವರು, ಜನರ ಹಣವನ್ನು ಕೊಳ್ಳೆ ಹೊಡೆದವರು ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಕಿಡಿಕಾರಿದರು.
ಮೈಸೂರು ಚಲೋದಲ್ಲಿ ಭಾಗವಹಿಸಿದ ಬಿಜೆಪಿ ಶಾಸಕರೆ, ಬೀಳಗಿ ಮತಕ್ಷೇತ್ರದಲ್ಲಿ ನಿಮ್ಮ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತ ಹೋದರೆ, ದಿನಗಳು ಸಾಲುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಟಾಂಗ್ ನೀಡಿದರು.
ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಚುನಾಯಿತ ಬಹುಮತ ಹೊಂದಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ದುರುದ್ದೇಶದಿಂದ ಸಿ ಎಂ ಸಿದ್ದರಾಮಯ್ಯ ನವರಿಗೆ ಕಾನೂನಿನ ಪೂರ್ವಾಪರ ಅಧ್ಯಯನ ಮಾಡದೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಜನಪರ ಆಡಳಿತ ನಡೆಸುತ್ತಿರುವ ಸರ್ಕಾರ ಸಮಗ್ರವಾಗಿ ರಾಜ್ಯದ ಜನರ ಹಿತವನ್ನು ಕಾಪಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸುಭದ್ರ ಆಡಳಿತ ನಡೆಸುತ್ತಿರುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯಪಾಲರ ಪ್ರಜಾಪ್ರಭುತ್ವದ ವಿರೋಧಿ ನಡೆಯನ್ನು ರಾಷ್ಟ್ರಪತಿಗಳು ಗಮನಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಜನರ ಹಿತದೃಷ್ಟಿಯಿಂದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇವರನ್ನು ರಾಜ್ಯಪಾಲರ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನಾ ಮನವಿ ಸಲ್ಲಿಸಿಲಾಯಿತು.
ಈ ಪ್ರತಿಭಟನೆಯಲ್ಲಿ ಎಸ್ ಟಿ ಪಾಟೀಲ್, ಬಸವಪ್ರಭು ಸರನಾಡಗೌಡರ್, ಪಡಿಯಪ್ಪ ಕರಿಗಾರ, ಎಂ ಬಿ ಸೌದಾಗರ್, ಸಿದ್ದು ಸರಾವರಿ. ಮಹಾದೇವ್ ಹಾದಿಮನಿ, ಕೆಂಪಲಿಂಗನ್ನವರ್, ಇನ್ನೂ ಹಲವಾರು ಅಹಿಂದ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದವರು ಭಾಗವಹಿಸಿದ್ದರು.
ವರದಿ: ಖಾಜಾ ಮೊಯಿನುದ್ದೀನ್. ಸಿಟಿಜನ್ ಜರ್ನಲಿಸ್ಟ್, ಬೀಳಗಿ