ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿರುವುದರಿಂದ ಬೆಳಗಾವಿ ನಗರಕ್ಕೆ ಮುಂದಿನ ಒಂದು ವರ್ಷದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ ಎಂಬ ವಿಶ್ವಾಸ ಮೂಡಿದೆ.
ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಲಾದ ರಕ್ಕಸಕೊಪ್ಪ ಜಲಾಶಯವು ಸುಮಾರು ಅರ್ಧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಸಮರ್ಪಕ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ನಗರಕ್ಕೆ ನಿರಂತರವಾಗಿ ಕುಡಿಯುವ ನೀರು ಪೂರೈಸಲು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ವೇಳೆ ಜಿಲ್ಲೆಯ ಇತರೆ ಜಲಾಶಯಗಳಲ್ಲೂ ಒಳಹರಿವು ಹೆಚ್ಚಾಗಿದೆ. ಹಿಡಕಲ್ ಜಲಾಶಯಕ್ಕೆ ಗುರುವಾರ 16,872 ಕ್ಯುಸೆಕ್ ನೀರು ಹರಿದು ಬಂದಿದ್ದು, ಬುಧವಾರ 11,487 ಕ್ಯುಸೆಕ್ ಒಳಹರಿವು ದಾಖಲಾಗಿತ್ತು.
‘ಮಹಾ’ ಮಳೆಯ ಪರಿಣಾಮ ಕೃಷ್ಣಾ ನದಿಯಲ್ಲೂ ನೀರಿನ ಹರಿವು ಏರಿಕೆಯಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಗುರುವಾರ 86,840 ಕ್ಯುಸೆಕ್ ನೀರು ಹರಿದುಬಂದಿದ್ದು, ಬುಧವಾರ 76,288 ಕ್ಯುಸೆಕ್ ಹರಿವು ದಾಖಲಾಗಿತ್ತು.
ಇನ್ನೊಂದೆಡೆ, ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನವಿಲುತೀರ್ಥ ಜಲಾಶಯದ ಒಳಹರಿವು 2,593 ಕ್ಯುಸೆಕ್‌ನಿಂದ 2,536 ಕ್ಯುಸೆಕ್‌ಗೆ ಇಳಿಕೆಯಾಗಿದೆ



