ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠವನ್ನು ಸ್ಥಾಪಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ರಿಜಿಸ್ಟ್ರಾರ್ ಸಂತೋಷ್ ಕಾಮಗೌಡ ಹಾಗೂ ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ್ ಕಂಬಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕರ್ನಾಟಕದ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಜೀವನ, ವಿಚಾರಧಾರೆ ಮತ್ತು ತತ್ವಗಳ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬಸವ ಅಧ್ಯಯನ ಪೀಠವನ್ನು ಸ್ಥಾಪಿಸಬೇಕು ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರ ನೇತೃತ್ವದ ನಿಯೋಗವು ಸುಮಾರು ಎರಡು ವರ್ಷಗಳ ಹಿಂದೆ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಆ ಮನವಿಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿ ಬಸವ ಅಧ್ಯಯನ ಪೀಠವನ್ನು ಸ್ಥಾಪಿಸಿರುವುದು ಸಮಾಜದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ ಎಂದು ಮಹಾಸಭೆಯ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ತ್ಯಾಗರಾಜ, ರಿಜಿಸ್ಟ್ರಾರ್ ಸಂತೋಷ್ ಕಾಮಗೌಡ, ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ್ ಕಂಬಾರ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಸೇವೆಯನ್ನು ಶ್ಲಾಘಿಸಿ, ಸಮಸ್ತ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.



