ರಾಜ್ಯ ಸರ್ಕಾರ ಹೊಸದಾಗಿ ಪ್ರಜಾಸೇವಾ ಇಲಾಖೆ ಸೃಜಿಸಿದ್ದು, ಅದರ ಜವಾಬ್ದಾರಿಯನ್ನು ಸಂಪುಟದಲ್ಲಿರುವ ಒಬ್ಬ ಸಚಿವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಂಚಿಕೆ ಮಾಡಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಸಚಿವ ಸಂಪುಟಕ್ಕೆ ಮಹಿಳೆಯೊಬ್ಬರು ಸೇರ್ಪಡೆಯಾಗಲಿದ್ದಾರೆ. ಮಾಜಿ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಉಮಾಶ್ರೀ ಹಾಗೂ ಗಾಯತ್ರಿ ಶಾಂತೇಗೌಡ ಅವರ ಹೆಸರುಗಳು ಪರಿಗಣನೆಯಲ್ಲಿವೆ. ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತು ಗೊಂದಲವಿದ್ದು, ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ಮಹಿಳಾ ಸಚಿವರಿಗೆ ವಹಿಸಲಾಗುವುದು. ಅಲ್ಲಿಯವರೆಗೆ ಈ ಖಾತೆ ಮುಖ್ಯಮಂತ್ರಿ ಅವರ ಬಳಿಯೇ ಇರಲಿದೆ ಎಂದು ತಿಳಿಸಿದರು.
ರಾಷ್ಟ್ರಧ್ವಜ ವಿಚಾರ ರಾಜಕೀಯಗೊಳಿಸುವ ಅಗತ್ಯವಿಲ್ಲ
ವಸತಿ ಸಚಿವ ಜಮೀಅಹಮದ್ ಖಾನ್ ಅವರು ವಿಜಯನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಧ್ವಜ ಹಾರಿಸದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಇಂತಹ ಬೆಳವಣಿಗೆ ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಸಚಿವರು ಹೀಗೆ ನಡೆದುಕೊಂಡಿದ್ದಾರೆ. ಈ ವಿಚಾರವನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ ಎಂದರು.
ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸದ ಬಿಜೆಪಿ ನಾಯಕರು ನಮಗೆ ಉಪದೇಶ ಮಾಡುವ ಅಗತ್ಯವಿಲ್ಲ ಎಂದು ಅವರು ತಿರುಗೇಟು ನೀಡಿದರು.



