ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ಕೃಷಿ ಭವನವನ್ನು ಸರ್ಕಾರದ ಸುಪರ್ದಿಗೆ ಪಡೆಯಬೇಕು ಎಂದು ಭಾರತೀಯ ಕೃಷಿಕ ಸಮಾಜ ಕರ್ನಾಟಕ ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1996ರಲ್ಲಿ ಕೃಷಿ ಸಂಬಂಧಿತ ಪರಿಕರಗಳ ಮಾರಾಟಕ್ಕಾಗಿ ಖಾಸಗಿ ವ್ಯಕ್ತಿಗೆ ಬಾಡಿಗೆ ನೀಡಲಾದ ಈ ಭವನವನ್ನು ಇದೀಗ ಬಾರ್ ಮತ್ತು ರೆಸ್ಟಾರೆಂಟ್ ಆಗಿ ಪರಿವರ್ತಿಸಿರುವುದು ಖಂಡನೀಯ ಎಂದು ಹೇಳಿದರು.
ಕೃಷಿ ಬೆಳವಣಿಗೆ ಹಾಗೂ ರೈತರ ಹಿತಕ್ಕಾಗಿ ನಿರ್ಮಿಸಲಾದ ಈ ಭವನವನ್ನು ಮದ್ಯ ಮಾರಾಟದ ಮಳಿಗೆ ಹಾಗೂ ಲಾಡ್ಜ್ ಆಗಿ ಬಳಸುತ್ತಿರುವುದು ದುರಂತಕರ ಬೆಳವಣಿಗೆ. 2016ರಿಂದ ಈ ವಿಷಯದ ಕುರಿತು ಭಾರತೀಯ ಕೃಷಿಕ ಸಮಾಜದಿಂದ ನಿರಂತರ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು.
ಈ ನಡುವೆ ಭವನದ ವಿಚಾರವಾಗಿ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ, ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕೃಷಿ ಪರಿಕರಗಳ ಮಾರಾಟಕ್ಕೆಂದು ನೀಡಲಾದ ಭವನವನ್ನು ಅನ್ಯ ಉದ್ದೇಶಕ್ಕೆ ಬಳಸಿದವರ ವಿರುದ್ಧ ಹಾಗೂ ಭವನವನ್ನು ಬಾಡಿಗೆ ನೀಡಿದವರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಂಜೀವ ಡೊಂಗರಗಾವಿ, ಮಲ್ಲಿಕಾರ್ಜುನ ಡೊಂಗರಗಾವಿ, ಶೇಖರ, ಶಿವಲೀಲಾ ಮೀಸಾಳೆ, ಈರಪ್ಪ ಪಟ್ಟಿಹಾಳ ಉಪಸ್ಥಿತರಿದ್ದರು.




