ಭೂಮಿಯ ಋಣ ತೀರಿಸುವಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ದುರ್ಗಾ ಪರಮೇಶ್ವರಿ ಅಮ್ಮನವರ 17ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ತಂದೆ-ತಾಯಿ, ಗುರುಗಳು, ಸಮಾಜ ಹಾಗೂ ಜನ್ಮಭೂಮಿ-ಈ ನಾಲ್ಕು ಋಣಗಳನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕಾಗಿ ನಾವು ಪ್ರತಿದಿನವೂ ಜಾಗೃತಿಯಿಂದ ನಡೆದುಕೊಳ್ಳಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುನವಳ್ಳಿ ಸೋಮೇಶ್ವರ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಮರಕುಂಬಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ.ಬಿ. ಮಲ್ಲೇಶ ಅಜ್ಜನವರು ಧಾರ್ಮಿಕ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಿರುತೆರೆ ನಟ ಕಿರಣರಾಜ್, ಗಾಯಕ ಹೇಮಂತ್, ಡಾಗ್ ಸತೀಶ್, ಸರಿಗಮಪದ ದರ್ಶನ ಮತ್ತು ಲಹರಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಸಾವಿರಾರು ಪ್ರೇಕ್ಷಕರು ಭಾಗವಹಿಸಿ ರಸದೌತಣ ಸವಿದರು.
ನಗರಸಭೆ ಆಯುಕ್ತ ಭಾಗ್ಯಶ್ರೀ ಹುಗ್ಗಿ ಸೇರಿದಂತೆ ವಿಜಯ ಬೋಳನ್ನವರ, ಶಿವಾನಂದ ಬೆಳಗಾವಿ, ರಾಜು ಜನ್ಮಟ್ಟಿ, ಉಮೇಶ ಬೋಳೆತ್ತಿನ, ಬಾಬು ಕೂಡಸೋಮಣ್ಣವರ, ಹಾಗೂ ಸುಜಾತಾ ನಾಯ್ಕ ಉಪಸ್ಥಿತರಿದ್ದರು.



