ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಗಡಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ತೀವ್ರಗೊಂಡಿದೆ. ದೂದಗಂಗಾ ಹಾಗೂ ವೇದಗಂಗಾ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ನಾಲ್ಕು ಪ್ರಮುಖ ಕೆಳಹಂತದ ಸಂಪರ್ಕ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಹಲವಾರು ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದೂದಗಂಗಾ ನದಿಯ ಪ್ರವಾಹದಿಂದ ಕಾರದಗಾ-ಬೋಜ್ ಸಂಪರ್ಕ ಸೇತುವೆ ನೀರಿನಲ್ಲಿ ಮುಳುಗಿದೆ. ವೇದಗಂಗಾ ನದಿಯ ಅಬ್ಬರಕ್ಕೆ ಬಾರವಾಡ-ಕನ್ನೂರ ಹಾಗೂ ಬೋಜವಾಡಿ-ಗಜವರವಾಡಿ ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಇದೇ ವೇಳೆ ಮಹಾರಾಷ್ಟ್ರದ ರಾಜಾಪುರ-ಜುಗಳ ಸಂಪರ್ಕ ಸೇತುವೆಯೂ ನೀರಿನಲ್ಲಿ ಮುಳುಗಿದ್ದು, ಗಡಿ ಭಾಗದ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ನದಿಗಳ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ. ಮುಳುಗಿರುವ ಸೇತುವೆಗಳ ಮೇಲೆ ವಾಹನ ಚಲಾಯಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಅಗತ್ಯವಿದ್ದರೆ ಸುರಕ್ಷಿತ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮಳೆ ಮುಂದುವರಿದರೆ ಪ್ರವಾಹದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.



