ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಚವ್ಹಾಟಗಲ್ಲಿಯಲ್ಲಿ ತಡರಾತ್ರಿ ನಡೆದಿದೆ.
ಮನೆಯಲ್ಲಿದ್ದವರು ಬೆಂಕಿಯಿಂದ ಹೊರಬರಲಾಗದೆ ಸಿಲುಕಿಕೊಂಡ ಪರಿಣಾಮ ದುರಂತ ಸಂಭವಿಸಿದೆ. ಮನೆಯಲ್ಲಿ ಫ್ರಿಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಇಡೀ ಮನೆಗೆ ಆವರಿಸಿದೆ ಎನ್ನಲಾಗಿದೆ.
ಅವಘಡದಲ್ಲಿ ಗಜಾನನ ದಮೋನೆ (65), ರೋಷನ ದಮೋನೆ (21), ಶಾರಧಾ ದಮೋನೆ (45) ಹಾಗೂ ಭಾರತಿ ರದಮೋನೆ (50) ಮೃತಪಟ್ಟಿದ್ದಾರೆ.
ಪ್ರಿಯಾ ದಮೋನೆ (28) ಹಾಗೂ ಗಂಗಾ ದಮೋನೆ (25) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಗಣೇಶ ಚತುರ್ಥಿಯ ದಿನವೇ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ದುಃಖಕ್ಕೆ ಕಾರಣವಾಗಿದೆ.
ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.



