ಕಾಲುವೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರೊಬ್ಬರು ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತನಟ್ಟಿ ಗ್ರಾಮದಲ್ಲಿ ರವಿವಾರ ನಡೆದಿದೆ.
ಗ್ರಾಮದ ರೈತ ಬಂಡು ಚವ್ಹಾಣ್ ಅವರು ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಟವರ್ ಏರಿ ಕುಳಿತರು. ಮಳೆ ಕೈಕೊಟ್ಟಿರುವ ಸಂದರ್ಭದಲ್ಲಿ ಕಾಲುವೆ ಮೂಲಕವೂ ನೀರು ಹರಿಯದ ಕಾರಣ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಐಗಳಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈತನನ್ನು ಕೆಳಗಿಳಿಸಲು ಹರಸಾಹಸ ನಡೆಸಿದ ಸಿಬ್ಬಂದಿ, ಬಳಿಕ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿದರು.
ಕಾಲುವೆಗೆ ಕೂಡಲೇ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.



