ವಿದ್ಯುತ್ ಅಪಘಾತದಲ್ಲಿ ಯುವ ವಕೀಲರೊಬ್ಬರು ಮೃತಪಟ್ಟಿದ್ದು, ಚಿಕಿತ್ಸೆ ವಿಳಂಬ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿವೇಕಾನಂದ ನಗರದಲ್ಲಿ ನಡೆದಿದೆ.
ಮೃತರನ್ನು ಸೂರಜ್ ರಾಜೇಂದ್ರ ಯರಗಟ್ಟಿ (26) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ನೀರು ತುಂಬಿಸಲು ವಿದ್ಯುತ್ ಮೋಟಾರ್ ಆನ್ ಮಾಡಲು ಮುಂದಾದ ವೇಳೆ ಸೂರಜ್ ಅವರಿಗೆ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದಿದೆ. ಪರಿಣಾಮವಾಗಿ ಅವರು ಪ್ರಜ್ಞಾಹೀನರಾಗಿ ಕೆಳಗೆ ಬಿದ್ದಿದ್ದು, ಕುಟುಂಬದವರು ತಕ್ಷಣ ಹುಕ್ಕೇರಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಆಸ್ಪತ್ರೆಯಲ್ಲಿ ತಕ್ಷಣ ಸೂಕ್ತ ಚಿಕಿತ್ಸೆ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಕರ್ತವ್ಯದಲ್ಲಿದ್ದ ವೈದ್ಯರು ಅಗತ್ಯ ಲೈಫ್ ಸಪೋರ್ಟ್ ನೀಡದೇ, ಹೆಚ್ಚಿನ ಚಿಕಿತ್ಸೆಗೆ ಸಂಕೇಶ್ವರ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ, ಆಂಬುಲೆನ್ಸ್‌ನಲ್ಲಿ ವೆಂಟಿಲೇಷನ್ ವ್ಯವಸ್ಥೆಯೂ ಇರಲಿಲ್ಲ ಎಂದು ಹೇಳಲಾಗಿದೆ.
ಸಂಕೇಶ್ವರ ಸರ್ಕಾರಿ ಆಸ್ಪತ್ರೆಗೆ ತಲುಪಿದಾಗ ಅಲ್ಲಿನ ವೈದ್ಯರೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆಂದು ತಿಳಿಸಿ, ಮತ್ತೆ ಹುಕ್ಕೇರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಳಿಕ ಮರಳಿ ಕರೆತಂದಾಗ ಸೂರಜ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
“ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ವೈದ್ಯರ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣ” ಎಂದು ಮೃತನ ತಂದೆ, ವಕೀಲ ರಾಜೇಂದ್ರ ಯರಗಟ್ಟಿ ಆರೋಪಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



