ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಪ್ರಕರಣದಲ್ಲಿ ಆರೋಪಿತನಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಳಗಾವಿ ಪೋಕ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಗಣೇಶಪುರ ಲಕ್ಷ್ಮೀನಗರದ ಸಚಿನ್ ಕಾಕತ್ಕರ್ (30) ಶಿಕ್ಷೆಗೆ ಗುರಿಯಾದ ಆರೋಪಿ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2022ರ ಮಾರ್ಚ್ 8ರಂದು ಅಪ್ರಾಪ್ತ ಬಾಲಕಿಗೆ ಗುಪ್ತಾಂಗ ಪ್ರದರ್ಶಿಸಿ ಅಶ್ಲೀಲವಾಗಿ ವರ್ತಿಸಿದ್ದಲ್ಲದೆ, ಫಿರ್ಯಾದಿದಾರರ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂಬುದು ಆರೋಪವಾಗಿದೆ.
ವಿಚಾರಣೆ ನಡೆಸಿದ ನ್ಯಾಯಾಲಯವು ಐಪಿಸಿ ಕಲಂ 354(ಎ) ಮತ್ತು ಪೋಟ್ರೊ ಕಾಯ್ದೆಯ ಕಲಂ 12 ಅಡಿಯಲ್ಲಿ ತಲಾ 3 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ 6 ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಲಾಗುತ್ತದೆ.
ಇದಲ್ಲದೆ, ನೊಂದ ಬಾಲಕಿಗೆ ₹1 ಲಕ್ಷ ಪರಿಹಾರ ಧನ ನೀಡಲು ನ್ಯಾಯಾಲಯ ಆದೇಶಿಸಿದ್ದು, ಆ ಹಣವನ್ನು 5 ವರ್ಷಗಳ ಕಾಲ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಡಲು ಸೂಚಿಸಿದೆ.
ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದರು.



