ಅಪರಾಧ ಕೃತ್ಯವೊಂದರಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ರಾಘವೇಂದ್ರ ಉರೂಫ್ ರಘು ಶಿವಗೌಡ ಕರೆನ್ನವರ (28) ಎಂಬ ವಿಚಾರಣಾಧೀನ ಕೈದಿ ಇಲ್ಲಿನ ಉಪ ಕಾರಾಗೃಹದಿಂದ ಪರಾರಿಯಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಚಿಕ್ಕೋಡಿ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿತನನ್ನು ಗೋಕಾಕ ಉಪ ಕಾರಾಗೃಹಕ್ಕೆ ದಾಖಲಿಸಲಾಗಿತ್ತು. ಕಾರಾಗೃಹದ ಆವರಣದಲ್ಲಿ ಬೆಳೆದ ನುಗ್ಗೆ ಮರದ ಕೊಂಬೆಗಳನ್ನು ಬಳಸಿಕೊಂಡು, ಗೋಡೆಯಾಚೆಗಿನ ಮತ್ತೊಂದು ಮರದ ನೆರವಿನಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಕುರಿತು ಉಪ ಕಾರಾಗೃಹದ ಸಹಾಯಕ ಜೈಲರ್ ಶಂಕರ ಆರ್. ಮನ್ನೇರಿ ಅವರು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.



