ಬೆಳಗಾವಿ ನಗರದ ಬಸವನ ಗಲ್ಲಿ ಪ್ರದೇಶದ ಸಮರ್ಥ ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗೆ ಹಗಲು ಹೊತ್ತಿನಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ, ಒಣ ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಜೂನ್ 25ರಂದು ಮಧ್ಯಾಹ್ನ ಸುಮಾರು 2.10ರ ವೇಳೆಗೆ ಶಂಕಿತ ವ್ಯಕ್ತಿ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಿ, ನೇರವಾಗಿ ಎರಡನೇ ಮಹಡಿಗೆ ತೆರಳಿದ್ದಾನೆ. ಅಲ್ಲಿ ಒಣ ಹಾಕಿದ್ದ ಬಟ್ಟೆಗಳನ್ನು ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಇದೇ ವೇಳೆ ಯಾರೋ ಬರುತ್ತಿರುವುದನ್ನು ಗಮನಿಸಿದ ಆತ, ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯ ಬಳಿಕ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಿವಾಸಿಗಳು, ಸಾಮಾಜಿಕ ಕಾರ್ಯಕರ್ತ ಅವಧೂತ್ ತುಡೇಕರ್ ಅವರು ಖಾಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ ಈ ಘಟನೆ ನಿವಾಸಿಗಳಲ್ಲಿ ಭದ್ರತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಶಂಕಿತ ವ್ಯಕ್ತಿಯನ್ನು ಶೀಘ್ರ ಪತ್ತೆಹಚ್ಚಿ, ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಶಂಕಿತನಿಗಾಗಿ ಹುಡುಕಾಟ ಆರಂಭಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



