- ಪೊಲೀಸ್ ವಸತಿ ಗೃಹದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಪೇದೆ
- ಚಿಕಿತ್ಸೆ ಫಲಕಾರಿಯಾಗದೆ ಪೊಲೀಸ್ ಕಾನ್ಸ್‌ಟೇಬಲ್ ಸಾವು
ಸಶಸ್ತ್ರ ಮೀಸಲು ಪಡೆ (ಡಿಎಆರ್) ಪೊಲೀಸ್ ಕಾನ್ಸ್‌ಟೇಬಲ್ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಮೃತ ಪೇದೆ ಜಾಫರ್ ಎಂದು ತಿಳಿದುಬಂದಿದೆ. ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ವಸತಿ ಗೃಹದಲ್ಲಿ ಬುಧವಾರ ರಾತ್ರಿ ಜಾಫರ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕಿವಿಯಲ್ಲಿ ರಕ್ತಸ್ರಾವವಾಗುತ್ತಿತ್ತು. ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಾಫರ್ ಅವರು 2009ರಲ್ಲಿ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ನೇಮಕವಾಗಿದ್ದರು. ಅವರು 2ನೇ ಮದುವೆಯಾಗಿದ್ದರು. 2ನೇ ಪತ್ನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮೊದಲ ಹೆಂಡತಿ ಮುಸ್ಲಿಂ, ಎರಡನೇ ಹೆಂಡತಿ ಹಿಂದು ಧರ್ಮಕ್ಕೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟಿದ್ದ ಜಾಫರ್ ಕಳೆದ ಕೆಲವು ದಿನಗಳ ಹಿಂದೆ 2ನೇ ಪತ್ನಿಯೊಂದಿಗೂ ಜಗಳ ಮಾಡಿಕೊಂಡಿದ್ದರೆಂದು ತಿಳಿದುಬಂದಿದೆ. ಕೌಟುಂಬಿಕ ಕಲಹದಿಂದಲೇ ಹಲ್ಲೆ ಮತ್ತು ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.
ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.