ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ತಾಪಮಾನದಿಂದ ರಾಜ್ಯದ ಹಲವು ನದಿ, ಜಲಾಶಯಗಳು ನೀರಿಲ್ಲದೆ ಬತ್ತುತ್ತಿವೆ. ಸದ್ಯ ಬಳ್ಳಾರಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ಜಿಲ್ಲೆಯಾದ್ಯಂತ ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಗಳು ಗಮನ ಹರಿಸಿದ್ದು, ಆರು ತಾಲೂಕುಗಳ 740 ಗ್ರಾಮಗಳ ಪೈಕಿ 153 ಗ್ರಾಮಗಳಲ್ಲಿ ಜನ ಜಾನುವಾರುಗಳು ಕುಡಿಯುವ ನೀರಿನ ಅಭಾವಕ್ಕೆ ತುತ್ತಾಗುವ ಸಾಧ್ಯತೆ ಕಂಡುಬಂದಿದೆ.
ಸಂಡೂರು ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶವಾಗಿದ್ದು, ಗಣಿಗಾರಿಕೆ ಜಲಮೂಲಗಳ ಬತ್ತುವಿಕೆಗೆ ಕಾರಣವಾಗಿದೆ. ಅಂಜರ್ಜಲ ಮಟ್ಟದ ಗಣನೀಯ ಕುಸಿತದ ಜತೆಗೆ ಮಲಿನವಾದ ನೀರಿನ ಮೂಲಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ದಿನಬಳಕೆ, ಕೃಷಿ ಚಟುವಟಿಕೆಗಳಿಗೂ ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾಡಳಿತ ನೀರಿನ ಮಿತ ಬಳಕೆಗೆ ಸೂಚನೆ ನೀಡಿದ್ದು, ಬಿಸಿಲಿನ ತೀವ್ರತೆ ಹೆಚ್ಚಾದಂತೆ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಆತಂಕ ಸೃಷ್ಟಿಯಾಗಿದೆ. ಜಿಲ್ಲಾ ಪಂಚಾಯತ್ ಈ ಕುರಿತು ಸಭೆ ನಡೆಸಿ ನೀರಿನ ಅಭಾವ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
“ಪ್ರಸ್ತುತ ಜಿಲ್ಲೆಯ 32 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹಗರಿಬೊಮ್ಮನಹಳ್ಳಿ ತಾಲೂಕಿನ 5 ಗ್ರಾಮಗಳು, ಹಡಗಲಿ ತಾಲೂಕಿನ 3 ಗ್ರಾಮಗಳು ಹಾಗೂ ಹರಪನಹಳ್ಳಿ ತಾಲೂಕಿನ 24 ಗ್ರಾಮಗಳು ಸಮಸ್ಯೆಗೆ ಒಳಪಟ್ಟಿವೆ. ಈ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ನಿರಂತರ ನೀರು ಸರಬರಾಜು ಮಾಡಲು ಈಗಾಗಲೇ 41 ಖಾಸಗಿ ಕೊಳವೆಬಾವಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಜತೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 4 ಟ್ಯಾಂಕರ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಲು ಸಿದ್ಧವಾಗಿರಿಸಲಾಗಿದೆ” ಎಂದು ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ತಿಳಿಸಿದ್ದಾರೆ.
“ಗ್ರಾಮಗಳಲ್ಲಿನ ಎಲ್ಲ ಜಲಮೂಲಗಳನ್ನು ಸ್ವಚ್ಛಗೊಳಿಸಿ, ನೀರಿನ ಗುಣಮಟ್ಟ ಪರಿಶೀಲಿಸಿದ ಬಳಿಕವೇ ನೀರು ಸರಬರಾಜು ಮಾಡಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ಗಳಲ್ಲಿ ಸೋರಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಲಾಖೆಯ ಶಾಖಾಧಿಕಾರಿಗಳು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 666 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಮೇಲೂ ವಿಶೇಷ ಗಮನ ಹರಿಸಲಾಗಿದ್ದು, ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಕೂಡಲೇ ದುರಸ್ತಿ ಕೈಗೊಳ್ಳುವಂತೆ ಸೂಚಿಸಿದ್ದು, ಅತಿಹೆಚ್ಚು ಸಮಸ್ಯೆ ಎದುರಾಗಿರುವ ಹರಪನಹಳ್ಳಿ ತಾಲೂಕಿನ ಗ್ರಾಮಗಳಿಗೆ ಸಿಇಒ ಅವರು ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶೃಂಗೇರಿ ಅಂಚೆ ಮತಗಳ ಮರು ಎಣಿಕೆ: ಸುಧೀರ್ ಕುಮಾರ್ ಮುರೊಳ್ಳಿ ದೇವಾಲಯದಲ್ಲಿ ಪ್ರಮಾಣ
ಸಮಸ್ಯೆ ತಲೆದೂರಿರುವ ಪ್ರದೇಶಗಳಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದ್ದು, ಖಾಸಗಿ ಬೋರ್‌ವೆಲ್‌ಗಳನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.
ನೀರಿನ ತೀವ್ರ ಅಭಾವದಿಂದಾಗಿ ಬಳ್ಳಾರಿಯ ಜೀನ್ಸ್ ವಾಷಿಂಗ್ ಮತ್ತು ಪ್ರೊಸೆಸಿಂಗ್ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದು, 55ಕ್ಕೂ ಹೆಚ್ಚು ಜೀನ್ಸ್ ವಾಷಿಂಗ್ ಯೂನಿಟ್‌ಗಳು ಬಾಗಿಲು ಮುಚ್ಚಿದ್ದು, ಕಾರ್ಮಿಕರಲ್ಲಿ ಭೀತಿ ಉಂಟಾಗಿದೆ.




