ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲೊಂದಾಗಿರುವ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯ ಪ್ರವೇಶ ದ್ವಾರದಲ್ಲೇ ಇರುವ ಟ್ರಾಫಿಕ್ ಬೋರ್ಡೊಂದು ಒಂದು ಕಡೆಗೆ ವಾಲಿ ನೇತಾಡುತ್ತಿತ್ತು. ಈ ಬಗ್ಗೆ ಈ ದಿನ.ಕಾಮ್ ವರದಿ ಪ್ರಕಟಿಸಿ, ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಬಿಬಿಎಂಪಿಯವರ ಗಮನಕ್ಕೆ ತಂದಿತ್ತು.
ಈ ವರದಿಯ ಬಳಿಕ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು, ಬೀಳುವ ಹಂತದಲ್ಲಿದ್ದ ಹಾಗೂ ಅಪಾಯದ ಸ್ಥಿತಿಯಲ್ಲಿದ್ದ ಟ್ರಾಫಿಕ್ ಬೋರ್ಡ್ ಅನ್ನು ಕೊನೆಗೂ ತೆರವುಗೊಳಿಸಿದ್ದಾರೆ. ಆ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.
ಸದರಿ ದೂರಿನನ್ವಯ ಬೀಳುವ ಹಂತದಲ್ಲಿದ್ದ ಮಾರ್ಗ ಸೂಚಿ ಬೋರ್ಡ್ ಅನ್ನು ಸೆಕ್ಟರ್ ಕೋಬ್ರಾ ಸಿಬ್ಬಂದಿರವರಾದ ಮಲ್ಲಪ್ಪ ರವರು ಬಿಬಿಎಂಪಿ ರವರ ಸಹಾಯದೊಂದಿಗೆ ತೆರವುಗೊಳಿಸಿ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರಿಗೆ ಆಗಬಹುದಾದ ತೊಂದರೆಯನ್ನು ತಪ್ಪಿಸಿರುತ್ತಾರೆ. @CPBlr @Jointcptraffic @DCPTrNorthBCP @acp_north @blrcitytraffic pic.twitter.com/Lf5CXAJPCY
— MALLESHWARAM TRAFFIC BTP (@Mvmtraffic) November 21, 2023
ತೆರವುಗೊಳಿಸಿದ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಮಲ್ಲೇಶ್ವರಂ ಟ್ರಾಫಿಕ್ ಪೊಲೀಸರು, ‘ಸದರಿ ದೂರಿನನ್ವಯ ಬೀಳುವ ಹಂತದಲ್ಲಿದ್ದ ಮಾರ್ಗ ಸೂಚಿ ಬೋರ್ಡ್ ಅನ್ನು ಸೆಕ್ಟರ್ ಕೋಬ್ರಾ ಸಿಬ್ಬಂದಿಯವರಾದ ಮಲ್ಲಪ್ಪರವರು ಬಿಬಿಎಂಪಿ ಸಿಬ್ಬಂದಿಗಳ ಸಹಾಯದೊಂದಿಗೆ ತೆರವುಗೊಳಿಸಿದ್ದು, ಸಾರ್ವಜನಿಕರಿಗೆ ಆಗಬಹುದಾದ ತೊಂದರೆಯನ್ನು ತಪ್ಪಿಸಿರುತ್ತಾರೆ’ ಎಂದು ತಿಳಿಸಿದ್ದಾರೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಳೆದ ಭಾನುವಾರ(ನ.19)ದಂದು ಬೆಳಗ್ಗೆ ವಿದ್ಯುತ್ ತಂತಿ ತುಳಿದು ತಾಯಿ-ಮಗಳು ಮೃತಪಟ್ಟ ಪ್ರಕರಣ ಇನ್ನೂ ಹಸಿರಾಗಿರುವಾಗಲೇ, ಬೀಳುವ ಹಂತದಲ್ಲಿದ್ದ ಮಾರ್ಗ ಸೂಚಿ ಬೋರ್ಡಿನ ಫೋಟೋ ತೆಗೆದು ಈ ದಿನ.ಕಾಮ್‌ನ ಪ್ರತಿನಿಧಿಯೋರ್ವರು ಟ್ವೀಟ್ ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದರು. ಕೂಡಲೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು, ಬಿಬಿಎಂಪಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಜನರ ಬಲಿಗೆ ಕಾಯುತ್ತಿದೆಯಾ ಈ ಟ್ರಾಫಿಕ್ ಬೋರ್ಡ್? ಪೊಲೀಸ್ ಸ್ಟೇಷನ್, ಆಸ್ಪತ್ರೆ ಇದೆ, ಎದುರಲ್ಲೇ ಟ್ರಾಫಿಕ್ ಕಂಟ್ರೋಲ್ ಮಾಡೋ ಚೌಕಿಯೂ ಇದೆ? ಇದು ಯಾರ ಕಣ್ಣಿಗೂ ಬೀಳಲಿಲ್ಲವೇ? ದಯವಿಟ್ಟು ಅನಾಹುತ ಆಗುವ ಮುನ್ನ ಸರಿಪಡಿಸಿ
Location: KC General Hospital Entrance@BlrCityPolice @blrcitytraffic @CPBlr @osd_cmkarnataka pic.twitter.com/EwuZjCnF42— Irshad Venur (@muhammadirshad6) November 21, 2023
ಅಲ್ಲದೇ, ಈ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ‘ಬೆಂಗಳೂರು | ಜನರ ಬಲಿಗೆ ಕಾಯುತ್ತಿದೆಯೇ ಟ್ರಾಫಿಕ್ ಬೋರ್ಡ್?’ ಎಂಬ ವರದಿಯನ್ನು ಈ ದಿನ.ಕಾಮ್ ಇಂದು(ನ.21) ಪ್ರಕಟಿಸಿತ್ತು.
ಇದನ್ನು ಓದಿದ್ದೀರಾ? ಬೆಂಗಳೂರು | ಜನರ ಬಲಿಗೆ ಕಾಯುತ್ತಿದೆಯೇ ಟ್ರಾಫಿಕ್ ಬೋರ್ಡ್?
‘ಇದು ಹಳೆಯ ಬೋರ್ಡ್ ಆಗಿರುವುದರಿಂದ ಈ ರೀತಿ ವಾಲಿತ್ತು. ಆದುದರಿಂದ ಅದನ್ನು ಅಲ್ಲೇ ಸರಿಪಡಿಸುವ ಬದಲು ಅಲ್ಲಿಂದ ಬಿಬಿಎಂಪಿಯವರು ತೆರವುಗೊಳಿಸಿದ್ದಾರೆ. ಹೊಸ ಬೋರ್ಡ್ ಶೀಘ್ರದಲ್ಲೇ ಹಾಕಲಿದ್ದಾರೆ’ ಎಂದು ಮಲ್ಲೇಶ್ವರಂ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಮಾಹಿತಿ ನೀಡಿದ್ದಾರೆ.
ಇದೇ ರೀತಿಯ ಸಮಸ್ಯೆಗಳು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳ ಗಮನ ಸೆಳೆಯುವಂತೆ ಈ ದಿನ.ಕಾಮ್ ಮನವಿ ಮಾಡುತ್ತದೆ.