ಭಟ್ಕಳ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವ, ಶಿರಸಿ ಮಾರಿಕಾಂಬೆ ದೇವಸ್ಥಾನಕ್ಕೆ ಹೋಗುವ ಹೊರೆಯನ್ನು ಇಳಿಸುವ ಸಾಂಪ್ರದಾಯಿಕ ಸ್ಥಳವಾದ ‘ಮುರಿನಕಟ್ಟೆ’ಯನ್ನು ಕಿಡಿಗೇಡಿಗಳು ನಾಶಪಡಿಸಿದ್ದು, ಈ ಸಂಬಂಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬಿ.ಎನ್.ಎಸ್.ಎಸ್ ಕಾಯ್ದೆ ಕಲಂ 163 ರಂತೆ ಪ್ರತಿಬಂಧಕ ತಡೆಯಾಜ್ಞೆ (ನಿಷೇಧಾಜ್ಞೆ) ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವತಿಯಿಂದ ROW ವ್ಯಾಪ್ತಿಯಲ್ಲಿ ಲಭ್ಯವಿದ್ದ ಸರ್ಕಾರಿ ಜಮೀನಿನಲ್ಲಿ ಈ ಮುರಿನಕಟ್ಟೆಯನ್ನು ಕೆಂಪು ಕಲ್ಲಿನಿಂದ ಹೊಸದಾಗಿ ನಿರ್ಮಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಳ್ವೇಕೋಡಿ ಕಡಲ ತೀರದಲ್ಲಿ ದಾರುಣ ದುರಂತ: ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ
ಆದರೆ, ದಿನಾಂಕ 24-05-2026 ರಂದು ಯಾರೋ ಕಿಡಿಗೇಡಿಗಳು ಏಕಾಏಕಿ ಈ ಕಟ್ಟೆಯನ್ನು ನಾಶಪಡಿಸಿರುವುದು ಕಂಡುಬಂದಿದೆ. ಈ ಮುರಿನಕಟ್ಟೆಯು ದೇವಸ್ಥಾನದ ಕಟ್ಟಡವಾಗಿರದೆ, ಅಮ್ಮನವರ ಹೊರೆಯನ್ನು ಇಳಿಸುವ ಕಟ್ಟೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡಲಾಗುತ್ತಿದ್ದ ಮೂಲ ಸ್ಥಳವು ಯಾವುದೇ ಹಾನಿಗೊಳಗಾಗದೆ ಯಥಾಸ್ಥಿತಿಯಲ್ಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಹೊಸದಾಗಿ ಸ್ಥಳಾಂತರಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಕಟ್ಟೆಯನ್ನು ನಾಶಪಡಿಸಿದ ಕಿಡಿಗೇಡಿಗಳ ಮೇಲೆ ಈಗಾಗಲೇ ಕಾನೂನಿನಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




